ನಿಗೂಢ ಕಾಯಿಲೆಯಿಂದ ಕಾಂಗೋದಲ್ಲಿ 143 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ
ಕಿನ್ಶಾಸ : ಕಾಂಗೋ ಗಣರಾಜ್ಯದ ನೈಋತ್ಯ ಪ್ರಾಂತದಲ್ಲಿ ನಿಗೂಢ ಜ್ವರದಿಂದಾಗಿ ನವೆಂಬರ್ ನಲ್ಲಿ 143 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಸೋಂಕಿತ ಜನರು ಹೆಚ್ಚಿನ ಜ್ವರ ಮತ್ತು ತೀವ್ರ ತಲೆನೋವಿನಿಂದ ಬಳಲುತ್ತಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ಕ್ವಾಂಗೊ ಪ್ರಾಂತದ ಸಹಾಯಕ ಗವರ್ನರ್ ರೆಮಿ ಸಾಕಿ ಹೇಳಿದ್ದಾರೆ. ರೋಗವನ್ನು ಗುರುತಿಸಲು ಆರೋಗ್ಯ ತಜ್ಞರ ತಂಡವನ್ನು ಪಾಂಝಿ ವಲಯಕ್ಕೆ ರವಾನಿಸಲಾಗಿದ್ದು ಸ್ಯಾಂಪಲ್ ಸಂಗ್ರಹಿಸಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ ಎಂದು ಪ್ರಾಂತೀಯ ಆರೋಗ್ಯ ಸಚಿವ ಅಪೊಲಿನೈರ್ ಯುಂಬಾ ಹೇಳಿದ್ದಾರೆ. ಗ್ರಾಮೀಣ ಆರೋಗ್ಯ ವಲಯದಲ್ಲಿರುವ ಪಾಂಝಿ ನಗರಕ್ಕೆ ಔಷಧ ಪೂರೈಕೆಗೆ ತೊಂದರೆಯಾಗಿದೆ. ಸಕಾಲಿಕ ಚಿಕಿತ್ಸೆ ದೊರಕದೆ ರೋಗಿಗಳು ತಮ್ಮ ಮನೆಯಲ್ಲೇ ಸಾಯುತ್ತಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ನಿಗೂಢ ರೋಗದ ಬಗ್ಗೆ ಕಳೆದ ವಾರ ಮಾಹಿತಿ ಲಭಿಸಿದ ಬಳಿಕ ಕಾಂಗೋದ ಸಾರ್ವಜನಿಕ ಆರೋಗ್ಯ ಇಲಾಖೆಯ ಜತೆಗೆ ಕೆಲಸ ಮಾಡುತ್ತಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರರು ಹೇಳಿದ್ದಾರೆ.