ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ದಂತ ವೈದ್ಯರ ಪಾತ್ರ
ಇಂದು ರಾಷ್ಟ್ರೀಯ ದಂತ ವೈದ್ಯರ ದಿನ
ಒಂದು ಆರೋಗ್ಯಪೂರ್ಣ ಸಮಾಜದ ನಿರ್ಮಾಣದಲ್ಲಿ ಆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಪಾಲುದಾರನಾಗುತ್ತಾನೆ ಮತ್ತು ಹೊಣೆಗಾರನಾಗುತ್ತಾನೆ. ಅಂತಹ ಪ್ರತೀ ಪ್ರಜೆಗಳ ಆರೋಗ್ಯವನ್ನು ಕಾಪಾಡುವಲ್ಲಿ ವೈದ್ಯರು ಬಹುಮುಖ್ಯ ಭೂಮಿಕೆ ವಹಿಸುತ್ತಾರೆ. ಅದು ಅಲೋಪತಿ, ಆಯುರ್ವೇದ, ಹೋಮಿಯೋಪತಿ ಇತ್ಯಾದಿಯ ಕುಟುಂಬ ವೈದ್ಯರೇ ಇರಬಹುದು ಅಥವಾ ದಂತ ವೈದ್ಯರೂ ಇರಬಹುದು. ಒಟ್ಟಿನಲ್ಲಿ ವೈದ್ಯರು ಒಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ನೇರವಾದ ಪರಿಣಾಮ ಬೀರುವ ವ್ಯಕ್ತಿ. ಇನ್ನು ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಹಲ್ಲಿನ ಆರೋಗ್ಯವೂ ಅತೀ ಅವಶ್ಯಕ. ಬಾಯಿ ಎನ್ನುವುದು ನಮ್ಮ ದೇಹದ ಪ್ರವೇಶ ದ್ವಾರವಿದ್ದಂತೆ. ಜೀರ್ಣಾಂಗ ವ್ಯೆಹದ ಹೊಸ್ತಿಲೇ ನಮ್ಮ ಬಾಯಿ ಆಗಿರುತ್ತದೆ. ಇಂತಹ ಬಾಯಿಯಲ್ಲಿ ಆರೋಗ್ಯವಂತ ಹಲ್ಲುಗಳು ಇಲ್ಲದಿದ್ದಲ್ಲಿ ಜೀರ್ಣಾಂಗ ವ್ಯವಸ್ಥೆಯ ಹಳಿ ತಪ್ಪುವುದಂತೂ ಖಂಡಿತಾ. ಹಲ್ಲಿನ ಆರೋಗ್ಯ ಚೆನ್ನಾಗಿದ್ದಲ್ಲಿ ಮಾತ್ರ ಮನುಷ್ಯನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಪರಿಪೂರ್ಣವಾಗಲು ಸಾಧ್ಯವಾಗುತ್ತದೆ. ಈ ಕಾರಣದಿಂದ ಹಲ್ಲುಗಳ ಆರೋಗ್ಯ ನಿರ್ಲಕ್ಷಿಸಿದರೆ, ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುವುದು ಸಹಜ.
ದಂತ ವೈದ್ಯರ ಪಾತ್ರ
ಬಾಯಿ ಎನ್ನುವುದು ಬ್ಯಾಕ್ಟೀರಿಯಗಳ ಗುಂಡಿ. ಲಕ್ಷಾಂತರ ಬ್ಯಾಕ್ಟೀರಿಯಗಳು ಮತ್ತು ವೈರಾಣುಗಳು ಬಾಯಿಯಲ್ಲಿ ಮನೆ ಮಾಡಿ ಸಂಸಾರ ನಿರ್ವಹಣೆ ಮಾಡಿಕೊಂಡಿರುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಕುಸಿದಾಗ, ಅವುಗಳು ತಮ್ಮ ನಿಜರೂಪ ತೋರಿಸುತ್ತದೆ ಮತ್ತು ರೋಗ ಬರುವಂತೆ ಮಾಡುತ್ತದೆ. ಒಬ್ಬ ರೋಗಿ ಬಾಯಿ ತೆರೆದಾಗ, ದಂತವೈದ್ಯರು ಆತನ ಬಾಯಿಯಲ್ಲಿ ಬರೀ ಹಲ್ಲನ್ನು ಮಾತ್ರ ನೋಡುವುದಿಲ್ಲ. ರೋಗಿಯ ಬಾಯಿಯಲ್ಲಿ ಹತ್ತು ಹಲವಾರು ರೋಗದ ಲಕ್ಷಣಗಳನ್ನು ಗುರುತಿಸಿ ರೋಗವನ್ನು ಪತ್ತೆ ಹಚ್ಚುತ್ತಾರೆ. ಹಲವು ರೋಗಗಳು ಒಂದಲ್ಲ ಒಂದು ರೀತಿಯಲ್ಲಿ ಬೇರೆ ಬೇರೆ ರೂಪಗಳಲ್ಲಿ ಬಾಯಿಯಲ್ಲಿ ಪ್ರಕಟಗೊಳ್ಳುತ್ತವೆ.
