ಗಾಝಾದ 17,000 ಮಕ್ಕಳು ಪೋಷಕರಿಂದ ಬೇರ್ಪಟ್ಟಿದ್ದಾರೆ ; ವಿಶ್ವಸಂಸ್ಥೆ ವರದಿ
Photo: NDTV
ಜಿನೆವಾ: ಗಾಝಾದಲ್ಲಿ ಸುಮಾರು 4 ತಿಂಗಳಿಂದ ನಡೆಯುತ್ತಿರುವ ಯುದ್ಧದಿಂದಾಗಿ ಕನಿಷ್ಟ 17,000 ಮಕ್ಕಳು ತಮ್ಮ ಪೋಷಕರಿಂದ ಬೇರ್ಪಟ್ಟಿದ್ದಾರೆ ಅಥವಾ ಒಬ್ಬಂಟಿಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ತುರ್ತು ನಿಧಿ `ಯುನಿಸೆಫ್' ವರದಿ ಮಾಡಿದೆ.
ಈ ಅಂಕಿಅಂಶವು ಗಾಝಾದಿಂದ ಸ್ಥಳಾಂತರಗೊಂಡ ಒಟ್ಟು ಜನಸಂಖ್ಯೆಯ(ಸುಮಾರು 1.7 ದಶಲಕ್ಷ ಜನ) 1%ದಷ್ಟು ಆಗಿದೆ. ಹೀಗೆ ಪೋಷಕರಿಂದ ಬೇರ್ಪಟ್ಟಿರುವ ಪ್ರತಿಯೊಂದು ಮಗು ಕೂಡಾ ಆಘಾತ ಮತ್ತು ದುಃಖದ ಹೃದಯವಿದ್ರಾವಕ ಕತೆಯನ್ನು ಹೊಂದಿದೆ' ಎಂದು ಯುನಿಸೆಫ್ನ ಫೆಲೆಸ್ತೀನಿಯನ್ ಪ್ರದೇಶ ಘಟಕದ ವಕ್ತಾರ ಜೊನಾಥನ್ ಕ್ರಿಕ್ಸ್ ಹೇಳಿದ್ದಾರೆ. ಜಿನೆವಾದಲ್ಲಿ ವಿಶ್ವಸಂಸ್ಥೆಯ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಜೆರುಸಲೇಂನಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿದ್ದರು.
ಹೀಗೆ ಪ್ರತ್ಯೇಕಗೊಂಡ ಮಕ್ಕಳ ಗುರುತು ಪತ್ತೆಹಚ್ಚುವುದು ಅತ್ಯಂತ ಕಷ್ಟದ ಕೆಲಸವಾಗಿದೆ. ಯಾಕೆಂದರೆ ಹೆಚ್ಚಿನ ಸಂದರ್ಭದಲ್ಲಿ ಇಂತಹ ಮಕ್ಕಳು ತೀವ್ರ ಗಾಯಗೊಂಡ ಸ್ಥಿತಿಯಲ್ಲಿ ಇರುವುದರಿಂದ ಅಥವಾ ಮಾನಸಿಕ ಆಘಾತಕ್ಕೆ ಒಳಗಾಗಿರುವುದರಿಂದ ತಮ್ಮ ಹೆಸರನ್ನು ಹೇಳಲೂ ಸಾಧ್ಯವಾಗುತ್ತಿಲ್ಲ. ಸಂಘರ್ಷದ ಪರಿಸ್ಥಿತಿಗಳಲ್ಲಿ ಪ್ರತ್ಯೇಕಗೊಂಡ ಮಕ್ಕಳನ್ನು ಸಾಮಾನ್ಯವಾಗಿ ದೂರದ ಸಂಬಂಧಿಕರು ನೋಡಿಕೊಳ್ಳುತ್ತಾರೆ. ಆದರೆ ಗಾಝಾದಲ್ಲಿ ಈ ಪರಿಸ್ಥಿತಿಯಿಲ್ಲ. ಆಹಾರ, ನೀರು ಅಥವಾ ಆಶ್ರಯದ ಕೊರತೆಯ ಹಿನ್ನೆಲೆಯಲ್ಲಿ ತಮ್ಮ ಕುಟುಂಬದ ಯೋಗಕ್ಷೇಮ ನೋಡಿಕೊಳ್ಳುವುದೇ ಸಮಸ್ಯೆಯಾಗುತ್ತಿದೆ' ಎಂದವರು ಹೇಳಿದ್ದಾರೆ.
