ಕ್ಯಾನ್ಸರ್ ನಿಯಂತ್ರಣದ ಸವಾಲು
ಇಂದು ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ
Photo: freepik
ಕ್ಯಾನ್ಸರ್ ರೋಗ ಮನುಕುಲದ ಬಹುದೊಡ್ಡ ಶತ್ರು. ಅನಾದಿ ಕಾಲದಿಂದಲೂ ಈ ರೋಗ ಮನುಕುಲವನ್ನು ಕಾಡುತ್ತಿದೆ.
ರಾಷ್ಟ್ರೀಯ ಕ್ಯಾನ್ಸರ್ ನಿಯಂತ್ರಣ ಕಾರ್ಯಕ್ರಮ ಭಾರತದಲ್ಲಿ 1975ರಲ್ಲಿ ಆರಂಭವಾಗಿದೆ. ಆದರೆ ವಿಪರ್ಯಾಸವೆಂದರೆ ವರ್ಷವೊಂದರಲ್ಲಿ ಸುಮಾರು 10 ಲಕ್ಷ ಮಂದಿ ಈ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾರೆ ಮತ್ತು ಇದರಲ್ಲಿ ಮೂರನೇ ಎರಡರಷ್ಟು ಮಂದಿ ಮುಂದುವರಿಕೆ ಹಂತದಲ್ಲಿ ಕ್ಯಾನ್ಸರ್ ಗುರುತಿಸಲ್ಪಟ್ಟು ಸಾವಿನಲ್ಲಿ ಪರ್ಯಾವಸಾನವಾಗುತ್ತದೆ. ಹಾಗಾಗಿ ಜನರಲ್ಲಿ ಕ್ಯಾನ್ಸರ್ ಬಗ್ಗೆ ವಿಶೇಷ ಜಾಗೃತಿ ಮೂಡಿಸುವ ಅಗತ್ಯ ಇದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2014ರಲ್ಲಿ ಪ್ರತಿವರ್ಷ ನವೆಂಬರ್ 7ರಂದು ‘ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ’ ಎಂಬ ಆಚರಣೆಯನ್ನು ಜಾರಿಗೆ ತಂದು ಜನರನ್ನು ಎಚ್ಚರಿಸುವ ಅಭಿಯಾನವನ್ನು ಆರಂಭಿಸಲಾಗಿದೆ.
ಕ್ಯಾನ್ಸರ್ ಅಂದ ಕೂಡಲೇ ನಾವೆಲ್ಲಾ ಒಮ್ಮೆಲೇ ದಿಗಿಲುಗೊಳ್ಳುತ್ತೇವೆ. ಹಿಂದಿನ ಕಾಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪರಿಣಿತ ವೈದ್ಯರ ಸೇವೆ ದುರ್ಲಭವಾಗಿತ್ತು. ಬಡತನ, ಅನಕ್ಷರತೆ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ರೋಗವನ್ನು ಪತ್ತೆ ಹಚ್ಚುವ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗಿರುತ್ತಿತ್ತು. ಆ ಕಾರಣದಿಂದಲೇ ಕ್ಯಾನ್ಸರ್ ಗುಣಪಡಿಸಲಾಗದ ಕಾಯಿಲೆ ಎಂಬ ಹಣೆಪಟ್ಟಿ ಪಡೆದು ಕೊಂಡಿತು. ಆದರೆ ತಂತ್ರಜ್ಞಾನ ಪರಿಣಿತ ವೈದ್ಯರ ಲಭ್ಯತೆ ಮತ್ತು ಜನರ ತಿಳುವಳಿಕೆಯ ಮಟ್ಟ ಏರಿದಂತೆ ಜನರಲ್ಲಿ ಅರ್ಬುದ ರೋಗದ ಬಗ್ಗೆ ಹೆಚ್ಚಿನ ಅರಿವು ಮೂಡತೊಡಗಿದೆ ಮತ್ತು ಈಗಿನ ಕಾಲಘಟ್ಟದಲ್ಲಿ ಕ್ಯಾನ್ಸರ್ ಪ್ರಾರಂಭಿಕ ಹಂತದಲ್ಲಿ ಗುರುತಿಸಿದಲ್ಲಿ ಪರಿಣಾಮಕಾರಿ ಔಷಧಿ, ಚಿಕಿತ್ಸೆ ನೀಡಿ ಸಂಪೂರ್ಣವಾಗಿ ಗುಣಪಡಿಸಬಹುದು. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಗೆದ್ದು ಸುಖ ಜೀವನ ನಡೆಸುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಸಮಾಧಾನಕರ ಅಂಶ. ಅಕ್ಷರತೆ, ಬಡತನ ನಿರ್ಮೂಲನ, ಗುಣಮಟ್ಟದ ವೈಜ್ಞಾನಿಕ ಪರಿಷ್ಕಾರಗಳು ಮತ್ತು ತಾಂತ್ರಿಕ ಹಾಗೂ ವೈಜ್ಞಾನಿಕ ಕೌಶಲತೆಗಳಿಂದ ಆರಂಭಿಕ ಹಂತದಲ್ಲಿ ಕ್ಯಾನ್ಸರ್ ರೋಗ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಜನರಲ್ಲಿ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದು ಎಂಬ ಭಾವನೆ ಮೂಡಿಸುವಲ್ಲಿ ವೈದ್ಯಕೀಯ ಜಗತ್ತು ಯಶಸ್ಸು ಕಂಡಿದೆ ಎಂದರೂ ತಪ್ಪಲ್ಲ. ಆದರೂ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮತ್ತು ಅರಿವು ಮೂಡಿಸುವ ಪ್ರಯತ್ನ ನಡೆಯಬೇಕಾಗಿದೆ. ಯಾಕೆಂದರೆ ಹಿಂದಿನ ಕಾಲದಲ್ಲಿ ಕ್ಯಾನ್ಸರ್ ಇಳಿ ವಯಸ್ಸಿನ ರೋಗವಾಗಿತ್ತು. 60-70ರ ಹರೆಯದಲ್ಲಿ ಕಾಣಿಸಿಕೊಳ್ಳುತ್ತಿದ ರೋಗ, ಈಗೀಗ 30-40 ಹರೆಯದಲ್ಲಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರ. ವಾತಾವರಣದಲ್ಲಿನ ವ್ಯತ್ಯಾಸ, ಹವಾಮಾನ ವೈಪರೀತ್ಯ, ಆಹಾರ ಪದ್ಧತಿಯಲ್ಲಿನ ಬದಲಾವಣೆ, ಕಲುಷಿತಗೊಂಡ ನೀರು, ಗಾಳಿ, ಆಹಾರ ಮತ್ತು ವಿಪರೀತ ಒತ್ತಡದ ಜೀವನದಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಬೀಡಿ, ಸಿಗರೇಟು, ಗುಟ್ಕಾ ಮುಂತಾದ ದುಶ್ಚಟಗಳ ಸಹವಾಸದಿಂದಾಗಿ ಹೆಚ್ಚು ಹೆಚ್ಚು ಯುವಜನತೆ 30-40ರ ಆಸುಪಾಸಿನಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುವುದು ಆತಂಕಕಾರಿ.
