ಗಾಝಾದಲ್ಲಿ 2 ದಿನದ ಕದನ ವಿರಾಮ : ಈಜಿಪ್ಟ್ ಪ್ರಸ್ತಾಪ
ಒತ್ತೆಯಾಳು- ಫೆಲೆಸ್ತೀನ್ ಕೈದಿಗಳ ವಿನಿಮಯಕ್ಕೆ ಸಲಹೆ
ಸಾಂದರ್ಭಿಕ ಚಿತ್ರ PC : PTI
ಕೈರೊ : ಗಾಝಾದಲ್ಲಿ 2 ದಿನಗಳ ಕದನ ವಿರಾಮ ಯೋಜನೆಯನ್ನು ಈಜಿಪ್ಟ್ ಪ್ರಸ್ತಾಪಿಸಿದೆ. ಇದರ ಅನ್ವಯ, ಗಾಝಾದಲ್ಲಿ ಒತ್ತೆಸೆರೆಯಲ್ಲಿರುವ 4 ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ ಇಸ್ರೇಲ್ ಕೆಲವು ಫೆಲೆಸ್ತೀನ್ ಕೈದಿಗಳನ್ನು ಬಿಡುಗಡೆಗೊಳಿಸಬೇಕಿದೆ.
ಗಾಝಾದಲ್ಲಿ ಒಂದು ವರ್ಷಕ್ಕಿಂತಲೂ ಅಧಿಕ ಸಮಯದಿಂದ ಮುಂದುವರಿದಿರುವ ಸಂಘರ್ಷದ ತೀವ್ರತೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕದನ ವಿರಾಮ ಒಪ್ಪಂದದ ಬಗ್ಗೆ ಖತರ್ ನಲ್ಲಿ ಮಾತುಕತೆ ನಡೆಯುತ್ತಿರುವಂತೆಯೇ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತಾಹ್ ಅಲ್-ಸಿಸಿ ಈ ಪ್ರಸ್ತಾಪವನ್ನು ಮುಂದಿರಿಸಿದ್ದಾರೆ.
ಕೈರೊದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಶ್ವತ ಕದನ ವಿರಾಮ ಒಪ್ಪಂದವನ್ನು ಅಂತಿಮಗೊಳಿಸುವ ಪ್ರಯತ್ನಗಳಿಗೆ ಪೂರಕವಾಗಿ ತಾತ್ಕಾಲಿಕ ಕದನ ವಿರಾಮ ಜಾರಿಯ ಬಗ್ಗೆ 10 ದಿನಗಳೊಳಗೆ ಮಾತುಕತೆ ಪುನರಾರಂಭಗೊಳ್ಳಬೇಕು ಎಂದು ಆಗ್ರಹಿಸಿದರು.
ಖತರ್ ನ ದೋಹಾದಲ್ಲಿ ನಡೆಯುತ್ತಿರುವ ಕದನ ವಿರಾಮ ಮಾತುಕತೆಯಲ್ಲಿ ಅಮೆರಿಕದ ಸಿಐಎ ನಿರ್ದೇಶಕರು ಮತ್ತು ಇಸ್ರೇಲ್ ಗುಪ್ತಚರ ಏಜೆನ್ಸಿ ಮೊಸಾದ್ನ ಅಧಿಕಾರಿಗಳು ಪಾಲ್ಗೊಂಡಿದ್ದಾರೆ. ಹಮಾಸ್ ಮಾತುಕತೆಯಲ್ಲಿ ಪಾಲ್ಗೊಂಡಿಲ್ಲ.
ಈಜಿಪ್ಟ್ ಅಧ್ಯಕ್ಷರ ಪ್ರಸ್ತಾವನೆ ಬಗ್ಗೆ ಪ್ರತಿಕ್ರಿಯಿಸಿರುವ ಫೆಲೆಸ್ತೀನ್ ಅಧಿಕಾರಿಗಳು `ಯಾವುದೇ ಒಪ್ಪಂದವು ಯುದ್ಧವನ್ನು ಅಂತ್ಯಗೊಳಿಸಬೇಕು ಮತ್ತು ಇಸ್ರೇಲ್ ಪಡೆಗಳನ್ನು ಗಾಝಾದಿಂದ ಹೊರಕಳುಹಿಸಬೇಕು' ಎಂದಿದ್ದಾರೆ.
