ಮೊಟ್ಟೆಗಳ ಏಳು ಪ್ರಮುಖ ಆರೋಗ್ಯ ಲಾಭಗಳು
Photo: freepik.com
ಮೊಟ್ಟೆಯ ಏಳು ಪ್ರಮುಖ ಆರೋಗ್ಯ ಲಾಭಗಳು ಇಲ್ಲಿವೆ:
► ಒಳ್ಳೆಯ ಕೊಲೆಸ್ಟ್ರಾಲ್ ಎಂದೂ ಕರೆಯಲ್ಪಡುವ ಹೆಚ್ಚಿನ ಸಾಂದ್ರತೆಯ ಲಿಪೊಪ್ರೋಟಿನ್ ಮಟ್ಟವನ್ನು ಹೆಚ್ಚಿಸಲು ಮೊಟ್ಟೆಯು ನೆರವಾಗುತ್ತದೆ, ಹೀಗಾಗಿ ಮೊಟ್ಟೆಗಳು ಹೃದ್ರೋಗ ಕಾಯಿಲೆಯನ್ನುಂಟು ಮಾಡುವ ಅಪಾಯವನ್ನು ಹೊಂದಿಲ್ಲ ಎಂದೇ ಹೇಳಬಹುದು. ಕಡಿಮೆ ಸಾಂದ್ರತೆಯ ಲಿಪೊಪ್ರೋಟಿನ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಹೃದಯದ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ.
► ಮೊಟ್ಟೆಯಲ್ಲಿರುವ ಹಳದಿ ಭಾಗವು ವಿಟಾಮಿನ್ ಡಿ ಅನ್ನು ಒಳಗೊಂಡಿರುತ್ತದೆ, ಹೀಗಾಗಿ ವಿಟಾಮಿನ್ ಡಿ ಕೊರತೆಯಿರುವವರಿಗೆ ಮೊಟ್ಟೆಗಳನ್ನು ಸೇವಿಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಎರಡು ಮೊಟ್ಟೆಗಳು ದೈನಂದಿನ ವಿಟಾಮಿನ್ ಡಿ ಸೇವನೆಯ ಶೇ.82ರಷ್ಟು ಅಗತ್ಯವನ್ನು ಒದಗಿಸುತ್ತವೆ. ವಿಟಾಮಿನ್ ಡಿ ಕ್ಯಾಲ್ಸಿಯಂ ಮತ್ತು ರಂಜಕದ ಹೀರುವಿಕೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದ್ದು, ಮೂಳೆಗಳು ಮತ್ತು ಹಲ್ಲುಗಳ ಆರೋಗ್ಯವನ್ನು ಕಾಯ್ದುಕೊಳ್ಳಲು ಅದು ಅಗತ್ಯವಾಗಿದೆ. ವಿಟಮಿನ್ ಡಿ ಆರೋಗ್ಯಕರ ಸ್ನಾಯು ಕಾರ್ಯವನ್ನು ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.
► ಮೊಟ್ಟೆಗಳು ತುಲನಾತ್ಮಕವಾಗಿ ಕಡಿಮೆ ಕ್ಯಾಲರಿಗಳನ್ನು ಒಳಗೊಂಡಿದ್ದು,ಗುಣಮಟ್ಟದ ಪ್ರೋಟಿನ್ನ ಸಮೃದ್ಧ ಮೂಲವಾಗಿವೆ. ಹೀಗಾಗಿ ಅವು ತೂಕ ನಿರ್ವಹಣೆಗೆ ನೆರವಾಗುತ್ತವೆ. ಮೊಟ್ಟೆಗಳ ಸೇವನೆಯು ಊಟದ ಬಳಿಕ ನಮ್ಮಲ್ಲಿ ತೃಪಿಯ ಭಾವನೆಯನ್ನು ಮೂಡಿಸುವ,ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಮತ್ತು ಚಯಾಪಚಯ ಚಟುವಟಿಕೆಯನ್ನು ಉತ್ತೇಜಿಸುವ ಹಾರ್ಮೋನ್ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತದೆ. ಮೊಟ್ಟೆಗಳು ಶರೀರದಲ್ಲಿ ಗ್ಲುಕೋಸ್ ಮಟ್ಟಗಳ ಏರಿಳಿತವನ್ನು ಕಡಿಮೆಗೊಳಿಸಲು ನೆರವಾಗುತ್ತವೆ.
► ಮೊಟ್ಟೆಗಳು ಕೊಲೀನ್ನ ಸಮೃದ್ಧ ಮೂಲವಾಗಿರುವುದರಿಂದ ಅವುಗಳ ಸೇವನೆಯು ಶರೀರಕ್ಕೆ ದೈನಂದಿನ ಪೋಷಕಾಂಶಗಳನ್ನು ಒದಗಿಸುವಲ್ಲಿ ಅತ್ಯಂತ ಪರಿಣಾಮಕಾರಿ ಮತ್ತು ಸರಳ ಮಾರ್ಗವಾಗಿದೆ. ಕೊಲೀನ್ ಯಕೃತ್ತಿನಲ್ಲಿ ಉತ್ಪತ್ತಿಯಾಗುವ ಪ್ರಮುಖ ಪೋಷಕಾಂಶವಾಗಿದ್ದು,ಜೀವಕೋಶಗಳ ಸಾಮಾನ್ಯ ಕಾರ್ಯನಿರ್ವಹಣೆಗೆ ಅದು ಅಗತ್ಯವಾಗಿದೆ. ಗರ್ಭಾವಸ್ಥೆಯಲ್ಲಿ ಮಿದುಳು ಮತ್ತು ಬೆನ್ನುಹುರಿಯ ಬೆಳವಣಿಗೆಯಲ್ಲಿ ಹಾಗೂ ಶಿಶುವಿನಲ್ಲಿ ಅರಿವಿನ ಬೆಳವಣಿಗೆಯಲ್ಲಿಯೂ ಅದು ಪ್ರಮುಖ ಪಾತ್ರವನ್ನು ಹೊಂದಿದೆ. ಅಲ್ಲದೆ ವಯಸ್ಸಾದವರಲ್ಲಿ ಅರಿವಿನ ಕುಸಿತವನ್ನು ತಗ್ಗಿಸಲೂ ನೆರವಾಗುತ್ತದೆ.
