ಪದಕಗಳ ಶತಕದ ಅಂಚಿನಲ್ಲಿ ಭಾರತ
Photo: twitter/CricCrazyJohns
ರಿಕರ್ವ್ ಟೀಮ್ ಇವೆಂಟ್: ಬೆಳ್ಳಿ,ಕಂಚು ಜಯಿಸಿದ ಭಾರತದ ಬಿಲ್ಗಾರರು
► 13 ವರ್ಷಗಳ ನಂತರ ಒಲಿದ ಪದಕ
ಹಾಂಗ್ ಝೌ: ಏಶ್ಯನ್ ಗೇಮ್ಸ್ ನಲ್ಲಿ ಭಾರತೀಯ ಪುರುಷರ ಹಾಗೂ ಮಹಿಳೆಯರ ಬಿಲ್ಗಾರರು ರಿಕರ್ವ್ ಟೀಮ್ ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದರು. 2010ರ ನಂತರ ಮೊದಲ ಬಾರಿ ರಿಕರ್ವ್ ಟೀಮ್ ಇವೆಂಟ್ ಗಳಲ್ಲಿ ಪದಕ ಗೆದ್ದುಕೊಂಡರು.
ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದ ಅಂಕಿತಾ ಭಕತ್, ಸಿಮ್ರಾನ್ಜೀತ್ ಕೌರ್ ಹಾಗೂ ಭಜನ್ ಕೌರ್ ಅವರನ್ನೊಳಗೊಂಡ ಮಹಿಳಾ ರಿಕರ್ವ್ ತಂಡ ಶುಕ್ರವಾರ ಬೆಳಗ್ಗಿನ ಅವಧಿಯಲ್ಲಿ ಕಂಚಿನ ಪದಕ ಜಯಿಸಿತು. ಐದನೇ ಶ್ರೇಯಾಂಕದ ಭಾರತ ತಂಡವು ಕೇವಲ ಒಂದು ಸೆಟನ್ನು ಕಳೆದುಕೊಂಡು ವಿಯೆಟ್ನಾಂನ ಎದುರಾಳಿಯನ್ನು 6-2(56-52, 55-56, 57-50, 51-48)ಅಂತರದಿಂದ ಮಣಿಸಿತು. 2010ರ ಗ್ವಾಂಗ್ಝೌ ಗೇಮ್ಸ್ ನಂತರ ಏಶ್ಯನ್ ಗೇಮ್ಸ್ ನಲ್ಲಿ ಮೊತ್ತ ಮೊದಲ ಪದಕ ಗೆದ್ದುಕೊಂಡಿತು.
ಅತನು ದಾಸ್, ತುಷಾರ್ ಶೆಲ್ಕೆ ಹಾಗೂ ಧೀರಜ್ ಬೊಮ್ಮದೇವರ ಅವರಿದ್ದ ಭಾರತದ ಪುರುಷರ ರಿಕರ್ವ್ ಟೀಮ್ ಬೆಳ್ಳಿ ಪದಕವನ್ನು ಬಾಚಿಕೊಂಡಿತು. ಭಾರತೀಯರ ತಂಡ ಏಕಪಕ್ಷೀಯವಾಗಿ ಸಾಗಿದ ಸೆಮಿ ಫೈನಲ್ ನಲ್ಲಿ ಬಾಂಗ್ಲಾದೇಶವನ್ನು 5-3 ಅಂತರದಿಂದ ಮಣಿಸಿದರು. ಆದರೆ ಬಲಿಷ್ಠ ದಕ್ಷಿಣ ಕೊರಿಯಾ ವಿರುದ್ಧ ಚಿನ್ನದ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಭಾರತವು 1-5 ಅಂತರದಿಂದ ಸೋಲನುಭವಿಸಿತು.