ದೋಹಾದಲ್ಲಿನ ಮಾತುಕತೆಯ ಉದ್ದೇಶ ಅಲ್ಪಾವಧಿಯ ಕದನ ವಿರಾಮವನ್ನು ಸಾಧ್ಯವಾಗಿಸುವುದು. ಜತೆಗೆ, ಇಸ್ರೇಲ್ ನಿಂದ ಹಮಾಸ್ ಕೈದಿಗಳ ಬಿಡುಗಡೆಗೆ ಪ್ರತಿಯಾಗಿ ಹಮಾಸ್ ನಿಂದ ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆಯು ಕದನ ವಿರಾಮದ ಪ್ರಮುಖ ಅಂಶಗಳಾಗಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
► ಉತ್ತರ ಗಾಝಾದಲ್ಲಿ 1 ಲಕ್ಷ ನಿವಾಸಿಗಳು ಅತಂತ್ರ ಸ್ಥಿತಿಯಲ್ಲಿ
ಇಸ್ರೇಲ್ನ ಟ್ಯಾಂಕ್ಗಳು ಉತ್ತರ ಗಾಝಾದ ಎರಡು ನಗರಗಳು ಹಾಗೂ ಐತಿಹಾಸಿಕ ನಿರಾಶ್ರಿತರ ಶಿಬಿರ ಪ್ರದೇಶದ ಆಳಕ್ಕೆ ನುಗ್ಗಿದ್ದು ಸುಮಾರು 1 ಲಕ್ಷ ನಿವಾಸಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಫೆಲೆಸ್ತೀನ್ನ ತುರ್ತು ಸೇವೆಗಳ ಏಜೆನ್ಸಿ ಸೋಮವಾರ ಹೇಳಿದೆ.
ಜಬಾಲಿಯಾ, ಬೈತ್ ಲಾಹಿಯಾ ಮತ್ತು ಬೈತ್ ಹನೌನ್ ನಗರಗಳಲ್ಲಿ ಸುಮಾರು 1 ಲಕ್ಷ ಜನರು ಸಿಕ್ಕಿಬಿದ್ದಿದ್ದು ಆಹಾರ, ಔಷಧ ಪೂರೈಕೆಯಿಲ್ಲದೆ ಬವಣೆ ಪಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಬಾಲಿಯಾ ನಿರಾಶ್ರಿತರ ಶಿಬಿರ ಪ್ರದೇಶದಲ್ಲಿರುವ ಕಮಲ್ ಅಡ್ವಾನ್ ಆಸ್ಪತ್ರೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 100ಕ್ಕೂ ಅಧಿಕ ಶಂಕಿತ ಹಮಾಸ್ ಹೋರಾಟಗಾರರನ್ನು ಬಂಧಿಸಿರುವುದಾಗಿ ಇಸ್ರೇಲ್ ಸೇನೆ ಹೇಳಿದೆ.
ಆದರೆ ಆಸ್ಪತ್ರೆಯಲ್ಲಿ ಸಶಸ್ತ್ರ ಹೋರಾಟಗಾರರ ಉಪಸ್ಥಿತಿಯನ್ನು ಹಮಾಸ್ ಮತ್ತು ಆಸ್ಪತ್ರೆಯ ಮೂಲಗಳು ನಿರಾಕರಿಸಿವೆ. ಉತ್ತರ ಗಾಝಾದಲ್ಲಿ ಸೋಮವಾರ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಟ 19 ಜನರು ಸಾವನ್ನಪ್ಪಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಹೇಳಿದೆ.