'DOGE' ತೊರೆದ 21 ತಂತ್ರಜ್ಞಾನ ತಜ್ಞರು: ಮಸ್ಕ್ ಗೆ ತೀವ್ರ ಹಿನ್ನಡೆ

PC: x.com/iskandrah
ವಾಷಿಂಗ್ಟನ್: ಪ್ರಮುಖ ಸಾರ್ವಜನಿಕ ಸೇವೆಗಳನ್ನು ಕಳಚಿ ಹಾಕಲಾಗುತ್ತಿದೆ ಎಂದು ಆಪಾದಿಸಿ 20 ಕ್ಕೂ ಹೆಚ್ಚು ಮಂದಿ ನಾಗರಿಕ ಸೇವಾ ಸಿಬ್ಬಂದಿ ಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್ ಮೇಲ್ವಿಚಾರಣೆಯ ಡಿಪಾರ್ಟ್ಮೆಂಟ್ ಆಫ್ ಗವರ್ನ್ಮೆಂಟ್ ಎಫಿಶಿಯೆನ್ಸಿ (DOGE) ತೊರೆದಿದ್ದಾರೆ.
ಎಂಜಿನಿಯರ್ ಗಳು, ಡಾಟಾ ವಿಜ್ಞಾನಿಗಳು ಮತ್ತು ಉತ್ಪನ್ನ ವ್ಯವಸ್ಥಾಪಕರು ಸೇರಿದಂತೆ ಉನ್ನತ ಹುದ್ದೆಯ 21ಮಂದಿ ಜಂಟಿ ರಾಜೀನಾಮೆಪತ್ರ ನೀಡಿದ್ದು, ಅಮೆರಿಕದ ಜನತೆಗೆ ಮತ್ತು ಸಂವಿಧಾನಕ್ಕೆ ನೀಡಿದ ಪ್ರಮಾಣವಚನವನ್ನು ಉಲ್ಲಂಘಿಸದೇ ಪ್ರಸ್ತುತ ಆಡಳಿತದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ಅಧ್ಯಕ್ಷೀಯ ಆಡಳಿತದಲ್ಲಿ ಜನತೆಗೆ ಸೇವೆ ಮಾಡುವ ಮತ್ತು ನಮ್ಮ ಪ್ರಮಾಣವನ್ನು ಎತ್ತಿಹಿಡಿಯುವ ಪ್ರತಿಜ್ಞೆಯನ್ನು ಕೈಗೊಂಡಿದ್ದೆವು. ಆದರೆ ಈ ಬದ್ಧತೆಗಳನ್ನು ಗೌರವಿಸುವುದು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗಿದೆ" ಎಂದು ರಾಜೀನಾಮೆ ಪತ್ರದಲ್ಲಿ ವಿವರಿಸಿದ್ದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ತಾಂತ್ರಿಕ ಮತ್ತು ರಚನಾತ್ಮಕ ಬದಲಾವಣೆಗಳ ಮೂಲಕ ಫೆಡರಲ್ ಸರ್ಕಾರದ ಗಾತ್ರವನ್ನು ಕಡಿತ ಮಾಡುವ ಡೊನಾಲ್ಡ್ ಟ್ರಂಪ್ ಮತ್ತು ಎಲಾನ್ ಮಸ್ಕ್ ಅವರಿಗೆ ಈ ರಾಜೀನಾಮೆ ತೀವ್ರ ಹಿನ್ನಡೆ ಎನಿಸಿದೆ. ಈ ಉಪಕ್ರಮಕ್ಕೆ ಈಗಾಗಲೇ ವಿರೋಧಿಗಳಿಂದ ಹಲವು ಕಾನೂನಾತ್ಮಕ ಸವಾಲುಗಳು ಎದುರಾಗಿದ್ದು, ಇದು ಅಗತ್ಯ ಸರ್ಕಾರಿ ಕರ್ತವ್ಯಗಳನ್ನು ಕಡೆಗಣಿಸಿದೆ ಮತ್ತು ಉದ್ಯೋಗಿಗಳನ್ನು ರಾಜೀನಾಮೆಗೆ ಬಲವಂತಪಡಿಸಿದೆ.