ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯ ಯಾವುದೇ ಅಡೆತಡೆ ಇಲ್ಲದೆ ಸಿಎಂ ಆಗಿ ಮುಂದುವರಿಯಲಿದ್ದಾರೆ: ಯತೀಂದ್ರ
ಹಾಸನ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಯಾಗಿ ಯಾವುದೇ ಅಡೆತಡೆ ಇಲ್ಲದೆ ಮುಂದುವರಿಯಲಿದ್ದಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಹಾಸನದಲ್ಲಿ ಮಂಗಳವಾರ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಗೂ ಮೊದಲು 5 ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿತ್ತು. ಸರಕಾರಕ್ಕೆ ಒಂದು ವರ್ಷ ತುಂಬುವ ಮೊದಲೇ ಅವುಗಳನ್ನು ಜಾರಿಗೊಳಿಸಲಾಗಿದೆ. ಬಡವರು, ಶೋಷತರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ದಲಿತರ ಏಳಿಗೆಗಾಗಿ ಕೆಲಸ ಮಾಡುವ ಹಂಬಲ ಕಾಂಗ್ರೆಸ್ ಪಕ್ಷಕ್ಕೆ ಇದೆ. ಹಾಗಾಗಿ ತಾವೆಲ್ಲರೂ ಸಿಎಂ ಸಿದ್ದರಾಮಯ್ಯಗೆ ಬೆಂಬಲ ನೀಡಬೇಕು ಎಂದು ಹೇಳಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆದ್ದರೆ ನೈತಿಕವಾಗಿ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಬೆಂಬಲ ದೊರೆಯಲಿದೆ. ರಾಜ್ಯ ಸರಕಾರ ಬಡವರ ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 56 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ರಾಜ್ಯದಲ್ಲಿ ಯಾವ ಸರ್ಕಾರವೂ ಇಷ್ಟು ಮೊತ್ತದ ಹಣವನ್ನು ಖರ್ಚು ಮಾಡಿಲ್ಲ ಎಂದರು.
ಸರಕಾರ ಇಷ್ಟೊಂದು ದೊಡ್ಡ ಮೊತ್ತದ ಹಣ ಖರ್ಚು ಮಾಡುತ್ತಿರುವಾಗ ಜನರ ಬೆಂಬಲ ಬೇಕು. ಆಗ ಸಿದ್ದರಾಮಯ್ಯ ಅವರು 5 ವರ್ಷ ಗ್ಯಾರಂಟಿ ಯೋಜನೆ ಮುಂದುವರಿಸುತ್ತಾರೆ. ಅಲ್ಲದೆ ನೀವು ಬೆಂಬಲಿಸಿದ್ದರಿಂದಲೇ ಸಿದ್ದರಾಮಯ್ಯ 2ನೇ ಬಾರಿ ಸಿಎಂ ಆದರು ಎಂದು ಯತೀಂದ್ರ ನುಡಿದರು.