ಪ್ರಸಕ್ತ ಗೇಮ್ಸ್ ನಲ್ಲಿ ಭಾರತದ ಬಿಲ್ಗಾರರು ಒಟ್ಟು 8 ಪದಕಗಳಿಗೆ ಗುರಿ ಇಟ್ಟು ದಾಖಲೆ ನಿರ್ಮಿಸಿದರು. ಈಗಾಗಲೇ ಮಿಕ್ಸೆಡ್, ಮಹಿಳೆಯರ ಹಾಗೂ ಪುರುಷರ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ಅಭಿಷೇಕ್ ವರ್ಮಾ ಹಾಗೂ ಓಜಾಸ್ ದೇವತಾಲೆ ಫೈನಲ್ ಗೆ ತಲುಪಿರುವ ಹಿನ್ನೆಲೆಯಲ್ಲಿ ಭಾರತ ಚಿನ್ನ ಹಾಗೂ ಬೆಳ್ಳಿ ಪದಕ ಗೆಲ್ಲುವ ಸಾಧ್ಯತೆಯಿದೆ.
ಜ್ಯೋತಿ ಸುರೇಖಾ ವೆನ್ನಂ ಕೂಡ ಮಹಿಳೆಯರ ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ಫೈನಲ್ ತಲುಪಿದ್ದು ಕನಿಷ್ಠ ಬೆಳ್ಳಿ ಪದಕ ಗೆಲ್ಲುವುದು ದೃಢಪಟ್ಟಿದೆ.
............
ಕುಸ್ತಿ: ಸೋನಂ ಮಲಿಕ್ ಗೆ ಕಂಚು
ಹಾಂಗ್ ಝೌ: ಚೀನಾದ ಕುಸ್ತಿಪಟು ಜಿಯಾ ಲಾಂಗ್ ಅವರ ಸ್ಫೂರ್ತಿಯುತ ಸವಾಲನ್ನು ಮೆಟ್ಟಿ ನಿಂತರ ಭಾರತದ ಯುವ ಕುಸ್ತಿ ತಾರೆ ಸೋನಂ ಮಲಿಕ್ ಏಶ್ಯನ್ ಗೇಮ್ಸ್ ನ ಲ್ಲಿ ಮಹಿಳೆಯರ 62 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಜಯಿಸಿದ್ದಾರೆ.
ಕಂಚಿನ ಪದಕಕ್ಕಾಗಿ ನಡೆದ ಹೋರಾಟದಲ್ಲಿ ಇಬ್ಬರು ಕುಸ್ತಿಪಟುಗಳು 4-4ರಿಂದ ಸಮಬಲ ಸಾಧಿಸಿದ್ದರು. ನಿಯಮದ ಪ್ರಕಾರ ಚೀನಾ ಕುಸ್ತಿಪಟು ಮುಂದಿದ್ದರು. ಕೇವಲ 25 ಸೆಕೆಂಡ್ ಬಾಕಿ ಇರುವಾಗ ಸೋನಂ ನಿರ್ಣಾಯಕ ಟೇಕ್-ಡೌನ್ ನಡೆಯ ಮೂಲಕ ಚೀನಾದ ಕುಸ್ತಿಪಟುವನ್ನು ಕೆಡವಿ 7-5 ಅಂತರದಿಂದ ಜಯಶಾಲಿಯಾದರು.
ಈಗ ನಡೆಯುತ್ತಿರುವ ಗೇಮ್ಸ್ ನಲ್ಲಿ ಕುಸ್ತಿಯಲ್ಲಿ ಭಾರತ ಗೆದ್ದಿರುವ ಮೂರನೇ ಕಂಚಿನ ಪದಕ ಇದಾಗಿದೆ. ಈ ಮೊದಲು ಸುನೀಲ್ ಕುಮಾರ್(ಗ್ರೀಕೊ-ರೋಮನ್) ಹಾಗೂ ಅಂತಿಮ್ ಪಾಂಘಾಲ್(ಮಹಿಳೆಯರ 53 ಕೆಜಿ)ಕಂಚಿನ ಪದಕ ಜಯಿಸಿದ್ದಾರೆ.
................
