ಕ್ಷಿಪ್ರವಾಗಿ ಹರಡುತ್ತಿರುವ ಮಾರಣಾಂತಿಕ ವೈರಸ್ ಗೆ ರುವಾಂಡಾದಲ್ಲಿ 15 ಮಂದಿ ಬಲಿ; ವಿಶ್ವಸಂಸ್ಥೆ ವರದಿ
ಸಾಂದರ್ಭಿಕ ಚಿತ್ರ | PC : PTI
ವಿಶ್ವಸಂಸ್ಥೆ : ಆಫ್ರಿಕಾದ ರವಾಂಡಾ ದೇಶದಲ್ಲಿ ಕಣ್ಣಿನಿಂದ ರಕ್ತಸ್ರಾವ ಆಗುವ ಮಾರಣಾಂತಿಕ ವೈರಸ್ ಆತಂಕಕಾರಿಯಾಗಿ ಹರಡುತ್ತಿದ್ದು ಈಗಾಗಲೇ 15 ಮಂದಿ ಪ್ರಾಣ ಕಳೆದುಕೊಂಡಿದ್ದು 100ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ವೈರಸ್ನಿಂದ ಉಂಟಾಗುವ ಅಪಾಯದ ಹೆಚ್ಚಳದಿಂದಾಗಿ ಸುಮಾರು 17 ದೇಶಗಳಲ್ಲಿ ಪ್ರಯಾಣದ ಎಚ್ಚರಿಕೆಯನ್ನು ಜಾರಿಗೊಳಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ , `ಕಣ್ಣಿನ ರಕ್ತಸ್ರಾವದ ವೈರಸ್' ಎಂದು ಕರೆಯಲಾಗುವ ಈ ಸೋಂಕು ಕಣ್ಣಿನಿಂದ ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಎಬೋಲ ವೈರಸ್ ಕುಟುಂಬಕ್ಕೆ ಸೇರಿದ ಮಾರ್ಬರ್ಗ್ ವೈರಸ್ ತ್ವರಿತವಾಗಿ ಹರಡುವ ಹೆಮರಾಜಿಕ್ ಜ್ವರಕ್ಕೆ ಕಾರಣವಾಗುತ್ತದೆ. ಈ ವೈರಸ್ ರಕ್ತನಾಳಗಳ ಮೇಲೆ ದಾಳಿ ಮಾಡುವುದರಿಂದ ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗಬಹುದು.
ಝೊನೊಟಿಕ್ ವೈರಸ್ ಆಗಿರುವ ಮಾರ್ಬರ್ಗ್ ಪ್ರಾಣಿಗಳಿಂದ ಮಾನವರಿಗೆ ಹರಡುತ್ತದೆ. ವೈರಸ್ ಬಾವಲಿಗಳಿಂದ ಹುಟ್ಟುತ್ತದೆ. ಅದರ ರಕ್ತ, ಮೂತ್ರ ಅಥವಾ ಲಾಲಾರಸದ(ಉಗುಳು) ಸಂಪರ್ಕದ ಮೂಲಕ ಮಾನವನಿಗೆ ಹರಡುತ್ತದೆ. ಸಾವಿನ ಪ್ರಮಾಣ ಹೆಚ್ಚಿರುವುದರಿಂದ ಈ ವೈರಸ್ ಅತ್ಯಂತ ಅಪಾಯಕಾರಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಾರ್ಬರ್ಗ್ ವೈರಸ್ನ ರೋಗಲಕ್ಷಣಗಳು ಎಲೋಬಾ ವೈರಸ್ನಂತೆಯೇ ಇರುತ್ತವೆ. ಈ ವೈರಸ್ ಸೋಂಕಿಗೆ ಒಳಗಾದವರಲ್ಲಿ ಚರ್ಮದ ಉರಿಯೂತ, ಅತಿಸಾರ,ಅಧಿಕ ಜ್ವರ, ತೀವ್ರ ತಲೆನೋವು, ಸ್ನಾಯು ನೋವು, ವಾಂತಿ, ಗಂಟಲು ನೋವು ಕಂಡುಬರುತ್ತದೆ. ಗಂಭೀರ ಪ್ರಕರಣಗಳಲ್ಲಿ ವೈರಸ್ ಆಂತರಿಕ ರಕ್ತಸ್ರಾವ ಮತ್ತು ಅಂಗ ವೈಫಲ್ಯಕ್ಕೆ ಕಾರಣವಾಗುತ್ತದೆ. ಸೋಂಕು ಹೆಚ್ಚಿದಂತೆಲ್ಲಾ ದಿಢೀರ್ ತೂಕ ಇಳಿಕೆ, ಮೂಗು, ಕಣ್ಣುಗಳು, ಬಾಯಿಯಿಂದ ರಕ್ತಸ್ರಾವ ಮತ್ತು ಮಾನಸಿಕ ಗೊಂದಲಕ್ಕೆ ಕಾರಣವಾಗಲಿದೆ. ಈ ವೈರಸ್ ಅನ್ನು 1961ರಲ್ಲಿ ಮೊದಲ ಬಾರಿಗೆ ಜರ್ಮನಿಯ ಫ್ರಾಂಕ್ಫರ್ಟ್ನಲ್ಲಿ ಗುರುತಿಸಲಾಗಿದೆ.
ಆರೋಗ್ಯ ತಜ್ಞರ ಪ್ರಕಾರ, ಮಾರ್ಬರ್ಗ್ ವೈರಸ್ಗೆ ನಿರ್ದಿಷ್ಟ ಚಿಕಿತ್ಸೆಯಿಲ್ಲ ಮತ್ತು ಮರಣದ ಪ್ರಮಾಣ 24%ದಿಂದ 88% ಆಗಿದೆ. ಪ್ರಸ್ತುತ ಮಾರ್ಬರ್ಗ್ ವೈರಸ್ನ ನಿರ್ವಹಣೆಯು ರಕ್ತದ ಉತ್ಪನ್ನಗಳು, ಪ್ರತಿರಕ್ಷಣಾ ಚಿಕಿತ್ಸೆ ಮತ್ತು ಕೆಲವು ಔಷಧಿಗಳನ್ನು ಒಳಗೊಂಡಿರುತ್ತದೆ. ಇದುವರೆಗೆ ಯಾವುದೇ ಲಸಿಕೆ ಲಭ್ಯವಿಲ್ಲ, ಲಸಿಕೆ ಅಭಿವೃದ್ಧಿ ಪ್ರಕ್ರಿಯೆ ಪ್ರಾರಂಭಿಕ ಹಂತದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ.