ಮಹಾರಾಷ್ಟ್ರದಲ್ಲಿ ಕೋವಿಡ್ ಹೊಸ ರೂಪಾಂತರ ಎರಿಸ್ ಪತ್ತೆ; ತಜ್ಞರು ಹೇಳುವುದೇನು?
Photo: PTI
ಮುಂಬೈ: ಹೊಸ ಕೋವಿಡ್ ರೂಪಾಂತರ EG.5.1 ಅಥವಾ ಎರಿಸ್ ಪ್ರಕರಣಗಳು ಬ್ರಿಟನ್ನಲ್ಲಿ ಹೆಚ್ಚುತ್ತಿದ್ದು, ಮಹಾರಾಷ್ಟ್ರದಲ್ಲಿ ಕೂಡಾ ಈ ರೂಪಾಂತರ ಕೋವಿಡ್ ಪ್ರಕರಣಗಳ ಅಲ್ಪಹೆಚ್ಚಳಕ್ಕೆ ಕಾರಣವಾಗಿದೆ. ಈ ಒಮಿಕ್ರಾನ್ ಪ್ರಬೇಧ ಮೊದಲ ಬಾರಿಗೆ ಮೇ ತಿಂಗಳಲ್ಲಿ ಪತ್ತೆಯಾಗಿತ್ತು ಹಾಗೂ ಜೂನ್ ಮತ್ತು ಜುಲೈ ತಿಂಗಳಲ್ಲಿ ಅಂಥ ಪರಿಣಾಮವನ್ನೇನೂ ಬೀರಿಲ್ಲ. ಆದಾಗ್ಯೂ ರಾಜ್ಯದ ಆರೋಗ್ಯ ಇಲಾಖೆ ಅಂಕಿ ಅಂಶಗಳ ಪ್ರಕಾರ, ಜುಲೈ ಅಂತ್ಯದ ವೇಳೆಗೆ 70ರಷ್ಟಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ಆಗಸ್ಟ್ 6ರಂದು 115ಕ್ಕೇರಿವೆ.
ಬ್ರಿಟನ್ನಲ್ಲಿ ವೃದ್ಧರು ಈ ಕೋವಿಡ್ ರೂಪಾಂತರ ಎರಿಸ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಆದರೂ ಅಂಥ ಭಯಪಡುವ ಅಗತ್ಯವೇನೂ ಇಲ್ಲ. ಇದರ ಮೇಲೆ ಹೆಚ್ಚಿನ ನಿಗಾ ಇಡಬೇಕಾದ್ದು ಅಗತ್ಯ ಎಂದು ತಜ್ಞರು ಹೇಳುತ್ತಾರೆ. ಈ ಹಿಂದಿನ ಸೋಂಕುಗಳಿಂದ ಪ್ರತಿರೋಧ ಶಕ್ತಿ ಕಡಿಮೆಯಾಗಿರುವುದು ಅಥವಾ ಲಸಿಕೆಯಿಂದ ಉಂಟಾದ ಪ್ರತಿರೋಧ ಶಕ್ತಿ ಕುಸಿದಿರುವುದು ಸೋಂಕು ಹೆಚ್ಚಳಕ್ಕೆ ಕಾರಣ. ಆದ್ದರಿಂದ ವೈರಸ್ ವಿರುದ್ಧದ ಹೋರಾಟಕ್ಕೆ ಮತ್ತೆ ಬೂಸ್ಟರ್ ಡೋಸ್ ಪಡೆಯುವುದು ಅಗತ್ಯ ಎನ್ನುವುದು ತಜ್ಞರ ಅಭಿಮತ.
"ಹೊಸ ಕೋವಿಡ್-19 ರೂಪಾಂತರ ಹಲವು ಅಂಶಗಳನ್ನು ಆಧರಿಸಿದೆ. ಅದರ ಪ್ರಸರಣ, ತೀವ್ರತೆ ಮತ್ತು ಲಸಿಕೆಗಳು ಎಷ್ಟು ಪರಿಣಾಮಕಾರಿ, ಅವತಿಗೆ ನೀಡಿದ ಚಿಕಿತ್ಸೆ ಮುಂತಾದ ಅಂಶಗಳೂ ಪ್ರಮುಖ. ವೈರಸ್ಗಳು ಕಾಲಾನುಕ್ರಮದಲ್ಲಿ ರೂಪಾಂತರ ಹೊಂದುತ್ತಲೇ ಇರುತ್ತವೆ. ಹೊಸ ಪ್ರಬೇಧವಾದ ಎರಿಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ನಿಗಾ ವಹಿಸಿದೆ. ಭಾರತ ಕೂಡಾ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಕೋವಿಡ್ಗೆ ಸೂಕ್ತ ಎನಿಸಿದ ನಡವಳಿಕೆಗಳು ಹಿಂದೆ ಸರಿದಿವೆ ಹಾಗೂ ಲಸಿಕೆಯ ಪ್ರತಿರೋಧ ಶಕ್ತಿ ಕ್ಷೀಣಿಸಿರುವ ಸಾಧ್ಯತೆ ಇದೆ. ಮತ್ತೆ ಸಿಲುಕಿಕೊಂಡರೆ ಅದು ವಿನಾಶಕಾರಿಯಾದೀತು ಎಂದು ಫರೀದಾಬಾಧ್ನ ಫೋರ್ಟಿಸ್ ಎಸ್ಕಾಟ್ರ್ಸ್ ಆಸ್ಪತ್ರೆಯ ತಜ್ಞ ವೈದ್ಯ ಡಾ.ರವಿಶಂಕರ್ ಝಾ ಹೇಳುತ್ತಾರೆ.
ಮುಂಬೈನಲ್ಲಿ ಕೆಲವೇ ಪ್ರಕರಣಗಳಿದ್ದು, ಇದರ ಧನಾತ್ಮಕತೆ ದರ ಕಡಿಮೆ ಇರುವುದರಿಂದ ಹಾಗೂ ಪ್ರಕರಣಗಳು ದಿಢೀರನೇ ಹೆಚ್ಚದ ಕಾರಣ ಈ ಬಗ್ಗೆ ಭಾರತ ಹೆಚ್ಚು ಆತಂಕಪಡುವ ಅತ್ಯ ಇಲ್ಲ ಎನ್ನುವುದು ಗುರುಗ್ರಾಮದ ಸಿ.ಕೆ.ಬಿರ್ಲಾ ಆಸ್ಪತ್ರೆಯ ವೈದ್ಯ ಡಾ.ಕುಲದೀಪ್ ಕುಮಾರ್ ಗ್ರೋವರ್ ಅವರ ಅಭಿಪ್ರಾಯ.