2024 ಪತ್ರಕರ್ತರ ಪಾಲಿಗೆ ಮಾರಣಾಂತಿಕ ವರ್ಷ; ಶೇ.70ರಷ್ಟು ಪತ್ರಕರ್ತರು ಇಸ್ರೇಲ್ ದಾಳಿಗೆ ಬಲಿ

PC : aljazeera.com
ಹೊಸದಿಲ್ಲಿ: ಪತ್ರಕರ್ತರು ಮತ್ತು ಮಾಧ್ಯಮ ಸಿಬ್ಬಂದಿಗಳಿಗೆ 2024 ಕಳೆದ ಮೂರು ದಶಕಗಳಲ್ಲಿ ಅತ್ಯಂತ ಮಾರಣಾಂತಿಕ ವರ್ಷವಾಗಿದ್ದು,ಕನಿಷ್ಠ 124 ಜನರು ಆ ವರ್ಷ ಕೊಲ್ಲಲ್ಪಟ್ಟಿದ್ದಾರೆ ಎಂದು ನ್ಯೂಯಾರ್ಕ್ ಮೂಲದ ʼಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ʼ (ಸಿಪಿಜೆ) ಇತ್ತೀಚಿಗೆ ಬಿಡುಗಡೆಗೊಂಡ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಈ ಪೈಕಿ 85 ಅಥವಾ ಸುಮಾರು ಶೇ.70ರಷ್ಟು ಪತ್ರಕರ್ತರು ಫೆಲೆಸ್ತೀನಿಗಳಾಗಿದ್ದು, ಗಾಝಾ ಯುದ್ಧದ ವರದಿಗಾರಿಕೆ ಸಂದರ್ಭದಲ್ಲಿ ಇಸ್ರೇಲ್ನಿಂದ ಕೊಲ್ಲಲ್ಪಟ್ಟಿದ್ದಾರೆ.
ಕಮಿಟಿಯು ಮೂರು ದಶಕಗಳ ಹಿಂದೆ ದತ್ತಾಂಶಗಳನ್ನು ಸಂಗ್ರಹಿಸಲು ಆರಂಭಿಸಿದಾಗಿನಿಂದ ಇತರ ಯಾವುದೇ ವರ್ಷಕ್ಕಿಂತ ಹೆಚ್ಚಿನ ಪತ್ರಕರ್ತರು 2024ರಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಪತ್ರಿಕಾ ಸ್ವಾತಂತ್ಯಕ್ಕಾಗಿ ಪ್ರತಿಪಾದಿಸುವ ಈ ಸಂಸ್ಥೆಯು 1992ರಿಂದ ಪತ್ರಕರ್ತರ ಹತ್ಯೆಗಳ ದಾಖಲೆಗಳನ್ನು ನಿರ್ವಹಿಸುತ್ತಿದೆ.
2023ಕ್ಕೆ ಹೋಲಿಸಿದರೆ 2024ರಲ್ಲಿ ಕೊಲ್ಲಲ್ಪಟ್ಟ ಪತ್ರಕರ್ತರ ಸಂಖ್ಯೆಯಲ್ಲಿ ಶೇ.22ರಷ್ಟು ಏರಿಕೆಯಾಗಿದ್ದು,ಇದು ವಿಶ್ವಾದ್ಯಂತ ಅಂತರರಾಷ್ಟ್ರೀಯ ಸಂಘರ್ಷ,ರಾಜಕೀಯ ಅಶಾಂತಿ ಮತ್ತು ಅಪರಾಧಗಳು ಹೆಚ್ಚುತ್ತಿರುವುದನ್ನು ಪ್ರತಿಬಿಂಬಿಸುತ್ತಿದೆ ಎಂದು ಸಿಪಿಜೆ ವರದಿಯಲ್ಲಿ ಹೇಳಿದೆ.
ಜಾಗತಿಕವಾಗಿ ಸಂಘರ್ಷಗಳ ಸಂಖ್ಯೆಯು,ಅವು ರಾಜಕೀಯ,ಕ್ರಿಮಿನಲ್ ಅಥವಾ ಮಿಲಿಟರಿ ಸ್ವರೂಪದ್ದಾಗಿರಲಿ,ಕಳೆದ ಐದು ವರ್ಷಗಳಲ್ಲಿ ದ್ವಿಗುಣಗೊಂಡಿದೆ ಎಂದು ಬೆಟ್ಟು ಮಾಡಿರುವ ವರದಿಯು,ಇದು ಸುಡಾನ್,ಪಾಕಿಸ್ತಾನ್ ಮತ್ತು ಮ್ಯಾನ್ಮಾರ್ಗಳಂತಹ ದೇಶಗಳಲ್ಲಿ ಪತ್ರಕರ್ತರ ಸಾವುಗಳ ಸಂಖ್ಯೆಯ ಹೆಚ್ಚಳದಲ್ಲಿ ಪ್ರತಿಬಿಂಬಿಸಲ್ಪಟ್ಟಿದೆ ಎಂದು ಹೇಳಿದೆ.
