ಏಳು ಅತ್ಯಂತ ಸಾಮಾನ್ಯ ಆಹಾರ ಅಲರ್ಜಿಗಳು
ಆಹಾರ ಅಲರ್ಜಿಯು ವೈದ್ಯಕೀಯ ಸ್ಥಿತಿಯಾಗಿದ್ದು, ನಮ್ಮ ಶರೀರದ ರೋಗ ನಿರೋಧಕ ವ್ಯವಸ್ಥೆಯು ಕೆಲವು ಆಹಾರ ಪ್ರೋಟಿನ್ಗಳನ್ನು ಹಾನಿಕಾರಕವೆಂದು ಪರಿಗಣಿಸಿ ಅವುಗಳೊಂದಿಗೆ ಅಸಹಜವಾಗಿ ಪ್ರತಿಕ್ರಿಯಿಸುತ್ತದೆ. ಆಹಾರದ ಅಲರ್ಜಿಯನ್ನು ಹೊಂದಿರುವ ವ್ಯಕ್ತಿ ನಿರ್ದಿಷ್ಟ ಆಹಾರವನ್ನು ಸೇವಿಸಿದಾಗ ರೋಗ ನಿರೋಧಕ ವ್ಯವಸ್ಥೆಯು ಗ್ರಹಿತ ಬೆದರಿಕೆಯ ವಿರುದ್ಧ ಹೋರಾಡಲು ಹಿಸ್ಟಾಮೈನ್ನಂತಹ ರಾಸಾಯನಿಕಗಳನ್ನು ಬಿಡುಗಡೆಗೊಳಿಸುವ ಮೂಲಕ ಪ್ರತಿಕ್ರಿಯಿಸುತ್ತದೆ.
ಈ ರಾಸಾಯನಿಕಗಳು ವಿವಿಧ ಅಲರ್ಜಿ ಲಕ್ಷಣಗಳನ್ನುಂಟು ಮಾಡುತ್ತವೆ ಮತ್ತು ಈ ಲಕ್ಷಣಗಳು ಸೌಮ್ಯದಿಂದ ತೀವ್ರವಾಗಿದ್ದು ವಿವಿಧ ಶರೀರ ವ್ಯವಸ್ಥೆಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ. ಆಹಾರ ಅಲರ್ಜಿಯ ಲಕ್ಷಣಗಳು ವಿಭಿನ್ನ ವ್ಯಕ್ತಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನುಂಟು ಮಾಡುತ್ತವೆ.
ದದ್ದು, ತುರಿಕೆ ಅಥವಾ ಊತದಂತಹ ಚರ್ಮದ ಸಮಸ್ಯೆಗಳು; ವಾಕರಿಕೆ, ವಾಂತಿ ಅಥವಾ ಅತಿಸಾರದಂತಹ ಜೀರ್ಣಾಂಗ ಸಮಸ್ಯೆಗಳು; ಸೀನು,ಮೂಗು ಕಟ್ಟುವುದು ಅಥವಾ ಉಬ್ಬಸದಂತಹ ಉಸಿರಾಟ ವ್ಯವಸ್ಥೆಯ ಸಮಸ್ಯೆಗಳು;ಉಸಿರಾಟದ ತೊಂದರೆ, ರಕ್ತದೊತ್ತಡ ಕುಸಿತ ಅಥವಾ ಅನಾಫಿಲ್ಯಾಕ್ಸಿಸ್ (ಅತಿ ಸಂವೇದನಾಶೀಲತೆ)ಯಂತಹ ಮಾರಣಾಂತಿಕ ಅಲರ್ಜಿ ಇತ್ಯಾದಿಗಳು ಈ ಲಕ್ಷಣಗಳಲ್ಲಿ ಸೇರಿವೆ.
1.ಹಾಲು
ಹಾಲಿನ ಅಲರ್ಜಿಯು,ವಿಶೇಷವಾಗಿ ಮಕ್ಕಳಲ್ಲಿ ಅತ್ಯಂತ ಸಾಮಾನ್ಯ ಅಲರ್ಜಿಗಳಲ್ಲೊಂದಾಗಿದೆ. ಹಸುವಿನ ಹಾಲಿನಲ್ಲಿರುವ ಪ್ರೋಟಿನ್ಗಳಿಗೆ ನಿರೋಧಕ ವ್ಯವಸ್ಥೆಯು ಅತಿಯಾಗಿ ಪ್ರತಿಕ್ರಿಯಿಸಿದಾಗ ಈ ಅಲರ್ಜಿಯು ಕಾಣಿಸಿಕೊಳ್ಳುತ್ತದೆ. ಲಕ್ಷಣಗಳು ಸೌಮ್ಯದಿಂದ ತೀವ್ರದವರೆಗೆ ಇರಬಹುದು. ಜೀರ್ಣ ಸಮಸ್ಯೆಗಳು,ಚರ್ಮದಲ್ಲಿ ದದ್ದುಗಳು ಮತ್ತು ಉಸಿರಾಟ ಸಮಸ್ಯೆಗಳು ಇವುಗಳಲ್ಲಿ ಸೇರಿವೆ.
