ಮಾರಣಾಂತಿಕ ತಾಪಮಾನದ ದಶಕ : ವಿಶ್ವಸಂಸ್ಥೆ ಘೋಷಣೆ
ಹವಾಮಾನ ವೈಪರೀತ್ಯ ವಿರುದ್ಧ ಕ್ರಮಕ್ಕೆ ಗುಟೆರಸ್ ಕರೆ
ಸಾಂದರ್ಭಿಕ ಚಿತ್ರ | PC : PTI
ವಿಶ್ವಸಂಸ್ಥೆ : ಜಗತ್ತು ಮಾರಣಾಂತಿಕ ಶಾಖದ ದಶಕಕ್ಕೆ ಸಾಕ್ಷಿಯಾಗಿದೆ. 2024ಕ್ಕೆ ಅಂತ್ಯಗೊಳ್ಳುವ ಒಂದು ದಶಕವು ಅಸಾಮಾನ್ಯ ತಾಪಮಾನದ ಅವಧಿಯಾಗಿದ್ದು ದಾಖಲೆಯ ಗರಿಷ್ಟ ಶಾಖದ ವರ್ಷಗಳಾಗಿದ್ದವು ಎಂದು ವಿಶ್ವಸಂಸ್ಥೆ ಘೋಷಿಸಿದೆ.
ಜಗತ್ತು ಈ `ವಿನಾಶದೆಡೆಗಿನ ರಸ್ತೆಯಿಂದ' ದೂರ ಸರಿಯಬೇಕು ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ತಮ್ಮ ಹೊಸ ವರ್ಷದ ಸಂದೇಶದಲ್ಲಿ ಕರೆ ನೀಡಿದ್ದಾರೆ.
ವಿಶ್ವಸಂಸ್ಥೆಯ ಅಂಗಸಂಸ್ಥೆ ವಿಶ್ವ ಹವಾಮಾನ ಸಂಸ್ಥೆ(ಡಬ್ಮ್ಯೂಎಂಒ) ಜನವರಿಯಲ್ಲಿ ವರ್ಷದ ಅಧಿಕೃತ ತಾಪಮಾನ ಅಂಕಿ ಅಂಶವನ್ನು ಪ್ರಕಟಿಸುತ್ತದೆ. ಒಂದು ದಶಕದ ಅಸಾಮಾನ್ಯ ತಾಪಮಾನಕ್ಕೆ ಮಾನವ ಚಟುವಟಿಕೆಗಳು ಪೂರಕ ಉತ್ತೇಜನ ಒದಗಿಸಿವೆ ಮತ್ತು ಹೆಚ್ಚುತ್ತಿರುವ ಹವಾಮಾನ ವೈಪರೀತ್ಯಗಳಿಂದಾಗಿ 2024 ಗರಿಷ್ಟ ಶಾಖದ ವರ್ಷವಾಗಿ ದಾಖಲೆ ಬರೆಯಲಿದೆ ಎಂದು ಡಬ್ಲ್ಯೂಎಂಒ ಹೇಳಿದೆ.
ಹಸಿರುಮನೆ ಅನಿಲ ಹೊರಸೂಸುವಿಕೆ ಹೊಸ ಎತ್ತರ ತಲುಪಲಿದೆ ಮತ್ತು ಭವಿಷ್ಯದಲ್ಲಿ ಇನ್ನಷ್ಟು ತಾಪಮಾನ ಹೆಚ್ಚಲು ಕಾರಣವಾಗಲಿದೆ ಎಂದು ವಿಶ್ವ ಹವಾಮಾನ ಏಜೆನ್ಸಿ ಎಚ್ಚರಿಕೆ ನೀಡಿದೆ. `ನಾವು ಈಗಷ್ಟೇ ಮಾರಣಾಂತಿಕ ಶಾಖದ ದಶಕವನ್ನು ಹಾದು ಬಂದಿದ್ದೇವೆ ಎಂದು ಅಧಿಕೃತವಾಗಿ ವರದಿ ಮಾಡಬಹುದು. ಇದು ವಾಸ್ತವವಾಗಿ ಹವಾಮಾನ ಬಿಕ್ಕಟ್ಟು ಆಗಿದೆ. ವಿನಾಶದೆಡೆಗಿನ ರಸ್ತೆಯಿಂದ ನಾವು ದೂರ ಸರಿಯಬೇಕು ಮತ್ತು ನಮಗೆ ಹೆಚ್ಚಿನ ಸಮಯವಿಲ್ಲ. ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿತಗೊಳಿಸುವ ಮೂಲಕ 2025ರಲ್ಲಿ ದೇಶಗಳು ಜಗತ್ತನ್ನು ಸುರಕ್ಷಿತ ಪಥದಲ್ಲಿ ಇರಿಸಬೇಕು ಮತ್ತು ನವೀಕರಿಸಬಹುದಾದ ಇಂಧನಗಳ ಭವಿಷ್ಯಕ್ಕೆ ಪರಿವರ್ತನೆಯನ್ನು ಬೆಂಬಲಿಸುವ ಮೂಲಕ ಜಗತ್ತನ್ನು ಸುರಕ್ಷಿತ ಹಾದಿಯಲ್ಲಿ ಮುನ್ನಡೆಸಬೇಕು. ಇದು ಅತ್ಯಗತ್ಯ ಮತ್ತು ಇದು ಸಾಧ್ಯ' ಎಂದು ಗುಟೆರಸ್ ಹೇಳಿದ್ದಾರೆ.