► ಮೊಟ್ಟೆಗಳಲ್ಲಿರುವ ಒಮೇಗಾ-3 ಕೊಬ್ಬಿನಾಮ್ಲಗಳು ಜೀವಕೋಶಗಳ ಪೊರೆಗಳ ಕೆಲಸವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ ಮತ್ತು ಹೃದಯ,ಮಿದುಳು ಮತ್ತು ಕಣ್ಣುಗಳ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ನೆರವಾಗುತ್ತದೆ. ತೈಲಾಂಶವನ್ನು ಹೊಂದಿರುವ ಮೀನುಗಳೂ ಒಮೆಗಾ-3 ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲಗಳಾಗಿವೆಯಾದರೂ,ಮೀನನ್ನು ತಿನ್ನದ ಜನರಿಗೆ ಮೊಟ್ಟೆಗಳು ಈ ಆರೋಗ್ಯಕರ ಕೊಬ್ಬನ್ನು ಒದಗಿಸುವ ಉಪಯುಕ್ತ ಮೂಲಗಳಾಗಿವೆ.
► ಮೊಟ್ಟೆಗಳಲ್ಲಿ ವಿಟಾಮಿನ್ ಎ,ವಿಟಾಮಿನ್ ಇ ಮತ್ತು ಸೆಲೆನಿಯಮ್ನಂತಹ ಹಲವಾರು ವಿಟಾಮಿನ್ಗಳು ಮತ್ತು ಖನಿಜಗಳಿದ್ದು,ಇವೆಲ್ಲವೂ ಕಣ್ಣಿನ ಆರೋಗ್ಯ ಮತ್ತು ರೆಟಿನಾ ಕಾರ್ಯವನ್ನು ಬೆಂಬಲಿಸುವ ಪ್ರಮುಖ ಉತ್ಕರ್ಷಣ ನಿರೋಧಕಗಳಾಗಿವೆ ಮತ್ತು ವಯಸ್ಸಾದಂತೆ ದೃಷ್ಟಿ ಕ್ಷೀಣಗೊಳ್ಳುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿವೆ. ಮೊಟ್ಟೆಗಳಲ್ಲಿ ಸಮೃದ್ಧವಾಗಿರುವ ಲುಟೀನ್ ಮತ್ತು ಝಿಯಾಕ್ಸಾಂಥಿನ್ ಎಂಬ ಉತ್ಕರ್ಷಣ ನಿರೋಧಕಗಳು ಕಣ್ಣಿನ ಪೊರೆಗಳು ಮತ್ತು ಅಕ್ಷಿಪಟಲ ಅವನತಿಯಂತಹ ನೇತ್ರರೋಗಗಳ ಅಪಾಯವನ್ನು ತಗ್ಗಿಸುವಲ್ಲಿ ರಕ್ಷಣಾತ್ಮಕ ಪಾತ್ರವನ್ನು ವಹಿಸುತ್ತವೆ.
► ಮೊಟ್ಟೆಗಳು ಜೀರ್ಣವಾಗವ ಅತ್ಯುತ್ತಮ ಗುಣಮಟ್ಟದ ಪ್ರೋಟಿನ್,ಅಗತ್ಯ ವಿಟಾಮಿನ್ಗಳು ಮತ್ತು ಖನಿಜಗಳ ಮೂಲವಾಗಿದ್ದು,ವಯಸ್ಸಾದವರ ಆಹಾರದಲ್ಲಿ ಸೇರ್ಪಡೆಗೊಳ್ಳಲು ಸೂಕ್ತವಾಗಿವೆ. ವಯಸ್ಸಾದವರಲ್ಲಿ ಪೌಷ್ಟಿಕಾಂಶ ಸೇವನೆಯನ್ನು ಹೆಚ್ಚಿಸಲು ಮತ್ತು ಹಲವು ಕೊರತೆಗಳು ಮತ್ತು ಸ್ಥಿತಿಗಳನ್ನು ತಗ್ಗಿಸುವಲ್ಲಿ ಮೊಟ್ಟೆಗಳ ಸೇವನೆ ಸರಳವಾದ ಉಪಾಯವಾಗಿದೆ. ಸ್ನಾಯುಗಳ ಕಾರ್ಯವನ್ನು ಬೆಂಬಲಿಸುವ ಅಮಿನೋ ಆ್ಯಸಿಡ್ ಲ್ಯೂಸಿನ್ ಕೂಡ ಮೊಟ್ಟೆಯಲ್ಲಿ ಗಮನಾರ್ಹ ಪ್ರಮಾಣದಲ್ಲಿದೆ.
ಕೃಪೆ: thequint.com