ಸಿರಿಯಾ | ಭೀಕರ ಸಂಘರ್ಷ, ಪ್ರತೀಕಾರದ ದಾಳಿಗೆ 2 ದಿನಗಳಲ್ಲಿ 1000ಕ್ಕೂ ಅಧಿಕ ಮಂದಿ ಬಲಿ

(AP Photo/Omar Albam)
ಡಮಾಸ್ಕಸ್: ಸಿರಿಯಾ ಭದ್ರತಾ ಪಡೆಗಳು ಮತ್ತು ಪದಚ್ಯುತ ಅಧ್ಯಕ್ಷ ಬಶರ್ ಅಸ್ಸಾದ್ ಅವರ ಬೆಂಬಲಿಗರ ನಡುವೆ ಎರಡು ದಿನಗಳಿಂದ ನಡೆಯುತ್ತಿರುವ ಭೀಕರ ಸಂಘರ್ಷದಲ್ಲಿ ಮತ್ತು ಪ್ರತೀಕಾರದ ದಾಳಿ ಘಟನೆಗಳಲ್ಲಿ 1000ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹದಿನಾಲ್ಕು ವರ್ಷಗಳ ಹಿಂದೆ ಆರಂಭವಾದ ಸಿರಿಯಾ ಸಂಘರ್ಷದಲ್ಲೇ ಇದು ಅತ್ಯಂತ ಕರಾಳ ಅಧ್ಯಾಯ ಎನಿಸಿದೆ.
ಸಂಘರ್ಷದಲ್ಲಿ ಸುಮಾರು 745 ಮಂದಿ ನಾಗರಿಕರು ಮೃತಪಟ್ಟಿದ್ದು, ಬಹುತೇಕ ಮಂದಿಯನ್ನು ಅತ್ಯಂತ ಸನಿಹದಿಂದ ಗುಂಡಿಟ್ಟು ಹತ್ಯೆ ಮಾಡಲಾಗಿದೆ ಎಂದು ಬ್ರಿಟನ್ ಮೂಲದ ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ಹೇಳಿದೆ. 125 ಮಂದಿ ಸರಕಾರಿ ಭದ್ರತಾ ಪಡೆ ಸಿಬ್ಬಂದಿ ಹಾಗೂ 148 ಮಂದಿ ಸಶಸ್ತ್ರದಾರಿಗಳು ಮೃತಪಟ್ಟವರಲ್ಲಿ ಸೇರಿದ್ದಾರೆ. ಲತಾಕಿಯಾ ನಗರದ ಬಹುತೇಕ ಕಡೆಗಳಲ್ಲಿ ವಿದ್ಯುತ್ ಹಾಗೂ ಕುಡಿಯುವ ನೀರಿನ ಸಂಪರ್ಕ ಅಸ್ತವ್ಯಸ್ತಗೊಂಡಿದೆ.
ಗುರುವಾರ ಸಂಘರ್ಷ ಉಲ್ಬಣಿಸಿದ್ದು, ಸಿರಿಯಾದ ನೂತನ ಸರಕಾರಕ್ಕೆ ಇದು ಸವಾಲು ಎನಿಸಿದೆ. ಅಸ್ಸಾದ್ ಅವರನ್ನು ಅಧಿಕಾರದಿಂದ ಕಿತ್ತೊಗೆದು ಅಧಿಕಾರವನ್ನು ವಶಪಡಿಸಿಕೊಂಡ ಮೂರು ತಿಂಗಳ ಬಳಿಕ ಹಿಂಸಾಚಾರ ಉಲ್ಬಣಿಸಿದೆ.
ಅಸ್ಸಾದ್ ಅವರ ಅಲ್ಪಸಂಖ್ಯಾತ ಅಲವೈಟ್ ಜನಾಂಗದ ವಿರುದ್ಧ ಸರಕಾರಕ್ಕೆ ನಿಷ್ಠವಾಗಿದ್ದ ಬಂದೂಕುಧಾರಿ ಪ್ರತೀಕಾರದ ಹತ್ಯೆ ಮಾಡಿದ ಬಳಿಕ ಹಿಂಸಾಚಾರ ಭುಗಿಲೆದ್ದಿದೆ. ಇದು ಹಯಾತ್ ತಹ್ರೀರ್ ಅಲ್ ಶಾಮ್ಗೆ ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಿಂದಿನ ಸರಕಾರವನ್ನು ಕಿತ್ತೊಗೆಯುವಲ್ಲಿ ಈ ಸಂಘಟನೆ ಪ್ರಮುಖ ಪಾತ್ರ ವಹಿಸಿತ್ತು. ಅಲವೈಟ್ ಜನಾಂಗ ಅಸ್ಸಾದ್ ಅವರನ್ನು ದಶಕಗಳಿಂದಲೂ ಬೆಂಬಲಿಸುತ್ತಾ ಬಂದಿದೆ.
ಅಲವೈಟ್ಗಳ ಮನೆಗಳಿಗೆ ನುಗ್ಗಿ ಮತ್ತು ಬೀದಿ ಬೀದಿಗಳಲ್ಲಿ ಅವರ ಹತ್ಯೆ ನಡೆಯುತ್ತಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅಲವೈಟಿಗಳ ಹಲವು ಮನೆಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚಲಾಗಿದೆ ಎಂದು ಕರಾವಳಿ ಭಾಗದ ನಿವಾಸಿಗಳು ಹೇಳಿಕೊಂಡಿದ್ದಾರೆ.