ಉಕ್ರೇನ್ ಕುರಿತ ನಿರ್ಣಯದಿಂದ ದೂರ ಉಳಿದ ಭಾರತ: ಅಮೆರಿಕಕ್ಕೆ ಹಿನ್ನಡೆ

PC: x.com/UN_News_Centre
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸೋಮವಾರ ಹಲವು ನಾಟಕೀಯ ತಿರುವುಗಳಿಗೆ ಸಾಕ್ಷಿಯಾಗಿದ್ದು, ರಷ್ಯಾ-ಉಕ್ರೇನ್ ಯುದ್ಧದ ಮೂರನೇ ವರ್ಷಾಚರಣೆ ಸಂದರ್ಭದಲ್ಲಿ ಉಕ್ರೇನ್ ಹಾಗೂ ಅಮೆರಿಕ ಮಂಡಿಸಿದ್ದ ನಿರ್ಣಯಗಳ ಮತದಾನದಿಂದ ಭಾರತ ದೂರ ಉಳಿದಿದೆ. ಎರಡೂ ನಿರ್ಣಯಗಳ ಪರ 93 ಮತಗಳು ಬಿದ್ದವು. 193 ಸದಸ್ಯ ಬಲದ ಸಭೆಯಲ್ಲಿ ಯೂರೋಪಿಯನ್ ಒಕ್ಕೂಟ ಅಮೆರಿಕದ ಬೆಂಬಲ ಪಡೆಯುವಲ್ಲಿ ಸಫಲವಾಗಿದ್ದು, ಉಕ್ರೇನ್ ನ ಸಾರ್ವಭೌಮತ್ವ ಮತ್ತು ಭೌಗೋಳಿಕ ಸಮಗ್ರತೆಯನ್ನು ಕಾಪಾಡುವ ಹಾಗೂ ಸಮಗ್ರ ಶಾಂತಿ ಸ್ಥಾಪನೆಗೆ ನಿರ್ಣಯ ಕರೆ ನೀಡಿದೆ.
ರಷ್ಯಾ- ಉಕ್ರೇನ್ ಸಂಘರ್ಷಕ್ಕೆ ತ್ವರಿತ ಅಂತ್ಯ ಕಾಣಿಸುವ ಸಂಬಂಧ ಅಮೆರಿಕದ ಪ್ರಯತ್ನಗಳ ಸಂಬಂಧದ ಮತದಾನ ಹಲವು ನಾಟಕೀಯ ತಿರುವುಗಳಿಗೆ ಸಾಕ್ಷಿಯಾಗಿದ್ದು, ತಾನೇ ಮಂಡಿಸಿದ ನಿರ್ಣಯದ ಮೇಲಿನ ಮತದಾನದಿಂದ ಅಮೆರಿಕ ದೂರ ಉಳಿಯಿತು.
ಏತನ್ಮಧ್ಯೆ ಉಕ್ರೇನ್ ಹಾಗೂ ಯೂರೋಪಿಯನ್ ಒಕ್ಕೂಟ ಮಂಡಿಸಿದ ನಿರ್ಣಯದಲ್ಲಿ ರಷ್ಯಾ ತನ್ನ ಪಡೆಗಳನ್ನು ತಕ್ಷಣ ವಾಪಾಸು ಕರೆಸಿಕೊಳ್ಳುವಂತೆ ಆಗ್ರಹಿಸಲಾಗಿದೆ. ಯೂರೋಪಿಯನ್ ದೇಶಗಳು ನಿರ್ಣಯದ ಬರಹಕ್ಕೆ ತಿದ್ದುಪಡಿಗಳನ್ನು ತರುವಲ್ಲಿ ಯಶಸ್ವಿಯಾದವು. ತನ್ನ ತಟಸ್ಥ ನೀತಿಯನ್ನು ಆರಂಭದಿಂದಲೂ ಪ್ರದರ್ಶಿಸುತ್ತಾ ಬಂದ ಭಾರತ ಶಾಂತಿಯ ಪರವಾಗಿದ್ದು, ಈ ನಿರ್ಣಯದ ಪರ ಮತ ಚಲಾಯಿಸುವ ನಿರೀಕ್ಷೆ ಇತ್ತು. ಆದರೆ ತಿದ್ದುಪಡಿಗಳ ಕಾರಣದಿಂದ ಭಾರತ ಕೂಡಾ ಮತದಾನದಿಂದ ದೂರ ಉಳಿಯಲು ನಿರ್ಧರಿಸಿತು.
ಯೂರೋಪ್ ಬೆಂಬಲಿತ ನಿರ್ಣಯದ ಮೇಲಿನ ಮತದಾನದಿಂದ 65 ದೇಶಗಳು ದೂರ ಉಳಿದವು. ನ್ಯಾಯಸಮ್ಮತ ಹಾಗೂ ಸುಧೀರ್ಘ ಶಾಂತಿಗೆ ಆಗ್ರಹಿಸಿರುವ ನಿರ್ಣಯದಲ್ಲಿ ರಷ್ಯನ್ ಪಡೆಗಳು ತಕ್ಷಣವೇ ಉಕ್ರೇನ್ನಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಲಾಗಿದೆ. ರಷ್ಯಾದ ನಿಲುವನ್ನು ಖಂಡಿಸುವ ಹಿಂದಿನ ನಿರ್ಣಯಕ್ಕೆ ಪೂರಕವಾಗಿ ಈ ನಿರ್ಣಯ ಮಂಡಿಸಲಾಗಿತ್ತು.
ಸಂಘರ್ಷ ನಿವಾರಣೆಗಾಗಿ ಉಭಯ ದೇಶಗಳು ಪರಸ್ಪರ ಮಾತುಕತೆ ಮತ್ತು ರಾಜತಾಂತ್ರಿಕ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂಬ ನಿಲುವಿಗೆ ಭಾರತ ಬದ್ಧವಾಗಿದ್ದು, ಅಧಿಕೃತವಾಗಿ ಮತದಾನದಿಂದ ದೂರ ಉಳಿಯಿತು. ಯೂರೋಪಿಯನ್ ಒಕ್ಕೂಟ ಮತ್ತು ಉಕ್ರೇನ್ ದೇಶಗಳನ್ನು ಹೊರಗಿಟ್ಟು ನೇರವಾಗಿ ರಷ್ಯಾ ಜತೆ ಮಾತುಕತೆಯಲ್ಲಿ ಅಮೆರಿಕ ತೊಡಗಿದೆ. ಸಾಮಾನ್ಯ ಸಭೆಯಲ್ಲಿನ ಅಮೆರಿಕದ ಸೋಲು ಆ ದೇಶಕ್ಕೆ ದೊಡ್ಡ ಹಿನ್ನಡೆ ಎನಿಸಿದೆ. ಆದರೆ ಭದ್ರತಾ ಮಂಡಳಿಯಲ್ಲಿ ಪ್ರಯತ್ನ ಮುಂದುವರಿಸಲಿದ್ದು, ಫ್ರಾನ್ಸ್ ಹಾಗೂ ಬ್ರಿಟನ್ ಅದಕ್ಕೆ ವಿಟೊ ಚಲಾಯಿಸದಂತೆ ಮಾಡುವ ವಿಶ್ವಾಸದಲ್ಲಿದೆ. ಈ ಎರಡೂ ದೇಶಗಳು ಹಲವು ದಶಕಗಳಿಂದ ತಮ್ಮ ವಿಟೊ ಅಧಿಕಾರವನ್ನು ಚಲಾಯಿಸಿಲ್ಲ.
ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್ ಮಾಡಿ ►https://whatsapp.com/channel/0029VaA8ju86LwHn9OQpEq28