ತಮಿಳುನಾಡು, ಪುದುಚೇರಿಯಲ್ಲಿ ಭಾರಿ ಮಳೆ; ಶಾಲೆಗಳಿಗೆ ರಜೆ
ಚೆನ್ನೈ: ತಮಿಳುನಾಡಿನ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಕುಡಲೂರು, ಮೈಲಡುತುರೆ ಮತ್ತು ವಿಳ್ಳುಪುರಂ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಂತೆಯೇ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕೂಡಾ ಭಾರಿ ಮಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ.
ಚೆಂಗಲಪಟ್ಟು, ಕಾಂಚಿಪುರಂ, ವಿಳ್ಳುಪುರಂ ಮತ್ತು ಕುಡಲೂರು, ಪುದುಚೇರಿ ಪ್ರದೇಶಗಳಲ್ಲಿ ನವೆಂಬರ್ 14ರಂದು ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಮೇಲ್ಮುಖ ಬಿರುಗಾಳಿ ಪ್ರಸರಣದಿಂದಾಗಿ ಬಂಗಾಳಕೊಲ್ಲಿಯ ಆಗ್ನೇಯ ದಿಕ್ಕಿನಲ್ಲಿ ವಾಯುಭಾರ ಕುಸಿತದ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಭಾರಿ ಮಳೆಯ ಜತೆಗೆ ಗಂಟೆಗೆ 55 ಕಿಲೋಮೀಟರ್ ವೇಗದಲ್ಲಿ ಗಾಳಿಯೂ ಬೀಸುವ ಸಾಧ್ಯತೆ ಇರುವುದು ಆತಂಕ ಹೆಚ್ಚಲು ಕಾರಣವಾಗಿದೆ. ಈಶಾನ್ಯ ಮುಂಗಾರು ತಮಿಳುನಾಡಿನ ಕುಡಿಯುವ ನೀರು ಮತ್ತು ನೀರಾವರಿ ಉದ್ದೇಶಕ್ಕೆ ಅತ್ಯಂತ ಮಹತ್ವದ್ದಾಗಿದೆ. ಕಳೆದ ವಾರದ ವರೆಗೆ ರಾಜ್ಯಕ್ಕೆ ವಾಡಿಕೆ ಮಳೆಗಿಂತ ಶೇಕಡ 17ರಷ್ಟು ಕಡಿಮೆ ಮಳೆಯಾಗಿತ್ತು.