ಇಸ್ರೇಲ್ ಸೇನೆಯ ದಾಳಿಗೆ 67 ಮಂದಿ ಫೆಲೆಸ್ತೀನಿಯರ ಬಲಿ
ಗಾಝಾ ಸಂಘರ್ಷ : 30 ಸಾವಿರ ದಾಟಿದ ಫೆಲೆಸ್ತೀನಿಯರ ಸಾವಿನ ಸಂಖ್ಯೆ
Photo: PTI
ಜೆರುಸಲೇಂ: ಗಾಝಾದಲ್ಲಿ ಸೋಮವಾರ ರಂಝಾನ್ ಉಪವಾಸ ವ್ರತ ಆರಂಭಗೊಂಡಿರುವಂತೆಯೇ ಕಳೆದ 24 ತಾಸುಗಳಲ್ಲಿ ಇಸ್ರೇಲಿ ಸೇನಾಪಡೆಗಳ ದಾಳಿಯಿಂದ 67ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಗಾಝಾದಲ್ಲಿ ಯುದ್ಧ ಆರಂಭಗೊಂಡ ಬಳಿಕ ಈವರೆಗೆ ಮೃತಪಟ್ಟ ಫೆಲೆಸ್ತೀನಿಯರ ಸಂಖ್ಯೆ 31,112ಕ್ಕೇರಿದೆ. ಸಾವನ್ನಪ್ಪಿದವರಲ್ಲಿ ಮೂರನೇ ಎರಡರಶಷ್ಟೇ ಮಂದಿ ಮಹಿಳೆಯರು ಹಾಗೂ ಮಕ್ಕಳೆಂದು ಅಧಿಕೃತ ಅಂಕಿಅಂಶಗಳಿಂದ ತಿಳಿದುಬಂದಿದೆ.
ಕಳೆದ 24 ತಾಸುಗಳಲ್ಲಿ ಇಸ್ರೇಲ್ ನ ವಾಯುದಾಳಿಯಲ್ಲಿ ಸಾವನ್ನಪ್ಪಿದ 67 ಮಂದಿಯ ಮೃತದೇಹಗಳನ್ನು ಆಸ್ಪತ್ರೆಗಳಿಗೆ ತರಲಾಗಿದೆಯೆಂದು ಗಾಝಾದ ಆರೋಗ್ಯ ಸಚಿವಾಲಯವು ತಿಳಿಸಿದೆ.
ಈ ನಡುವೆ ಪವಿತ್ರ ರಂಝಾನ್ ತಿಂಗಳ ಮೊದಲನೇ ದಿನವಾದ ಸೋಮವಾರ ಜೆರುಸಲೇಂನ ಅಲ್ ಅಕ್ಸಾ ಮಸೀದಿಯಲ್ಲಿ ನಡೆದ ಸಾಮೂಹಿಕ ನಮಾಝ್ ಕಾರ್ಯಕ್ರಮದಲ್ಲಿ ನೂರಾರು ಫೆಲೆಸ್ತೀನಿಯರು ಪಾಲ್ಗೊಂಡರು. ಆದರೆ ಪ್ರವೇಶದ್ವಾರಗಳ ಹೊರಗೆ ಇಸ್ರೇಲಿ ಪಡೆಗಳು ಗಸ್ತು ತಿರುಗುತ್ತಿದ್ದುದು ಕಂಡುಬರುತ್ತಿತ್ತು.
ಐದು ತಿಂಗಳುಗಳ ಭೀಕರ ಸಮರದಲ್ಲಿ ಗಾಝಾದ 20.30 ಲಕ್ಷ ಜನಸಂಖ್ಯೆ ಶೇ.80ಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದಾರೆ ಹಾಗೂ ಲಕ್ಷಾಂತರ ಮಂದಿ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಗಾಝಾಪಟ್ಟಿಯಲ್ಲಿ ನೆರವಿನ ಸಾಮಾಗ್ರಿಗ ಪೂರೈಕೆಯನ್ನು ಈಜಿಪ್ಟ್ ತೀವ್ರಗೊಳಿಸಿದೆ. ಉತ್ತರ ಗಾಝಾದಲ್ಲಿ ನಿರಾಶ್ರಿತರ ಪರಿಸ್ಥಿತಿ ಅತ್ಯಂತ ಕ್ರೂರವಾಗಿದೆಯೆಂದು ವಿಶ್ವಸಂಸ್ಥೆಯ ಪಿಹಾರ ಹಾಗೂ ಕಾಮಗಾರಿ ಏಜೆನ್ಸಿ ತಿಳಿಸಿದೆ.