ಅಮೆರಿಕದಲ್ಲಿ ಶೂಟೌಟ್ | 4 ಮಂದಿ ಮೃತ್ಯು, ಆರೋಪಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಅಮೆರಿಕದ ಕೆಂಟುಕಿ ರಾಜ್ಯದ ಮನೆಯೊಂದರಲ್ಲಿ ಶನಿವಾರ ನಡೆಯುತ್ತಿದ್ದ ಹುಟ್ಟುಹಬ್ಬ ಔತಣಕೂಟದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ 4 ಮಂದಿ ಮೃತಪಟ್ಟಿದ್ದು ಇತರ ಮೂವರು ಗಾಯಗೊಂಡಿದ್ದಾರೆ. ಬಳಿಕ ಶಂಕಿತ ಆರೋಪಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಉತ್ತರ ಕೆಂಟುಕಿಯ ಫ್ಲೋರೆನ್ಸ್ ನಗರದಲ್ಲಿರುವ ರಿಜ್ಕ್ರೆಸ್ಟ್ ಡ್ರೈವ್ ಪ್ರದೇಶದಲ್ಲಿನ ಮನೆಯೊಂದರಲ್ಲಿ ನಡೆಯುತ್ತಿದ್ದ ಔತಣಕೂಟದಲ್ಲಿ ಘಟನೆ ನಡೆದಿದೆ. ಶಂಕಿತ ಆರೋಪಿಯನ್ನು 20 ವರ್ಷದ ಚೇಸ್ ಗಾರ್ವೆ ಎಂದು ಗುರುತಿಸಲಾಗಿದ್ದು, ಈತ ಮನೆಯವರ ಪರಿಚಯಸ್ಥ. ಈತನನ್ನು ಔತಣಕೂಟಕ್ಕೆ ಆಹ್ವಾನಿಸಿರಲಿಲ್ಲ. ಆದರೂ ಶನಿವಾರ ತಡರಾತ್ರಿ ಅಲ್ಲಿಗೆ ಆಗಮಿಸಿದ ಆರೋಪಿ ಮನಬಂದಂತೆ ಗುಂಡು ಹಾರಿಸಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ತಾನು ಬಂದಿದ್ದ ಕಾರನ್ನೇರಿ ಅಲ್ಲಿಂದ ಪರಾರಿಯಾಗಿದ್ದಾನೆ. ಪೊಲೀಸರು ಬೆನ್ನಟ್ಟಿದಾಗ ಸ್ವಯಂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ಫ್ಲೋರೆನ್ಸ್ ಪೊಲೀಸ್ ಮುಖ್ಯಸ್ಥರನ್ನು ಉಲ್ಲೇಖಿಸಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ.