ಕೆನ್ಯಾ | ಪ್ರತಿಭಟನೆ ಸಂದರ್ಭ ಹಿಂಸಾಚಾರ ; 270ಕ್ಕೂ ಅಧಿಕ ಜನರ ಬಂಧನ
ನೈರೋಬಿ: ಮಂಗಳವಾರ ನಡೆದ ಸರಕಾರಿ ವಿರೋಧಿ ಪ್ರತಿಭಟನೆಯ ಸಂದರ್ಭ ದೊಂಬಿ, ಹಿಂಸಾಚಾರದಲ್ಲಿ ತೊಡಗಿದ್ದ 270ಕ್ಕೂ ಅಧಿಕ ಮಂದಿಯನ್ನು ಬಂಧಿಸಿರುವುದಾಗಿ ಕೆನ್ಯಾ ಪೊಲೀಸರು ಹೇಳಿದ್ದಾರೆ.
ದೇಶದಾದ್ಯಂತದ ನಗರಗಳಲ್ಲಿ ಯುವಜನರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವ್ಯಾಪಕ ದೊಂಬಿ, ಲೂಟಿ ನಡೆದಿದೆ. ಪ್ರತಿಭಟನೆಯ ನೆಪದಲ್ಲಿ ಕ್ರಿಮಿನಲ್ ಕೃತ್ಯದಲ್ಲಿ ತೊಡಗಿರುವ ಶಂಕಿತರನ್ನು ಭದ್ರತಾ ಪಡೆಗಳು ಗುರುತಿಸಿದ್ದು ಅವರನ್ನು ಕಸ್ಟಡಿಗೆ ಪಡೆಯುತ್ತಿದ್ದಾರೆ. ರಾಜಧಾನಿ ನೈರೋಬಿಯಲ್ಲಿ 204 ಶಂಕಿತರು ಹಾಗೂ ಇತರ ಪ್ರದೇಶಗಳಲ್ಲಿ 68 ಶಂಕಿತರನ್ನು ಬಂಧಿಸಲಾಗಿದೆ. ಪ್ರತಿಭಟನೆಯ ಸಂದರ್ಭ ಅಮಾಯಕ ಪ್ರಜೆಗಳನ್ನು ಲೂಟಿ ಮಾಡುತ್ತಿದ್ದ, ಸರಕಾರದ ಆಸ್ತಿಗಳನ್ನು ನಷ್ಟ ಮಾಡುವವರನ್ನು ಸಿಸಿಟಿವಿ ಕ್ಯಾಮೆರಾಗಳು ಹಾಗೂ ಮೊಬೈಲ್ ಫೋನ್ಗಳಲ್ಲಿ ದಾಖಲಾಗಿರುವ ವೀಡಿಯೊಗಳ ಆಧಾರದಲ್ಲಿ ಗುರುತಿಸುವ ಕಾರ್ಯ ಮುಂದುವರಿದಿದೆ ಎಂದು ಕ್ರಿಮಿನಲ್ ವಿಚಾರಣೆಗಳ ಪ್ರಾಧಿಕಾರ ಹೇಳಿದೆ. ಮಂಗಳವಾರದ ಪ್ರತಿಭಟನೆ ಶಾಂತ ವಾತಾವರಣದಲ್ಲಿ ಪ್ರಾರಂಭವಾಯಿತು, ಆದರೆ ಬಳಿಕ ಹಿಂಸಾಚಾರಕ್ಕೆ ತಿರುಗಿದ್ದು ಕಲ್ಲೆಸೆತ, ಆಸ್ತಿ ಹಾನಿಯಲ್ಲಿ ತೊಡಗಿದ್ದವರನ್ನು ಪೊಲೀಸರು ಅಶ್ರುವಾಯು ಸಿಡಿಸಿ ಚದುರಿಸಿದ್ದಾರೆ.
ತೆರಿಗೆ ಹೆಚ್ಚಳ ಮಸೂದೆಯನ್ನು ವಿರೋಧಿಸಿ ದೇಶದಾದ್ಯಂತ ಎರಡು ವಾರಗಳಿಂದ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಕನಿಷ್ಠ 39 ಮಂದಿ ಸಾವನ್ನಪ್ಪಿದ್ದು ಇತರ 361 ಮಂದಿ ಗಾಯಗೊಂಡಿರುವುದಾಗಿ ಕೆನ್ಯಾ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೋಮವಾರ ಹೇಳಿದ್ದು ಪ್ರತಿಭಟನಾಕಾರರ ವಿರುದ್ಧ ಅತಿಯಾದ ಮತ್ತು ಅಸಮಾನ ಬಲಪ್ರಯೋಗವನ್ನು ಖಂಡಿಸುವುದಾಗಿ ಹೇಳಿದೆ. ತೆರಿಗೆ ಹೆಚ್ಚಳ ನಿರ್ಧಾರವನ್ನು ಕೈಬಿಟ್ಟಿರುವುದಾಗಿ ಕಳೆದ ವಾರಾಂತ್ಯ ಅಧ್ಯಕ್ಷ ವಿಲಿಯಂ ರೂಟೊ ಹೇಳಿದ್ದರೂ, ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಮುಂದುವರಿದಿದ್ದು ಜುಲೈ 4 ಮತ್ತು 7ರಂದು ವ್ಯಾಪಕ ಪ್ರತಿಭಟನೆಗೆ ಕರೆ ನೀಡಲಾಗಿದೆ.