ಅಲ್-ಶಿಫಾ ಆಸ್ಪತ್ರೆಯಲ್ಲಿ 2 ಶಿಶುಗಳ ಮೃತ್ಯು: ವಿಶ್ವಸಂಸ್ಥೆ
Photo: PTI
ಜಿನೆವಾ: ಗಾಝಾದ ಅಲ್-ಶಿಫಾ ಆಸ್ಪತ್ರೆಯಲ್ಲಿದ್ದ 31 ಮಕ್ಕಳನ್ನು ಸ್ಥಳಾಂತರಿಸುವುದಕ್ಕೂ ಮುನ್ನ ಅವಧಿಪೂರ್ವ ಜನಿಸಿದ್ದ 2 ಶಿಶುಗಳು ಸಾವನ್ನಪ್ಪಿವೆ ಎಂದು ವಿಶ್ವಸಂಸ್ಥೆ ಮಂಗಳವಾರ ಹೇಳಿದೆ.
ಅಲ್-ಶಿಫಾ ಆಸ್ಪತ್ರೆ ಸಾವಿನ ವಲಯವಾಗಿ ಪರಿಣಮಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದ ವಿಶ್ವ ಆರೋಗ್ಯಸಂಸ್ಥೆ , ಆಸ್ಪತ್ರೆಯಲ್ಲಿದ್ದ ಅವಧಿಪೂರ್ಣ ಜನಿಸಿದ್ದ 31 ಶಿಶುಗಳ ಸ್ಥಳಾಂತರಕ್ಕೆ ನೆರವಾಗಿದೆ. ಇದರಲ್ಲಿ 28 ಮಕ್ಕಳು ಸೋಮವಾರ ಈಜಿಪ್ಟ್ಗೆ ಆಗಮಿಸಿವೆ. ಈ ಶಿಶುಗಳು ಗಂಭೀರ ಸೋಂಕುಗಳ ವಿರುದ್ಧ ಹೋರಾಡುತ್ತಿದ್ದು ಆರೋಗ್ಯ ರಕ್ಷಣೆಯ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಉಳಿದ 3 ಶಿಶುಗಳನ್ನು ಅಲ್-ಶಿಫಾದಿಂದ ದಕ್ಷಿಣ ಗಾಝಾದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸ್ಥಳಾಂತರಕ್ಕೂ ಮುನ್ನ 2 ಶಿಶುಗಳು ಆರೋಗ್ಯ ರಕ್ಷಣೆಯ ಕೊರತೆಯಿಂದ ಸಾವನ್ನಪ್ಪಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಕ್ರಿಶ್ಚಿಯನ್ ಲಿಂಡ್ಮಿಯರ್ ಜಿನೆವಾದಲ್ಲಿ ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಈಜಿಪ್ಟ್ಗೆ ಸ್ಥಳಾಂತರಿಸಲಾದ 28 ಶಿಶುಗಳಲ್ಲಿ 20 ಶಿಶುಗಳ ಜತೆ ಯಾರೂ ಸಂಬಂಧಿಕರು ಇರಲಿಲ್ಲ. ಕೆಲವು ಅನಾಥ ಶಿಶುಗಳಾಗಿವೆ ಎಂದು ಯುನಿಸೆಫ್ ವಕ್ತಾರ ಜೇಮ್ಸ್ ಎಲ್ಡರ್ ಜಿನೆವಾದಲ್ಲಿ ಸುದ್ಧಿಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ಮಧ್ಯೆ, ಗಾಝಾದ ಜಬಾಲ ನಿರಾಶ್ರಿತರ ಶಿಬಿರವನ್ನು ಇಸ್ರೇಲ್ನ 162ನೇ ಬಟಾಲಿಯನ್ ಸುತ್ತುವರಿದಿದ್ದು ನೆಲದ ಮೇಲಿನ ಆಕ್ರಮಣ ತೀವ್ರಗೊಳಿಸಲು ಪದಾತಿ ದಳ ಸನ್ನದ್ಧವಾಗಿದೆ. ಫಿರಂಗಿ ಪಡೆ ಹಾಗೂ ವಾಯುಪಡೆ ಜಬಾಲ ಪ್ರದೇಶದ ಮೇಲೆ ಭಾರೀ ದಾಳಿ ನಡೆಸಿದೆ. ಗಾಝಾ ಪಟ್ಟಿಯಲ್ಲಿ ವಾಯುಪಡೆ ಹಮಾಸ್ನ 250 ಗುರಿಗಳ ಮೇಲೆ ದಾಳಿ ನಡೆಸಿದೆ ಎಂದು ಇಸ್ರೇಲ್ ಭದ್ರತಾ ಪಡೆ ಹೇಳಿದೆ.