ತಮ್ಮ ಹೆತ್ತವರ ಜತೆಗಿಲ್ಲದ ಮಕ್ಕಳನ್ನು ಪ್ರತ್ಯೇಕಗೊಂಡ ಮಕ್ಕಳು ಹಾಗೂ ಇತರ ಸಂಬಂಧಿಕರ ಜತೆಗಿಲ್ಲದ ಪ್ರತ್ಯೇಕಗೊಂಡ ಮಕ್ಕಳನ್ನು ಒಬ್ಬಂಟಿ ಮಕ್ಕಳು ಎಂದು ಯುನಿಸೆಫ್ ವರ್ಗೀಕರಿಸುತ್ತದೆ.
`ನಿರಂತರ ಆತಂಕ, ಆಹಾರದ ಕೊರತೆ, ನಿದ್ದೆಯ ಕೊರತೆಯಿಂದ ಈ ಮಕ್ಕಳು ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಪ್ರತೀ ಬಾರಿ ಬಾಂಬ್ ದಾಳಿಯ ಸದ್ದು ಕೇಳಿದಾಗಲೆಲ್ಲಾ ಅವರು ಭಯಭೀತರಾಗುತ್ತಾರೆ. ಗಾಝಾ ಸಂಘರ್ಷ ಉಲ್ಬಣಿಸುವುದಕ್ಕೂ ಮುನ್ನ ಗಾಝಾ ಪಟ್ಟಿಯ 5 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಮಾನಸಿಕ ಆರೋಗ್ಯ ಮತ್ತು ಮಾನಸಿಕ-ಸಾಮಾಜಿಕ ನೆರವಿನ ಅಗತ್ಯವಿತ್ತು. ಈಗ ಬಹುತೇಕ ಎಲ್ಲಾ ಮಕ್ಕಳಿಗೂ, ಅಂದರೆ 10 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಇದರ ಅಗತ್ಯವಿದೆ. ತಮಗೆ ಸಂಬಂಧಪಡದ ಕಾರಣಕ್ಕೆ ಈ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಅಕ್ಟೋಬರ್ 7ರಂದು ನಡೆದ ಮತ್ತು ಆ ಬಳಿಕ ನಡೆಯುತ್ತಿರುವ ರೀತಿಯ ಹಿಂಸಾಚಾರವನ್ನು ಯಾವ ಮಕ್ಕಳೂ ಎದುರಿಸಬಾರದು. ಗಾಝಾದಲ್ಲಿ ತಕ್ಷಣ ಕದನ ವಿರಾಮ ಜಾರಿಯಾದರೆ ಮಕ್ಕಳ ಹೆತ್ತವರನ್ನು ಪತ್ತೆಹಚ್ಚುವ ಕಾರ್ಯ ಸುಗಮವಾಗಲಿದೆ ಎಂದು ಯುನಿಸೆಫ್ ಆಗ್ರಹಿಸಿದೆ.
40 ಸಾವಿರ ಮಕ್ಕಳಿಗೆ ಮಾನಸಿಕ ಆರೋಗ್ಯ ಬೆಂಬಲ
ಗಾಝಾ ಸಂಘರ್ಷ ಆರಂಭಗೊಂಡಂದಿನಿಂದ (ಅಕ್ಟೋಬರ್ 7) 40,000ಕ್ಕೂ ಅಧಿಕ ಮಕ್ಕಳಿಗೆ ಮಾನಸಿಕ ಆರೋಗ್ಯ, ಮಾನಸಿಕ ಸಾಮಾಜಿಕ ಬೆಂಬಲ ಒದಗಿಸಲಾಗಿದ್ದು 10,000 ವೈದ್ಯಕೀಯ ಸಿಬಂದಿ ಆರೈಕೆಯಲ್ಲಿ ನಿರತರಾಗಿದ್ದಾರೆ. ಇಲ್ಲಿ ಮಕ್ಕಳಿಗೆ ಆಪ್ತ ಸಮಾಲೋಚನೆ ಒದಗಿಸಲಾಗುತ್ತಿದೆ. ಮಕ್ಕಳು ಆಟವಾಡುವುದು, ನೃತ್ಯ ಮಾಡುವುದು, ಹಾಡು ಹಾಡುತ್ತಾ ಖುಷಿಯಿಂದ ನಗುತ್ತಿರುವುದನ್ನು ಕಂಡು ನಿರಾಳವಾಗುತ್ತಿದೆ. ಆದರೆ ಇಷ್ಟು ಸಾಲದು. ಮಕ್ಕಳನ್ನು ಅವರ ಪೋಷಕರ ಜತೆ ಸೇರಿಸುವ ಸವಾಲು ಇದೆ' ಎಂದು ಜೊನಾಥನ್ ಕ್ರಿಕ್ಸ್ ಹೇಳಿದ್ದಾರೆ.