ಬಾಂಗ್ಲಾದೇಶ ವಿರುದ್ಧ ಭರ್ಜರಿ ಜಯ
► ಫೈನಲ್ ಗೆ ಲಗ್ಗೆ ಇಟ್ಟ ಭಾರತ ಕ್ರಿಕೆಟ್ ತಂಡ
ಹಾಂಗ್ ಝೌ: ಏಶ್ಯನ್ ಗೇಮ್ಸ್ ನ ಲ್ಲಿ ಶುಕ್ರವಾರ ಬಾಂಗ್ಲಾದೇಶ ತಂಡವನ್ನು 9 ವಿಕೆಟ್ ಗಳಿಂದ ಮಣಿಸಿದ ಪ್ರಶಸ್ತಿ ಫೇವರಿಟ್ ಭಾತದ ಟ್ವೆಂಟಿ-20 ತಂಡ ಪುರುಷರ ಕ್ರಿಕೆಟ್ ಸ್ಪರ್ಧಾವಳಿಯಲ್ಲಿ ಪದಕ ಖಚಿತಪಡಿಸಿದೆ.
ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡ ಭಾರತದ ನಾಯಕ ಋತುರಾಜ್ ಗಾಯಕ್ವಾಡ್ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡ ಬೌಲರ್ ಗಳು ಶಿಸ್ತುಬದ್ಧ ಬೌಲಿಂಗ್ ಮಾಡಿ ಬಾಂಗ್ಲಾದೇಶವನ್ನು 9 ವಿಕೆಟ್ ನಷ್ಟಕ್ಕೆ 96 ರನ್ ಗೆ ನಿಯಂತ್ರಿಸಿದರು.
ಇದಕ್ಕೆ ಉತ್ತರವಾಗಿ ಭಾರತವು 9.2 ಓವರ್ಗಳಲ್ಲಿ ಗುರಿಯನ್ನು ತಲುಪಿ ಸುಲಭ ಗೆಲುವು ದಾಖಲಿಸಿದೆ. ಮೊದಲ ಬಾರಿ ಏಶ್ಯನ್ ಗೇಮ್ಸ್ ನ ಕ್ರಿಕೆಟ್ ಸ್ಪರ್ಧಾವಳಿಯಲ್ಲಿ ಕಾಣಿಸಿಕೊಂಡಿರುವ ಭಾರತ ಫೈನಲ್ ಗೆ ಪ್ರವೇಶಿಸಿದೆ.
ಭಾರತವು ಪ್ರತಿಭಾವಂತ ಬ್ಯಾಟರ್ ಯಶಸ್ವಿ ಜೈಸ್ವಾಲ್ ವಿಕೆಟನ್ನು ಮೊದಲ ಓವರ್ ನಲ್ಲೇ ಕಳೆದುಕೊಂಡಿತು. ಆಗ ನಾಯಕ ಗಾಯಕ್ವಾಡ್(ಔಟಾಗದೆ 40, 26 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ತಿಲಕ್ ವರ್ಮಾ(ಔಟಾಗದೆ 55, 26 ಎಸೆತ, 2 ಬೌಂಡರಿ, 6 ಸಿಕ್ಸರ್)ಇನ್ನೂ 64 ಎಸೆತಗಳು ಬಾಕಿ ಇರುವಾಗಲೇ ಭಾರತವನ್ನು ಗೆಲುವಿನ ದಡ ಸೇರಿಸಿದರು.
ಉದಯೋನ್ಮುಖ ಆಲ್ ರೌಂಡರ್ ತಿಲಕ್ ವರ್ಮಾ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು.
ಭಾರತವು ಶನಿವಾರ ನಡೆಯುವ ಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.
ಭಾರತದ ಪರ ಸಾಯಿ ಕಿಶೋರ್(3-12)ಯಶಸ್ವಿ ಬೌಲರ್ ಎನಿಸಿಕೊಂಡರು. ವಾಶಿಂಗ್ಟನ್ ಸುಂದರ್(2-15)ಬಿಗಿ ಬೌಲಿಂಗ್ ಮಾಡಿದರು. ಅರ್ಷದೀಪ್ ಸಿಂಗ್, ತಿಲಕ್ ವರ್ಮಾ, ರವಿ ಬಿಷ್ಣೋಯಿ ಹಾಗೂ ಶಹಬಾಝ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದರು.