ಆದರೂ,ಮಾಧ್ಯಮಗಳ ಮೇಲೆ ಸಂಘರ್ಷಗಳ ಪರಿಣಾಮವು ಗಾಝಾದ ವಿರುದ್ಧ ಇಸ್ರೇಲ್ ಯುದ್ಧದಲ್ಲಿ ಕೊಲ್ಲಲ್ಪಟ್ಟ ಪತ್ರಕರ್ತರ ಸಂಖ್ಯೆಯಲ್ಲಿ ಹೆಚ್ಚು ಸ್ಪಷ್ಟವಾಗಿದ್ದು,2023ರಲ್ಲಿ ಅಲ್ಲಿ 78 ಪತ್ರಕರ್ತರು ಕೊಲ್ಲಲ್ಲಟ್ಟಿದ್ದರೆ 2024ರಲ್ಲಿ ಈ ಸಂಖ್ಯೆಯು 85ಕ್ಕೇರಿದೆ. ಈ ಎಲ್ಲ ಸಾವುಗಳಿಗೆ ಇಸ್ರೇಲಿ ಮಿಲಿಟರಿ ಕಾರಣವಾಗಿತ್ತು ಎಂದು ವರದಿಯು ತಿಳಿಸಿದೆ.
2024ರಲ್ಲಿ ಸುಡಾನ್ ಮತ್ತು ಪಾಕಿಸ್ತಾನದಲ್ಲಿ ತಲಾ ಆರು ಪತ್ರಕರ್ತರು ಕೊಲ್ಲಲ್ಪಟ್ಟಿದ್ದು ಇದು ಗಾಝಾದ ನಂತರ ಎರಡನೇ ದೊಡ್ಡ ಸಂಖ್ಯೆಯಾಗಿದೆ. ಮೆಕ್ಸಿಕೊದಲ್ಲಿ ಇಬ್ಬರು ಮತ್ತು ಹೈಟಿಯಲ್ಲಿ ಓರ್ವ ಪತ್ರಕರ್ತ ಕೊಲ್ಲಲ್ಪಟ್ಟಿದ್ದಾರೆ. ಮ್ಯಾನ್ಮಾರ್,ಮೊಝಾಂಬಿಕ್,ಭಾರತ ಮತ್ತು ಇರಾಕ್ನಂತಹ ಇತರ ದೇಶಗಳಲ್ಲಿಯೂ ಪತ್ರಕರ್ತರು ಬಲಿಯಾಗಿದ್ದಾರೆ ಎಂದು ವರದಿಯು ಹೇಳಿದೆ.
2024ರಲ್ಲಿ ಕೊಲ್ಲಲ್ಪಟ್ಟ ಪತ್ರಕರ್ತರ ಪೈಕಿ 43 ಜನರು ಫ್ರೀಲ್ಯಾನ್ಸರ್ಗಳಾಗಿದ್ದು,ತಮ್ಮ ಸಂಪನ್ಮೂಲಗಳ ಕೊರತೆಯಿಂದಾಗಿ ಅತ್ಯಂತ ಹೆಚ್ಚು ದುರ್ಬಲ ಗುಂಪಿಗೆ ಸೇರಿದ್ದರು.
ಸಿಪಿಜೆಯ ಇತಿಹಾಸದಲ್ಲಿಯೇ ಇದು ಅತ್ಯಂತ ಅಪಾಯಕಾರಿ ಸಮಯವಾಗಿದೆ ಎಂದು ಹೇಳಿರುವ ಸಂಸ್ಥೆಯ ಸಿಇಒ ಜೋಡಿ ಗಿನ್ಸ್ಬರ್ಗ್,ಗಾಝಾದ ಯುದ್ಧವು ಪತ್ರಕರ್ತರ ಮೇಲೆ ಈ ಹಿಂದೆಂದೂ ಕಾಣದಿದ್ದ ಮಾರಕ ಪರಿಣಾಮವನ್ನು ಬೀರಿದ್ದು,ಇದು ಪತ್ರಕರ್ತರ ರಕ್ಷಣೆಯ ಕುರಿತು ಜಾಗತಿಕ ಮಾನದಂಡಗಳಲ್ಲಿ ಅವನತಿಯನ್ನು ತೋರಿಸುತ್ತಿದೆ ಎಂದಿದ್ದಾರೆ.