ತಾಪಮಾನದ ಪ್ರತೀ ಹಂತವೂ ಪ್ರಮುಖವಾಗಿದೆ ಮತ್ತು ತಾಪಮಾನ ವೈಪರೀತ್ಯದ ಹೆಚ್ಚಳಕ್ಕೆ ಕಾರಣವಾಗುತ್ತದೆ. ತಾಪಮಾನವು ಸಿನೆಮಾದ ಒಂದು ಭಾಗ ಮಾತ್ರವಾಗಿದೆ. ಈ ವರ್ಷ ನಾವು ಹಲವು ರಾಷ್ಟ್ರಗಳಲ್ಲಿ ದಾಖಲೆ ಪ್ರಮಾಣದ ಮಳೆ, ಪ್ರವಾಹ ಹಾಗೂ ಭಾರೀ ಪ್ರಮಾಣದ ಸಾವು ನೋವುಗಳನ್ನು ಕಂಡಿದ್ದೇವೆ ಎಂದು ಡಬ್ಲ್ಯೂಎಂಒ ಪ್ರಧಾನ ಕಾರ್ಯದರ್ಶಿ ಸಿಲೆಸ್ಟ್ ಸಾವ್ಲೋ ಹೇಳಿದ್ದಾರೆ.
ಇತ್ತೀಚೆಗೆ ಹಿಂದು ಮಹಾಸಾಗರದ ಮಯೋಟ್ಟೆಯಲ್ಲಿ( ಫ್ರಾನ್ಸ್ ನ ನಿಯಂತ್ರಣದ ದ್ವೀಪ) ಉಷ್ಣವಲಯದ ಭೀಕರ ಚಂಡಮಾರುತವು ವ್ಯಾಪಕ ಸಾವು-ನೋವು, ನಾಶ-ನಷ್ಟಕ್ಕೆ ಕಾರಣವಾಗಿದೆ. ತೀವ್ರ ತಾಪಮಾನವು ಹಲವಾರು ದೇಶಗಳನ್ನು ಕಾಡಿದೆ ಮತ್ತು ಹಲವು ಬಾರಿ ತಾಪಮಾನ 50 ಡಿಗ್ರಿ ಸೆಲ್ಶಿಯಸ್ ಅನ್ನೂ ದಾಟಿದೆ. ಕಾಡ್ಗಿಚ್ಚು ವಿನಾಶದ ಅಲೆಯನ್ನು ಸೃಷ್ಟಿಸಿದೆ . 2024ರಲ್ಲಿ ವಿಶ್ವ ಹವಾಮಾನ ಗುಣಲಕ್ಷಣ(ಡಬ್ಲ್ಯೂಡಬ್ಲ್ಯೂಎ) ಸಂಸ್ಥೆ ಅಧ್ಯಯನ ಮಾಡಿದ 29 ವಿಪರೀತ ಹವಾಮಾನ ಘಟನೆಗಳಲ್ಲಿ ಹವಾಮಾನ ಬದಲಾವಣೆಯು 26 ಅನ್ನು ತೀವ್ರಗೊಳಿಸಿದೆ. ಇದು ಕನಿಷ್ಠ 3,700 ಜನರನ್ನು ಬಲಿಪಡೆದಿದೆ ಮತ್ತು ಲಕ್ಷಾಂತರ ಜನರನ್ನು ಸ್ಥಳಾಂತರಿಸಿದೆ. ಹವಾಮಾನ ಬದಲಾವಣೆಯು 2024ರಲ್ಲಿ ಅಪಾಯಕಾರಿ ತಾಪಮಾನದ 41 ದಿನಗಳನ್ನು ಸೃಷ್ಟಿಸಿದೆ ಎಂಬ ವಿಜ್ಞಾನಿಗಳ ವರದಿಯನ್ನು ಡಬ್ಲ್ಯೂಎಂಒ ಉಲ್ಲೇಖಿಸಿದೆ.