ಉದಾಹರಣೆಗೆ ಮಧುಮೇಹ ರೋಗದಲ್ಲಿ ಹಲ್ಲಿನ ವಸಡಿನ ಸುತ್ತ ಕೀವು ತುಂಬಿ, ಹಲ್ಲಿನ ಸುತ್ತಲಿನ ದಂತದಾರ ಎಲುಬು ಕರಗಿ ಹಲ್ಲು ಅಲುಗಾಡುತ್ತದೆ ಮತ್ತು ಬಾಯಿ ವಿಪರೀತ ವಾಸನೆ ಹೊಂದಿರುತ್ತದೆ. ರಕ್ತಹೀನತೆ ಇರುವವರಲ್ಲಿ ಬಾಯಿ ಒಳ ಭಾಗದ ಪದರ ಬಿಳಿಚಿಕೊಂಡಿರುತ್ತದೆ. ಬಾಯಿ ಕ್ಯಾನ್ಸರ್ ಇದ್ದಲ್ಲಿ ಬಾಯಿಯೊಳಗೆ ಗಡ್ಡೆ ಅಥವಾ ಒಣಗದ ಹುಣ್ಣು ಇರುತ್ತದೆ. ರಕ್ತದ ಕ್ಯಾನ್ಸರ್ ಇದ್ದಲ್ಲಿ ವಸಡಿನಲ್ಲಿ ರಕ್ತ ಒಸರುತ್ತಿರುತ್ತದೆ. ವಿಟಮಿನ್ ಸಿ ಕೊರತೆ ಇದ್ದಲ್ಲಿ ವಸಡಿನಲ್ಲಿ ರಕ್ತಸ್ರಾವ, ವಿಟಮಿನ್ ಬಿ ಕಾಂಪ್ಲೆಕ್ಸ್ ಕೊರತೆ ಇದ್ದಲ್ಲಿ ಬೋಳು ನಾಲಗೆ ಇರುತ್ತದೆ. ಹೀಗೆ ಇನ್ನೂ ಹಲವು ರೋಗಗಳನ್ನು ಪತ್ತೆ ಹಚ್ಚಬಹುದು.
ಬದಲಾದ ದಂತ ಚಿಕಿತ್ಸೆಯ ಸ್ವರೂಪ
ಹಿಂದಿನ ಕಾಲದಲ್ಲಿ ದಂತ ವೈದ್ಯರು ಎಂದರೆ ಕೇವಲ ಹಲ್ಲು ತೆಗೆಯಲು ಮಾತ್ರ ಸೀಮಿತವಾಗಿದ್ದರು. ಆದರೆ ಈಗ ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಆವಿಷ್ಕಾರಗಳು ಬಂದಿವೆ. ಮೂರನೇ ದವಡೆ ಹಲ್ಲಿನ ಒಳಭಾಗ ದಂತ ಮಜ್ಜೆಯ ಒಳಗಿನ ಜೀವಕೋಶಗಳಿಂದ ಹೊಸತಾದ ಹಲ್ಲನ್ನು ಸೃಷ್ಟಿ ಮಾಡುವಲ್ಲಿಯವರೆಗೆ ದಂತ ವೈದ್ಯ ವಿಜ್ಞಾನ ಬೆಳೆದಿದೆ. ಈಗ ದಂತ ಚಿಕಿತ್ಸೆ ಕೇವಲ ರೋಗ ಚಿಕಿತ್ಸೆ ಪದ್ಧತಿಯಾಗಿ ಉಳಿಯದೆ, ರೋಗ ಬರದಂತೆ ತಡೆಯುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದೆ. ನಿಯಮಿತವಾದ ದಂತ ತಪಾಸಣೆ, ದಂತ ಶುಚಿಗೊಳಿಸುವಿಕೆ, ಹಲ್ಲು ತುಂಬಿಸುವಿಕೆಯಿಂದ ಹಲ್ಲು ಹುಳುಕಾಗದಂತೆ ಮಾಡುವ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಲಾಗಿದೆ. ಜೊತೆಗೆ ಸೌಂದರ್ಯ ವರ್ಧಕ ಚಿಕಿತ್ಸೆಯಾಗಿ ಬದಲಾಗಿದೆ. ಹಲ್ಲಿನ ಅಂದವನ್ನು ವಿನೀರ್, ಕಿರೀಟ(ಕ್ರೌನ್) ಮತ್ತು ಹೊಸತಾದ ಸಿಮೆಂಟ್‌ಗಳಿಂದ ತುಂಬಿಸಿ, ವ್ಯಕ್ತಿಯ ನಗುವಿನ ವಿನ್ಯಾಸವನ್ನೇ ಬದಲಿಸಿ, ಆತನ ಜೀವನದ ದೃಷ್ಟಿಕೋನವನ್ನೇ ಬದಲಾಯಿಸುವ ಕಾಲದಲ್ಲಿ ನಾವಿದ್ದೇವೆ. ಒಟ್ಟಿನಲ್ಲಿ ಸುಂದರ ಸದೃಢವಾದ ಹಲ್ಲುಗಳು ಮನುಷ್ಯನ ಆತ್ಮ ವಿಶ್ವಾಸದ ಮತ್ತು ವ್ಯಕ್ತಿತ್ವದ ಪ್ರತೀಕ. ಸುಂದರವಾಗಿ ನಗಲು, ಆಹಾರ ಜಗಿಯಲು, ಸ್ಪಷ್ಟವಾಗಿ ಮಾತನಾಡಲು ಮತ್ತು ದೇಹದ ಆರೋಗ್ಯದ ಸಮತೋಲನವನ್ನು ಕಾಪಾಡಲು ಹಲ್ಲಿನ ಆರೋಗ್ಯ ಅತೀ ಅವಶ್ಯಕ. ಈ ನಿಟ್ಟಿನಲ್ಲಿ ವ್ಯಕ್ತಿಯ ಆರೋಗ್ಯ ಪಾಲನೆಯಲ್ಲಿ ದಂತ ವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.