ಬಾಂಗ್ಲಾದೇಶದ ಬ್ಯಾಟಿಂಗ್ ನಲ್ಲಿ ಜಾಕರ್ ಅಲಿ(ಔಟಾಗದೆ 24), ಪರ್ವೇಝ್ ಹುಸೇನ್(23 ರನ್) ಹಾಗೂ ರಕಿಬುಲ್ ಹಸನ್(14 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
............
ಬ್ರಿಡ್ಜ್ ಸ್ಪರ್ಧೆ: ಫೈನಲ್ ನಲ್ಲಿ ಎಡವಿ ಬೆಳ್ಳಿ ಗೆದ್ದ ಭಾರತ ತಂಡ
ಹಾಂಗ್ ಝೌ: ಏಶ್ಯನ್ ಗೇಮ್ಸ್ ನ ಲ್ಲಿ ಶುಕ್ರವಾರ ನಡೆದ ಬ್ರಿಡ್ಜ್ ಸ್ಪರ್ಧಾವಳಿಯ ಫೈನಲ್ ನಲ್ಲಿ ಹಾಂಕಾಂಗ್ ವಿರುದ್ಧ ಎಡವಿದ ಭಾರತದ ಪುರುಷರ ತಂಡವು ಬೆಳ್ಳಿ ಪದಕವನ್ನು ಜಯಿಸಿದೆ.
2018ರ ಜಕಾರ್ತ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನ ಹಾಗೂ ಕಂಚಿನ ಪದಕವನ್ನು ಜಯಿಸಿದ್ದ ಭಾರತವು ಶುಕ್ರವಾರ ನಡೆದ ಫೈನಲ್ ನಲ್ಲಿ ಹಾಂಕಾಂಗ್ ವಿರುದ್ಧ 152-238.1 ಅಂತರದಿಂದ ಸೋಲುಂಡಿದೆ. ಸಂದೀಪ್ ಥಕ್ರಲ್, ಜಗ್ಗಿ ಶಿವದಾಸನಿ, ರಾಜು ಟೊಲಾನಿ ಹಾಗೂ ಅಜಯ್ ಪ್ರಭಾಖರ್ ಖರೆ ಹಾಂಕಾಂಗ್ ತಂಡಕ್ಕೆ ಸವಾಲೊಡ್ಡಲು ವಿಫಲರಾದರು.
.............
ಬ್ಯಾಡ್ಮಿಂಟನ್: ಸಾತ್ವಿಕ್-ಚಿರಾಗ್ ಫೈನಲ್ ಗೆ, ಚೊಚ್ಚಲ ಚಿನ್ನದ ನಿರೀಕ್ಷೆ
ಹಾಂಗ್ ಝೌ: ಭಾರತದ ಪುರುಷರ ಡಬಲ್ಸ್ ಆಟಗಾರರಾದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಏಶ್ಯನ್ ಗೇಮ್ಸ್ ನ ಲ್ಲಿ ಅಮೋಘ ಪ್ರದರ್ಶನ ನೀಡಿ ಫೈನಲ್ ಗೆ ತಲುಪಿದ್ದಾರೆ. ಈ ಮೂಲಕ ಭಾರತವು ಏಶ್ಯನ್ ಗೇಮ್ಸ್ ನಲ್ಲಿ ಮೊತ್ತ ಮೊದಲ ಬಾರಿ ಚಿನ್ನದ ಪದಕ ಗೆಲ್ಲುವ ವಿಶ್ವಾಸ ಮೂಡಿಸಿದೆ.
