ಹೆಚ್ಚುತ್ತಿರುವ ಹೃದಯ ಸ್ತಂಭನ..!!
ತ್ವರಿತ ಸಂಶೋಧನೆ, ಪರಿಹಾರ ಅಗತ್ಯ
ಕೋವಿಡ್ ಸೋಂಕು ಬಂದು ಹೋದ ನಂತರ ಹೃದಯಾಘಾತ ಮತ್ತು ಹೃದಯ ಸ್ತಂಭನ ಪ್ರಕರಣಗಳು ದೇಶದಲ್ಲಿ ಹೆಚ್ಚಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಇತ್ತೀಚೆಗೆ ಹೇಳಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವರದಿಗಳನ್ನು ಉಲ್ಲೇಖಿಸಿ ಕೇಂದ್ರ ಸಚಿವರು ಈ ಹೇಳಿಕೆ ನೀಡಿದ್ದಾರೆ. ಆರೋಗ್ಯ ಸಚಿವರ ಈ ಹೇಳಿಕೆ ಸಾರ್ವಜನಿಕರ ಮನಸ್ಸಿನಲ್ಲಿದ್ದ ಅನುಮಾನವನ್ನು ಇನ್ನಷ್ಟು ಗಟ್ಟಿ ಮಾಡಿದಂತಾಗಿದೆ...!!
ಮುಂದುವರಿದು ಆರೋಗ್ಯ ಸಚಿವರು, ಲಸಿಕೆಯ ಅಡ್ಡ ಪರಿಣಾಮದಿಂದ ಹೃದಯಾಘಾತ ಪ್ರಮಾಣ ಹೆಚ್ಚುತ್ತಿದೆ ಎಂಬುದಕ್ಕೆ ಯಾವುದೇ ಪ್ರಬಲ ಆಧಾರಗಳಿಲ್ಲ. ಈ ಬಗ್ಗೆ ಇನ್ನಷ್ಟು ವಿಸ್ತೃತ ಸಂಶೋಧನೆ ನಡೆಸಲಾಗುತ್ತಿದೆ. ಸಮಗ್ರ ಅಧ್ಯಯನದ ಬಳಿಕವಷ್ಟೇ ನೈಜ ಕಾರಣ ತಿಳಿದು ಬರಲಿದೆ ಎಂದು ಹೇಳಿದ್ದಾರೆ.
ಆದರೆ, ಹೆಚ್ಚುತ್ತಿರುವ ಹೃದಯಾಘಾತಗಳಿಗೆ ಲಸಿಕೆಯ ಅಡ್ಡ ಪರಿಣಾಮವೂ ಕಾರಣ ಎಂಬುದಕ್ಕೆ ಪ್ರಬಲ ಆಧಾರಗಳಿಲ್ಲದಿದ್ದರೂ ಜನರ ಮನಸ್ಸಿನಲ್ಲಿ ಮಾತ್ರ ಈ ಬಗ್ಗೆ ಗಟ್ಟಿಯಾದ ಅನುಮಾನ ಇರುವುದಂತೂ ಸತ್ಯ...!!
ಅಮೆರಿಕದಲ್ಲಿ ನಡೆಸಿದ ಅಧ್ಯಯನದ ವರದಿ ಪ್ರಕಾರ ಕೋವಿಡ್ ಅಪಾಯವು ವಯಸ್ಕರ ಪ್ರಕರಣಗಳಿಗೆ ಹೋಲಿಸಿದರೆ ಮಕ್ಕಳಲ್ಲಿ ಕಡಿಮೆ ಹಾಗೂ SARS-CoV-2 ವೈರಸ್ ಸೋಂಕಿಗೆ ಒಳಗಾದ ಕೆಲವು ಜನರು ಸೋಂಕಿನಿಂದ ದೀರ್ಘಕಾಲೀನ ಪರಿಣಾಮಗಳನ್ನು ಅನುಭವಿಸಬಹುದು. ಇದು ಕೆಲವು ತಿಂಗಳುಗಳವರೆಗೆ ಇರುತ್ತದೆ ಎಂದು ತಿಳಿದುಬಂದಿದೆ.
ಕೋವಿಡ್-19 ಓಮಿಕ್ರಾನ್ ಹಂತವನ್ನು ಒಳಗೊಂಡಂತೆ ಸಾಂಕ್ರಾಮಿಕ ಉಲ್ಬಣದ ಸಮಯದಲ್ಲಿ ಹೃದಯಾಘಾತದಿಂದ ಸಾವುಗಳು ಗಮನಾರ್ಹವಾಗಿ ಏರಿದೆ ಎಂದು ಅಮೆರಿಕದ ಸೆಡರ್ಸ್ ಸಿನೈನಲ್ಲಿರುವ ಸ್ಮಿಡ್ ಹಾರ್ಟ್ ಇನ್‌ಸ್ಟ್ಟಿಟ್ಯೂಟ್ ವರದಿ ಮಾಡಿದೆ.
ಇತ್ತೀಚೆಗೆ ಪೀರ್ ರಿವ್ಯೆಡ್ ಜರ್ನಲ್ ಆಫ್ ಮೆಡಿಕಲ್ ವೈರಾಲಜಿಯಲ್ಲಿ ಹೊಸ ಅಧ್ಯಯನ ವರದಿಯೊಂದು ಪ್ರಕಟವಾಗಿದ್ದು ಅದರ ಪ್ರಕಾರ ಹೃದಯಾಘಾತದ ಸಾವಿನ ಪ್ರಮಾಣವು ತೀವ್ರ ತಿರುವು ಪಡೆದುಕೊಂಡಿದೆ. ವರದಿಯಾದ ಮತ್ತೊಂದು ಆವಿಷ್ಕಾರದ ಪ್ರಕಾರ ಕೋವಿಡ್ ನಂತರ 25-44 ವರ್ಷ ವಯಸ್ಸಿನವರಲ್ಲಿ ಹೃದಯಾಘಾತ ಗಮನಾರ್ಹ ಹೆಚ್ಚಳವಾಗಿದೆ...!
ಆದರೆ, ವೃತ್ತಿನಿರತ ವೈದ್ಯಕೀಯ ಸಮೂಹ ಕೊರೋನದಿಂದಲೇ ಹೃದಯಾಘಾತ ಮತ್ತು ಹೃದಯ ಸ್ತಂಭನ ಪ್ರಕರಣಗಳು ಹೆಚ್ಚುತ್ತಿವೆ ಎಂಬುವುದನ್ನು ಒಪ್ಪುವುದಿಲ್ಲ. ಕೊರೋನಕ್ಕೂ ಹೃದಯಾಘಾತದಿಂದ ಸಾವುಗಳಾಗುತ್ತಿರುವುದಕ್ಕೂ ನೇರ ಸಂಬಂಧವಿಲ್ಲ, ಇದಕ್ಕೆ ಬೇರೆಯದೇ ಕಾರಣಗಳಿರಬಹುದು ಎಂದು ಪ್ರತಿಪಾದಿಸುತ್ತಾರೆ.
ಇತ್ತೀಚೆಗೆ ಹೃದಯಾಘಾತದಿಂದ ಸಾವುಗಳು ಹೆಚ್ಚಾಗಲು ಬಿಪಿ, ಶುಗರ್, ಒತ್ತಡದ ಜೀವನ ಶೈಲಿ, ಅನುವಂಶಿಯತೆ, ಬದಲಾದ ಆಹಾರ ಪದ್ಧತಿ, ತೂಕ ಹೆಚ್ಚಳ ಹಾಗೂ ಸಮರ್ಪಕ ವ್ಯಾಯಾಮ ಮಾಡದಿರುವುದು ಮುಂತಾದ ಕಾರಣಗಳಿಂದ ಹೃದಯಾಘಾತಗಳು ಹೆಚ್ಚುತ್ತಿವೆ ಎಂದು ಖ್ಯಾತ ಹೃದಯರೋಗ ತಜ್ಞ, ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಹೇಳುತ್ತಾರೆ.
