ಪಾಕಿಸ್ತಾನ | ರೈಲು ಅಪಹರಣ ಪ್ರಕರಣ : 155 ಒತ್ತೆಯಾಳುಗಳ ರಕ್ಷಣೆ, ಭದ್ರತಾ ಪಡೆಗಳಿಂದ 27 ಪ್ರತ್ಯೇಕತಾವಾದಿಗಳ ಹತ್ಯೆ

Pc: AFP Photo
ಪೇಶಾವರ: ಕ್ವೆಟ್ಟಾದಿಂದ ಪೇಶಾವರಕ್ಕೆ ತೆರಳುತ್ತಿದ್ದ ಜಾಫರ್ ಎಕ್ಸ್ ಪ್ರೆಸ್ ರೈಲನ್ನು ವಾಯವ್ಯ ಬಲೂಚಿಸ್ತಾನದಲ್ಲಿ ಅಪಹರಿಸಿದ ಘಟನೆಯ ಬೆನ್ನಲ್ಲೇ ಭದ್ರತಾ ಪಡೆ ಪ್ರತಿದಾಳಿ ನಡೆಸಿ 27 ಪ್ರತ್ಯೇಕತಾವಾದಿಗಳನ್ನು ಹತ್ಯೆ ಮಾಡಿ 155 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.
ಮಂಗಳವಾರ ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರದೇಶದಲ್ಲಿ 400 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಜಾಫರ್ ಎಕ್ಸ್ ಪ್ರೆಸ್ ರೈಲನ್ನು ಪ್ರತ್ಯೇಕತಾವಾದಿಗಳು ಅಪಹರಿಸಿದ್ದರು. ಹಲವು ಸುರಂಗಗಳನ್ನು ಹೊಂದಿದ್ದ ಪರ್ವತ ಶ್ರೇಣಿಯಲ್ಲಿ ರೈಲು ಹೋಗುತ್ತಿದ್ದ ವೇಳೆ ದಾಳಿ ನಡೆದಿದೆ. ದಾಳಿಕೋರರು ಗುಂಡು ಹಾರಿಸಿದ್ದಲ್ಲದೇ 8ನೇ ಸಂಖ್ಯೆಯ ಸುರಂಗದಲ್ಲಿ ರೈಲ್ವೆ ಹಳಿ ಸ್ಫೋಟಿಸುವ ಪ್ರಯತ್ನ ಮಾಡಿದರು. ಇದರಿಂದ ರೈಲು ಹಳಿ ತಪ್ಪಿತು ಎನ್ನಲಾಗಿದೆ. ರೈಲಿನ ಭದ್ರತಾ ಸಿಬ್ಬಂದಿ ಮಿಂಚಿನ ಪ್ರತಿದಾಳಿ ನಡೆಸಿದರೂ, ಸುರಂಗದ ನಡುವೆ ದಾಳಿಕೋರರು ರೈಲನ್ನು ವಶಪಡಿಸಿಕೊಂಡರು.
ರಕ್ಷಿಸಲ್ಪಟ್ಟ ಪ್ರಯಾಣಿಕರಲ್ಲಿ 58 ಪುರುಷರು, 31 ಮಹಿಳೆಯರು ಮತ್ತು 15 ಮಕ್ಕಳು ಸೇರಿದ್ದಾರೆ. ಅವರನ್ನು ಮ್ಯಾಚ್ ಪಟ್ಟಣದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ಒತ್ತೆಯಾಳುಗಳ ರಕ್ಷಣಾ ಕಾರ್ಯ ಮುಂದುವರಿದಿದೆ. ಒತ್ತೆಯಾಳಾಗಿರುವ ಪ್ರಯಾಣಿಕರ ಸಂಬಂಧಿಕರಿಗೆ ಸಹಾಯ ಮಾಡಲು ಪೇಶಾವರ ಮತ್ತು ಕ್ವೆಟ್ಟಾ ರೈಲು ನಿಲ್ದಾಣಗಳಲ್ಲಿ ತುರ್ತು ಸಹಾಯವಾಣಿಗಳನ್ನು ಸ್ಥಾಪಿಸಲಾಗಿದೆ.
ರಮಝಾನ್ ಉಪವಾಸದ ಸಂದರ್ಭದಲ್ಲಿ ನಡೆದ ಈ ಘಟನೆಯನ್ನು ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಖಂಡಿಸಿದ್ದಾರೆ. ಪಾಕಿಸ್ತಾನದಲ್ಲಿ ಶಾಂತಿ ಮತ್ತು ಅವ್ಯವಸ್ಥೆಯನ್ನು ಕೆಡಿಸುವ ಪ್ರತಿಯೊಂದು ಪಿತೂರಿಯನ್ನು ನಾವು ವಿಫಲಗೊಳಿಸುತ್ತೇವೆ ಎಂದು ಹೇಳಿದ್ದಾರೆ.