ವಿಶ್ವದ 3ನೇ ರ್ಯಾಂಕಿನ ಆಟಗಾರರಾದ ಸಾತ್ವಿಕ್ ಹಾಗೂ ಚಿರಾಗ್ ಶುಕ್ರವಾರ 46 ನಿಮಿಷಗಳ ಕಾಲ ನಡೆದ ಸೆಮಿ ಫೈನಲ್ ನಲ್ಲಿ ಮಲೇಶ್ಯದ ಅರೊನ್ ಚಿಯಾ ಹಾಗೂ ಸೊಹ್ ವೂಯಿ ಯಿಕ್ ಅವರನ್ನು 21-17, 21-12 ಅಂತರದಿಂದ ಮಣಿಸಿದರು. ಏಶ್ಯನ್ ಗೇಮ್ಸ್ ನಲ್ಲಿ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ ಭಾರತದ ಮೊದಲ ಡಬಲ್ಸ್ ಜೋಡಿಯಾಗಿದ್ದಾರೆ. ಸಾತ್ವಿಕ್-ಚಿರಾಗ್ ಶನಿವಾರ ಫೈನಲ್ ನಲ್ಲಿ ಕೊರಿಯಾದ ಚೊಯ್ ಸೊಲ್ ಗು ಹಾಗೂ ಕಿಮ್ ವನ್ ಹೊ ಅವರ ಸವಾಲನ್ನು ಎದುರಿಸಲಿದ್ದಾರೆ.
................
ಬಜರಂಗ್ ಪುನಿಯಾಗೆ ಸೋಲು: ಭಾರತದ ಹಿರಿಯ ಕುಸ್ತಿಪಟು ಬಜರಂಗ್ ಪುನಿಯಾ ಏಶ್ಯನ್ ಗೇಮ್ಸ್ ನ ಲ್ಲಿ ಶುಕ್ರವಾರ ನಡೆದ ಪುರುಷರ ಫ್ರೀಸ್ಟೈಲ್ 65 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಜಪಾನ್ನ ಕೈಕಿ ಯಮಗುಚಿ ವಿರುದ್ಧ 0-10 ಅಂತರದಿಂದ ಸೋತಿದ್ದಾರೆ.
ಭಾರತದ ಅಮನ್ ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಚೀನಾದ ಮಿಂಘು ಲಿಯು ಅವರನ್ನು ತಾಂತ್ರಿಕ ಶ್ರೇಷ್ಠತೆಯ ಮೂಲಕ ಮಣಿಸಿ ಕಂಚು ಜಯಿಸಿದರು.
ಭಾರತದ ಇನ್ನೋರ್ವ ಕುಸ್ತಿ ತಾರೆ ಕಿರಣ್ ಮಹಿಳೆಯರ 76 ಕೆಜಿ ಫ್ರೀಸ್ಟೈಲ್ನಲ್ಲಿ ಮಂಗೋಲಿಯದ ಅರಿವುನ್ಜರ್ಗರನ್ನು 6-3 ಅಂತರದಿಂದ ಸೋಲಿಸಿ ಕಂಚು ಜಯಿಸಿದರು.
...............
ಮಹಿಳೆಯರ ಸೆಪಕ್ಟಕ್ರಾ: ಮೊದಲ ಬಾರಿ ಕಂಚು ಗೆದ್ದ ಭಾರತ
ಹಾಂಗ್ ಝೌ: ಏಶ್ಯನ್ ಗೇಮ್ಸ್ ನ ಲ್ಲಿ ಮಹಿಳೆಯರ ಸೆಪಕ್ಟಕ್ರಾ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿ ಪದಕವನ್ನು ಜಯಿಸಿದ ಭಾರತವು ಇತಿಹಾಸ ನಿರ್ಮಿಸಿದೆ.
ಅಯೆಕ್ಪಮ್ ಮೈಪಕ್ ದೇವಿ, ಒನಮ್ ಚವೊಬಾ ದೇವಿ, ಎಲಂಗ್ಬಮ್ ಪ್ರಿಯ ದೇವಿ ಹಾಗೂ ಎಲಂಗ್ಬಮ್ಲೆರೆಂಟೊಟೊಂಬಿ ದೇವಿ ಅವರನ್ನೊಳಗೊಂಡ ಭಾರತದ ಮಹಿಳೆಯರ ರೆಗು ಟೀಮ್ ಸೆಮಿ ಫೈನಲ್ ನಲ್ಲಿ ಹಾಲಿ ಚಾಂಪಿಯನ್ ಥಾಯ್ಲೆಂಡ್ ವಿರುದ್ಧ 10-21, 13-21 ಅಂತರದಿಂದ ಮಣಿಸಿತು.
