ಧೈರ್ಯವಿದ್ದರೆ ಪ್ರಧಾನಿ ಮೋದಿ ಎದುರು ವಾರಾಣಸಿಯಲ್ಲಿ ಸ್ಪರ್ಧಿಸಿ: ಮಮತಾ ಬ್ಯಾನರ್ಜಿಗೆ ಸವಾಲೆಸೆದ ಬಿಜೆಪಿ
Photo:twitter/ANI
ಹೊಸದಿಲ್ಲಿ: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎದುರು ಧೈರ್ಯವಿದ್ದರೆ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಟಿಎಂಸಿ ವರಿಷ್ಠೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪಶ್ಚಿಮ ಬಂಗಾಳದ ನಾಯಕಿ ಅಗ್ನಿಮಿತ್ರ ಪೌಲ್ ಸವಾಲೆಸೆದಿದ್ದಾರೆ ಎಂದು indiatoday.in ವರದಿ ಮಾಡಿದೆ.
INDIA ಮೈತ್ರಿಕೂಟದ ನಾಲ್ಕನೆಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎದುರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು INDIA ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು ಎಂದು ಮಮತಾ ಬ್ಯಾನರ್ಜಿ ಅವರು ಪ್ರಸ್ತಾಪಿಸಿದ ನಂತರ ಪೌಲ್ ಅವರ ಮೇಲಿನ ಪ್ರತಿಕ್ರಿಯೆ ಹೊರಬಿದ್ದಿದೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ ಎಂದು ಹೇಳಲಾಗಿದೆ.
“ಸೀಟು ಹಂಚಿಕೆಗೂ ಮುನ್ನ, ಒಂದು ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬದಲು ಮಮತಾ ಬ್ಯಾನರ್ಜಿ ಅವರಿಗೆ ಸ್ಪರ್ಧಿಸುವ ಧೈರ್ಯವಿದ್ದರೆ, ಅವರದನ್ನು ಮಾಡಬೇಕು. ನೀವು ಪ್ರಧಾನಿಯಾಗಬೇಕು, ನಿಜವಲ್ಲವೆ? ನಮ್ಮ ಮುಖ್ಯಮಂತ್ರಿಯು ಪ್ರಧಾನಿಯ ವಿರುದ್ಧ ಸ್ಪರ್ಧಿಸಲಿದ್ದಾರೆ. ಅವರಿಗೆ ಎಷ್ಟು ಧೈರ್ಯವಿದೆ ಎಂದು ನೋಡೇಬಿಡೋಣ” ಎಂದು ಶುಕ್ರವಾರ ಅಗ್ನಿಮಿತ್ರ ಪೌಲ್ ಸವಾಲೆಸೆದಿದ್ದಾರೆ.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎದುರು ವಾರಾಣಸಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳು ಬಿರುಸು ಪಡೆದಿದ್ದವು. ಆದರೆ, ಕೊನೆಗೆ ಕಾಂಗ್ರೆಸ್ ಪಕ್ಷದಿಂದ ಅಜಯ್ ರಾಯ್ ಕಣಕ್ಕಿಳಿದಿದ್ದರು.