ಪೌಷ್ಟಿಕಾಂಶದ ಸೂಪರ್ ಸ್ಟಾರ್: ಬೇಳೆಕಾಳುಗಳ ಪಂಚ ಪ್ರಯೋಜನಗಳು
ಸಾಂದರ್ಭಿಕ ಚಿತ್ರ.| Photo: NDTV
ಆರೋಗ್ಯ ವೃದ್ಧಿಯ ವಿಚಾರಕ್ಕೆ ಬಂದಾಗ ಪೌಷ್ಟಿಕ ಜಗತ್ತಿನಲ್ಲಿ ಬೇಳೆಕಾಳು ಸೂಪರ್ ಹೀರೊ ಎನಿಸಿಕೊಂಡಿದೆ. ಇದು ನಿಡುವ ವಿಶಿಷ್ಟ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳುವುದು ಅಗತ್ಯ ಎನ್ನುತ್ತಾರೆ ಪೌಷ್ಟಿಕತಜ್ಞ ಲೊವನೀತ್ ಬಾತ್ರಾ.
ಮಧುಮೇಹ ಇರುವವರಿಗೆ ಅಧಿಕ ನಾರಿನ ಅಂಶ ಮತ್ತು ಕಡಿಮೆ ಕಾರ್ಬೊಹೈಡ್ರೇಟ್ ಅಂಶವಿರುವ ಬೇಳೆಕಾಳುಗಳು ಹೆಚ್ಚಿನ ಪ್ರಯೋಜನಕಾರಿ. ಇದು ಆರೋಗ್ಯಕರ ರಕ್ತದ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್ ಮಟ್ಟ ಕಾಪಾಡಲು ಸಹಕಾರಿ. ಇದರ ಜತೆಗೆ ಬೇಳೆಕಾಳುಗಳು ಪೈಥೊಸ್ಟ್ರೊಷನ್ಗಳನ್ನು ಹೊಂದಿದ್ದು, ಇದು ಹಾರ್ಮೋನ್ ಸಂಬಂಧಿ ಕ್ಯಾನ್ಸರ್ಗಳಾದ ಸ್ತನ ಕ್ಯಾನ್ಸರ್ ಮತ್ತು ಜನನೇಂದ್ರಿಯ ಕ್ಯಾನ್ಸರ್ ತಡೆಗೆ ಪೂರಕವಾಗಿ ಕೆಲಸ ಮಾಡುತ್ತದೆ.
ಬೇಳೆ ಕಾಳುಗಳು ಕಡಿಮೆ ಕ್ಯಾಲೋರಿ ಹೊಂದಿರುವುದರಿಂದ ತೂಕ ಕಳೆದುಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಹಾರ. ಇದು ಸಂಕೀರ್ಣ ಕಾರ್ಬೋಹೈಡ್ರೇಟ್ ಮತ್ತು ನಾರಿನ ಅಂಶದಿಂದ ಕೂಡಿದ್ದು, ಇವು ನಿಧಾನವಾಗಿ ಜೀರ್ಣವಾಗುತ್ತವೆ ಹಾಗೂ ತೃಪ್ತಿಯ ಭಾವನೆಗೆ ಕಾರಣವಾಗುತ್ತವೆ. ಇದು ನಿಧಾನವಾಗಿ ಸಕ್ತಿಯ ದಹಿಸುವಿಕೆಗೆ ಕಾರಣವಾಗುತ್ತದೆ ಹಾಗೂ ಇದರ ಕಬ್ಬಿಣದ ಅಂಶ ಇಡೀ ದೇಹಕ್ಕೆ ಆಮ್ಲಜನಕವನ್ನು ಸಾಗಿಸಲು, ದೇಹದ ಚಯಾಪಚಯ ಕ್ರಿಯೆಗೆ ಕೊಡುಗೆ ನೀಡುತ್ತದೆ.
ಬೇಳೆಕಾಳುಗಳ ಇನ್ನೊಂದು ವಿಶೇಷ ಗುಣವೆಂದರೆ ಅಧಿಕ ನಾರಿನ ಅಂಶ. ಇದು ಜೀರ್ಣಸಂಬಂಧಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. ಇದು ರಕ್ತದ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಲು ಮತ್ತು ಮನುಷ್ಯನ ಕರುಳಿನಲ್ಲಿ ಕೊಲೆಸ್ಟ್ರಾಲ್ ಬಂಧಿಸಲು ಕೂಡಾ ಕಾರಣವಾಗುತ್ತದೆ.
ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವ ಜತೆಗೆ ಭೂಮಿಯ ಆರೋಗ್ಯಕ್ಕೂ ಸಹಕಾರಿ. ಇದು ಇಂಗಾಲದ ಹೆಜ್ಜೆಗುರುತು ಕಡಿಮೆ ಮಾಡಲು ನೆರವಾಗುತ್ತದೆ. ಇದು ಸಾರಜನಕವನ್ನು ಹಿಡಿದಿಡುವ ಬೆಳೆಯಾಗಿದ್ದು, ಸಹಜವಾಗಿಯೇ ಮಣ್ಣನ್ನು ಫಲವತ್ತಾಗಿಸಲು ಕಾರಣವಾಗಿ, ಕೃತಕ ರಸಗೊಬ್ಬರ ಅಗತ್ಯತೆಯನ್ನು ನಿವಾರಿಸುತ್ತದೆ. ಹೀಗೆ ಇಂಗಾಲದ ಹೆಜ್ಜೆಗುರುತು ಕಡಿಮೆ ಮಾಡುವಲ್ಲಿ ಬೇಳೆಕಾಳುಗಳು ಸಹಕಾರಿ.
ಕೃಪೆ: hindustantimes.com