ಸೆಪಕ್ಟಕ್ರಾ ಕ್ರೀಡೆಯಲ್ಲಿ ಭಾರತ ಎರಡನೇ ಬಾರಿ ಪದಕ ಜಯಿಸಿದೆ. 2018ರ ಏಶ್ಯನ್ ಗೇಮ್ಸ್ ನಲ್ಲಿ ಪುರುಷರ ರೆಗು ತಂಡ ಕಂಚು ಜಯಿಸಿತ್ತು.
....................
ಬ್ಯಾಡ್ಮಿಂಟನ್:41 ವರ್ಷಗಳ ನಂತರ ಪದಕ ಗೆದ್ದ ಪ್ರಣಯ್
ಹಾಂಗ್ ಝೌ: ಹಲವಾರು ಅನಗತ್ಯ ತಪ್ಪೆಸಗಿದ ಭಾರತದ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್.ಪ್ರಣಯ್ ಏಶ್ಯನ್ ಗೇಮ್ಸ್ ನ ಪುರುಷರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ನಲ್ಲಿ ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಲಿ ಶಿ ಫೆಂಗ್ ವಿರುದ್ಧ ನೇರ ಗೇಮ್ಗಳ ಅಂತರದಿಂದ ಸೋತಿದ್ದಾರೆ. ಸೋತ ಹೊರತಾಗಿಯೂ ಕಂಚು ಜಯಿಸಿದ ಕೇರಳದ ಆಟಗಾರ 41 ವರ್ಷಗಳ ನಂತರ ಏಶ್ಯನ್ ಗೇಮ್ಸ್ ನ ಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟಿದ್ದಾರೆ.
ಶುಕ್ರವಾರ 51 ನಿಮಿಷಗಳ ಕಾಲ ನಡೆದ ಅಂತಿಮ-4ರ ಸುತ್ತಿನ ಪಂದ್ಯದಲ್ಲಿ ವಿಶ್ವದ ನಂ.7ನೇ ಆಟಗಾರ ಪ್ರಣಯ್ ಬೆನ್ನುನೋವಿನೊಂದಿಗೆ ಆಡಿದರು. 16-21, 9-21 ಅಂತರದಿಂದ ಸೋತ ಪಂದ್ಯದಲ್ಲಿ ವಿಶ್ವದ ನಂ.8ನೇ ಆಟಗಾರನ ವಿರುದ್ಧ ಹಲವಾರು ಅನಗತ್ಯ ತಪ್ಪೆಸಗಿದರು.
ಭಾರತವು 1982ರ ನಂತರ ಏಶ್ಯನ್ ಗೇಮ್ಸ್ ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಮೊದಲ ಪದಕ ಜಯಿಸಿ ಇತಿಹಾಸ ನಿರ್ಮಿಸಿದೆ. 1982ರ ಏಶ್ಯನ್ ಗೇಮ್ಸ್ ನ ಲ್ಲಿ ಭಾರತದ ಸಯ್ಯದ್ ಮೋದಿ ಕಂಚಿನ ಪದಕ ಜಯಿಸಿದ್ದರು.
ಕಳೆದ ವಾರ ಬೆಳ್ಳಿ ಪದಕ ಜಯಿಸಿದ್ದ ಭಾರತದ ಬ್ಯಾಡ್ಮಿಂಟನ್ ತಂಡದಲ್ಲಿ ಪ್ರಣಯ್ ಆಡಿದ್ದರು.
31ರ ಹರೆಯದ ತಿರುವನಂತಪುರದ ಆಟಗಾರ ಪ್ರಣಯ್ ಉತ್ತಮ ಆರಂಭ ಪಡೆದರು. ಆದರೆ ಮೊದಲ ಗೇಮ್ ನ ಮಧ್ಯಭಾಗದಲ್ಲಿ ತನ್ನ ಲಯ ಕಳೆದುಕೊಂಡರು.