ಆದರೆ, ಈಗ ಹೃದಯಾಘಾತಗಳಿಗೆ ಸಾವೀಗೀಡಾದವರ ಬಗ್ಗೆ ಒಂದು ಅವಲೋಕನ ಮಾಡಿದರೆ ಯಾವುದೇ ರೋಗ ರುಜಿನಗಳಿಲ್ಲದ, ಅತ್ಯಂತ ಚಟುವಟಿಕೆ ಭರಿತ, ಸದೃಢ ಮತ್ತು ಆರೋಗ್ಯವಂತ ಹಾಗೂ ಕೊರೋನ ಸೋಂಕಿಗೆ ಒಳಗಾಗದ ಯುವಕರು ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಯಾವುದೇ ಆರೋಗ್ಯ ಸಮಸ್ಯೆ ಇರದಿದ್ದ ಖ್ಯಾತ ಕನ್ನಡ ಚಿತ್ರ ನಟ ಪುನೀತ್ ರಾಜಕುಮಾರ್ 2021ರ ಅಕ್ಟೋಬರ್ 29ರಂದು ಬಲಿಯಾಗಿದ್ದು ಇದೇ ಹೃದಯ ಸ್ತಂಭನ ಸಮಸ್ಯೆಗೆ ಎಂಬುದನ್ನು ಕರ್ನಾಟಕದ ಜನ ಇನ್ನೂ ಮರೆತಿಲ್ಲ. ಇತ್ತೀಚೆಗಷ್ಟೇ ಪುನೀತ್ ಅವರ ಸಂಬಂಧಿಯೂ ಆದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಬ್ಯಾಂಕಾಕ್‌ಗೆ ಪ್ರವಾಸಕ್ಕೆ ಹೋಗಿದ್ದಾಗ ಅಕಾಲಿಕ ಸಾವಿಗೆ ಒಳಗಾಗಿದ್ದು ಕರುಳು ಹಿಂಡುವಂತಹದ್ದು. ಈ ಸಾವಿಗೆ ಹೃದಯ ಸ್ತಂಭನ ಕಾರಣವೆಂಬುದು ಬಹಳ ಚರ್ಚೆಯಾಗಿದೆ. ಇವು ಕೇವಲ ಎರಡು ಉದಾಹರಣೆಗಳಷ್ಟೇ.
ಇದೇ ರೀತಿ ಹಲವಾರು ಕಿರುತೆರೆ ಕಲಾವಿದರು ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ಕುಸಿದುಬಿದ್ದು ಅಸುನೀಗಿದ ಎಷ್ಟೋ ವರದಿಗಳು ಬಂದಿವೆ..! ಯಕ್ಷಗಾನ ಕಲಾವಿದರು ಕಲಾಪ್ರದರ್ಶನದ ಸಂದರ್ಭದಲ್ಲೇ ಉರುಳಿಬಿದ್ದು ಜೀವಬಿಟ್ಟ ಘಟನೆಗಳು ನಡೆದಿವೆ..! ದಷ್ಟಪುಷ್ಟವಾಗಿದ್ದ, ಆರೋಗ್ಯವಂತ ಕ್ರೀಡಾಪಟುಗಳು ಆಟವಾಡುವಾಗಲೇ ನೆಲಕ್ಕುರುಳಿ ಜೀವತೆತ್ತ ಹಲವು ಘಟನೆಗಳು ವರದಿಯಾಗಿವೆ...!!
ಇತ್ತೀಚೆಗಷ್ಟೇ ಮುಗಿದ ದಸರಾ ಹಬ್ಬದ ಸಂದರ್ಭದಲ್ಲಿ ಗುಜರಾತ್ ರಾಜ್ಯದಲ್ಲಿ 24 ಗಂಟೆಗಳಲ್ಲಿ 13 ವರ್ಷದ ಬಾಲಕ ಸೇರಿದಂತೆ 10 ಜನರು ಹೃದಯಾಘಾತದಿಂದ ಮೃತಪಟ್ಟಿರುವುದು ವರದಿಯಾಗಿದೆ. ವರದಿಯಾಗಿದ್ದು ಇಷ್ಟು, ವರದಿಯಾಗದ ಇನ್ನೂ ಎಷ್ಟೋ ಪ್ರಕರಣಗಳು ಯಾರ ಗಮನಕ್ಕೂ ಬರದೇ ಲೆಕ್ಕಕ್ಕೆ ಸಿಗದೆ ಹೋಗಿವೆ...!!
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸದೃಢ, ಆರೋಗ್ಯವಂತ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳಿಗೆ ಮೂಲವಾಗಿರುವ ಎಲ್ಲಾ ಕಾರಣಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಪರಿಹಾರ ಮಾರ್ಗಗಳನ್ನು ಸೂಚಿಸುವ ಕೆಲಸವನ್ನು ಐಸಿಎಂಆರ್ ಮತ್ತು ಕೇಂದ್ರ ಆರೋಗ್ಯ ಇಲಾಖೆ ಮಾಡಬೇಕಾಗಿದೆ. ಈ ಕೆಲಸ ತ್ವರಿತವಾಗಿ ಆದರೆ ಎಷ್ಟೋ ಅಮೂಲ್ಯ ಜೀವಗಳು ಉಳಿಯಲಿವೆ.