ವಿಶ್ವದಾದ್ಯಂತ ವರ್ಷದಲ್ಲಿ 15 ಮಿಲಿಯನ್ ಮಂದಿ ಕ್ಯಾನ್ಸರ್ನಿಂದಾಗಿ ಬಳಲುತ್ತಿದ್ದಾರೆ ಮತ್ತು 8 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ. ಬಾಯಿ, ಗಂಟಲು, ಶ್ವಾಸಕೋಶ, ಕರುಳಿನ ಕ್ಯಾನ್ಸರ್ ಮತ್ತು ಪ್ರೊಸ್ಟೆಟ್ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚಾಗಿರುತ್ತದೆ. ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಜನನಾಂಗ (ಸರ್ವಿಕ್ಸ್ ಅಂದರೆ ಗರ್ಭಕೋಶದ ಕುತ್ತಿಗೆ)ದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಕ್ಯಾನ್ಸರನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಮುಂದುವರಿದ ರಾಷ್ಟ್ರಗಳಲ್ಲಿ ಒಂದು ಅಥವಾ 2ನೇ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾರೆ. ಆದರೆ ಭಾರತದಂತಹ ಇನ್ನೂ ಮುಂದುವರಿಯುತ್ತಿರುವ ದೇಶಗಳಲ್ಲಿ ಜನರು ಬಡತನ, ಮೂಢನಂಬಿಕೆ, ಅನಕ್ಷರತೆ, ಅಜ್ಞಾನ ಮತ್ತು ಮೂಲಭೂತ ಸೌಕರ್ಯದ ಕೊರತೆಯಿಂದಾಗಿ ವೈದ್ಯರ ಬಳಿ ಬರುವಾಗ ಕ್ಯಾನ್ಸರ್ ಮೂರು ಅಥವಾ ನಾಲ್ಕನೇ ಹಂತಕ್ಕೆ ತಲಪಿರುತ್ತದೆ. ಈ ಹಂತದಲ್ಲಿ ಕ್ಯಾನ್ಸರನ್ನು ಗುಣಮುಖವಾಗಿಸುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಈ ನಿಟ್ಟಿನಲ್ಲಿ ಕ್ಯಾನ್ಸರ್ ಜಾಗೃತಿ ದಿನದಂದು ಜನರಲ್ಲಿ ಕ್ಯಾನ್ಸರ್ ಬಗೆಗಿನ ಮೂಢನಂಬಿಕೆ ಮತ್ತು ಅಜ್ಞಾನಗಳನ್ನು ತೊಡೆದು ಹಾಕಿ ಹೆಚ್ಚಿನ ತಿಳುವಳಿಕೆ ಮತ್ತು ಅರಿವು ನೀಡುವ ಕಾರ್ಯ ನಡೆಸಲಾಗುತ್ತದೆ.
ಭಾರತ ದೇಶವೊಂದರಲ್ಲೇ ವರ್ಷಕ್ಕೆ 10 ಲಕ್ಷ ಜನರು ಕ್ಯಾನ್ಸರ್ಗೆ ತುತ್ತಾಗುತ್ತಾರೆ ಮತ್ತು ವಿಶ್ವದ ಕ್ಯಾನ್ಸರ್ ರ್ಯಾಂಕ್ ಪಟ್ಟಿಯಲ್ಲಿ ಭಾರತಕ್ಕೆ 5ನೇ ಸ್ಥಾನ ಲಭಿಸಿದೆ. ಈ ಪೈಕಿ ಶೇ. 90ರಷ್ಟು ಕ್ಯಾನ್ಸರ್ ತಂಬಾಕಿನ ಸೇವನೆಯಿಂದ ಬರುತ್ತದೆ. ತಂಬಾಕಿನ ವಿವಿಧ ಉತ್ಪನ್ನಗಳಿಂದ ಬಾಯಿ, ಗಂಟಲು, ಶ್ವಾಸಕೋಶ ಮುಂತಾದ ಅಂಗಗಳು ಕ್ಯಾನ್ಸರ್ಗೆ ತುತ್ತಾಗುತ್ತವೆ. ಇದರ ಜೊತೆಗೆ ಧೂಮಪಾನ, ಮದ್ಯಪಾನ ಸೇರಿಕೊಂಡು ಶ್ವಾಸಕೋಶ, ಕರುಳು, ಅನ್ನನಾಳ, ಯಕೃತ್, ಮೂತ್ರಪಿಂಡ ಇತ್ಯಾದಿ ಅಂಗಗಳು ಕ್ಯಾನ್ಸರ್ಗೆ ತುತ್ತಾಗುತ್ತವೆ. ಸಮಾಧಾನಕರವಾದ ಅಂಶವೆಂದರೆ ದುಶ್ಚಟಗಳನ್ನು ನಿಯಂತ್ರಿಸಿ ಕ್ಯಾನ್ಸರನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಮತ್ತು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಸಂಪೂರ್ಣ ಗುಣಪಡಿಸಬಹುದು.