2.ಮೊಟ್ಟೆಗಳು
ಮೊಟ್ಟೆಯ ಅಲರ್ಜಿಗಳು ಮುಖ್ಯವಾಗಿ ಮಕ್ಕಳನ್ನು ಕಾಡುತ್ತವೆ, ಆದರೆ ಪ್ರೌಢಾವಸ್ಥೆಯಲ್ಲಿಯೂ ಮುಂದುವರಿಯಬಹುದು. ನಿರೋಧಕ ವ್ಯವಸ್ಥೆಯು ಮೊಟ್ಟೆಯ ಬಿಳಿಭಾಗ ಅಥವಾ ಹಳದಿ ಲೋಳೆಯಲ್ಲಿನ ಪ್ರೋಟಿನ್ಗಳಿಗೆ ಪ್ರತಿಕ್ರಿಯಿಸುತ್ತದೆ ಮತ್ತು ದದ್ದುಗಳು,ಜೀರ್ಣ ತೊಂದರೆ ಮತ್ತು ಉಸಿರಾಟದ ಸಮಸ್ಯೆಗಳಂತಹ ಲಕ್ಷಣಗಳಿಗೆ ಕಾರಣವಾಗುತ್ತದೆ. ಸುದೈವವಶಾತ್ ಹೆಚ್ಚಿನ ಮಕ್ಕಳು ಐದು ವರ್ಷ ಪ್ರಾಯದಲ್ಲಿ ಈ ಅಲರ್ಜಿಯಿಂದ ಮುಕ್ತರಾಗುತ್ತಾರೆ.
3.ನೆಲಗಡಲೆ
ನೆಲಗಡಲೆ ಅಲರ್ಜಿಗಳು ಹೆಚ್ಚು ಪ್ರಚಲಿತವಾಗಿದ್ದು, ಹೆಚ್ಚಿನ ಪ್ರಕರಣಗಳಲ್ಲಿ ಜೀವಮಾನವಿಡೀ ಕಾಡುತ್ತವೆ. ಅದರಲ್ಲಿರುವ ಪ್ರೋಟಿನ್ಗಳು ಮಾರಣಾಂತಿಕವಾದ ಅನಾಫಿಲ್ಯಾಕ್ಸಿಸ್ ಸೇರಿದಂತೆ ತೀವ್ರ ಅಲರ್ಜಿ ಪ್ರತಿಕ್ರಿಯೆಗಳನ್ನುಂಟು ಮಾಡಬಹುದು. ಚರ್ಮ ಸೋಂಕು, ಜಠರಗರುಳು ತೊಂದರೆಯಿಂದ ಹಿಡಿದು ಉಸಿರಾಟ ಸಮಸ್ಯೆಗಳವರೆಗೆ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಈ ಅಲರ್ಜಿ ಇರುವವರು ನೆಲಗಡಲೆಯಿಂದ ದೂರವಿರುವುದು ಒಳ್ಳೆಯದು.
4. ಟ್ರೀ ನಟ್ಗಳು
ಬಾದಾಮಿ,ಅಕ್ರೋಟ್,ಗೋಡಂಬಿಯಂತಹ ಬೀಜಗಳು ಈ ವರ್ಗದಲ್ಲಿ ಬರುತ್ತವೆ. ನೆಲಗಡಲೆ ಅಲರ್ಜಿಗಳಂತೆ ಈ ಬೀಜಗಳೂ ತೀವ್ರ ಪ್ರತಿಕ್ರಿಯೆಗಳು ಮತ್ತು ಅನಾಫಿಲ್ಯಾಕ್ಸಿಸ್ಗೆ ಕಾರಣವಾಗಬಲ್ಲವು. ಈ ವರ್ಗಕ್ಕೆ ಸೇರಿದ ವಿವಿಧ ಬೀಜಗಳ ನಡುವೆ ಅಂತರ್-ಪ್ರತಿಕ್ರಿಯಾತ್ಮಕತೆ ಸಾಮಾನ್ಯವಾಗಿದೆ,ಅಂದರೆ ಓರ್ವ ವ್ಯಕ್ತಿಗೆ ಒಂದು ವಿಧದ ಬೀಜ ಅಲರ್ಜಿಯನ್ನುಂಟು ಮಾಡುತ್ತಿದ್ದರೆ ಎಲ್ಲ ಟ್ರೀನಟ್ಗಳಿಂದ ಆತ ದೂರವಿರಬೇಕಾಗಬಹುದು.
5.ಗೋದಿ
ಗೋದಿಯ ಅಲರ್ಜಿಯು ಗ್ಲುಟೆನ್ ಅಸಹಿಷ್ಣುತೆ ಅಥವಾ ಉದರ ರೋಗಕ್ಕಿಂತ ಭಿನ್ನವಾಗಿದೆ. ಗೋದಿ ಅಲರ್ಜಿಯನ್ನು ಹೊಂದಿರುವ ವ್ಯಕ್ತಿಗಳು ಅದರಲ್ಲಿರುವ ಪ್ರೋಟಿನ್ಗಳಿಗೆ ಪ್ರತಿಕ್ರಿಯಿಸುತ್ತಾರೆ. ಜಠರಗರುಳಿನ ತೊಂದರೆ,ಚರ್ಮದ ಕಿರಿಕಿರಿ, ಮತ್ತು ಗಂಭೀರ ಪ್ರಕರಣಗಳಲ್ಲಿ ಅನಾಫಿಲ್ಯಾಕ್ಸಿಸ್ ಈ ಅಲರ್ಜಿಯ ಲಕ್ಷಣಗಳಾಗಿವೆ. ಆದರೆ ಅನೇಕ ಆಹಾರ ಉತ್ಪನ್ನಗಳಲ್ಲಿ ಗೋದಿಯು ಸಾಮಾನ್ಯ ಘಟಕವಾಗಿರುವುದರಿಂದ ಈ ಅಲರ್ಜಿಯನ್ನು ನಿಭಾಯಿಸುವುದು ಸವಾಲಾಗಬಹುದು.
6.ಸೋಯಾ
ಸೋಯಾ ಅಲರ್ಜಿಗಳು ಶಿಶುಗಳಲ್ಲಿ ಮತ್ತು ಎಳೆಯ ಮಕ್ಕಳಲ್ಲಿ ಸಾಮಾನ್ಯವಾಗಿವೆ. ದದ್ದುಗಳು,ಜೀರ್ಣ ತೊಂದರೆ ಮತ್ತು ಉಸಿರಾಟ ಸಮಸ್ಯೆಗಳು ಲಕ್ಷಣಗಳಲ್ಲಿ ಸೇರಿವೆ. ಆದರೂ ಸೋಯಾ ಅಲರ್ಜಿಗಳನ್ನು ಹೊಂದಿರುವ ಹೆಚ್ಚಿನ ವ್ಯಕ್ತಿಗಳು ಅತ್ಯಂತ ಹೆಚ್ಚು ಸಂಸ್ಕರಿತ ಸೋಯಾಬೀನ್ ಎಣ್ಣೆ ಅಥವಾ ಸೋಯಾ ಲೆಸಿಥಿನ್ ಅನ್ನು ಸಹಿಸಿಕೊಳ್ಳಬಲ್ಲರು.
7.ಮೀನು ಮತ್ತು ಚಿಪ್ಪು ಮೀನು
ಮೀನು ಮತ್ತು ಚಿಪ್ಪು ಮೀನು ಅಲರ್ಜಿಗಳು ವಿಭಿನ್ನವಾಗಿವೆ, ಆದರೂ ಕೆಲವು ವ್ಯಕ್ತಿಗಳು ಎರಡಕ್ಕೂ ಅಲರ್ಜಿಯನ್ನು ಹೊಂದಿರಬಹುದು. ಈ ಅಲರ್ಜಿಗಳು ಸಾಮಾನ್ಯವಾಗಿ ಜೀವಮಾನವಿಡೀ ಕಾಡುತ್ತವೆ ಮತ್ತು ಅನಾಫಿಲ್ಯಾಕ್ಸಿಸ್ ಸೇರಿದಂತೆ ತೀವ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು. ಸಣ್ಣ ಪ್ರಮಾಣದಲ್ಲಿ ಮೀನು ಅಥವಾ ಚಿಪ್ಪು ಮೀನಿನ ಸೇವನೆಯೂ ಸೌಮ್ಯದಿಂದ ಹಿಡಿದು ತೀವ್ರ ಅಲರ್ಜಿ ಲಕ್ಷಣಗಳನ್ನುಂಟು ಮಾಡುತ್ತದೆ, ಹೀಗಾಗಿ ಇವುಗಳಿಗೆ ಅಲರ್ಜಿ ಹೊಂದಿರುವವರು ಇವುಗಳಿಂದ ದೂರವಿರುವುದು ಉತ್ತಮ.
ಕೃಪೆ: ndtv.com