ಉಕ್ರೇನ್ ದಾಳಿಯಲ್ಲಿ 28 ಮಂದಿ ಸಾವು: ರಶ್ಯ
ಸಾಂದರ್ಭಿಕ ಚಿತ್ರ | Photo:NDTV
ಮಾಸ್ಕೋ : ರಶ್ಯದ ನಿಯಂತ್ರಣದಲ್ಲಿರುವ ಪೂರ್ವ ಉಕ್ರೇನ್ನ ಲಿಸಿಷಾಂಕ್ ನಗರದ ಬೇಕರಿಯೊಂದರ ಮೇಲೆ ಉಕ್ರೇನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 28 ಮಂದಿ ಸಾವನ್ನಪ್ಪಿದ್ದಾರೆ ಎಂದು ರಶ್ಯ ರವಿವಾರ ಹೇಳಿದೆ.
ಪಾಶ್ಚಿಮಾತ್ಯರು ಒದಗಿಸಿದ ಕ್ಷಿಪಣಿಯಿಂದ ಉಕ್ರೇನ್ ದಾಳಿ ನಡೆಸಿದೆ. ಅಮೆರಿಕ ಪೂರೈಸಿರುವ `ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್(ಎಚ್ಐಎಂಎಆರ್ಎಸ್)ನ ಮೂಲಕ ಬೇಕರಿ ಹಾಗೂ ಹೋಟೆಲನ್ನು ಗುರಿಯಾಗಿಸಿ ದಾಳಿ ನಡೆದಿದೆ. ಕನಿಷ್ಠ 28 ಮಂದಿ ಸಾವನ್ನಪ್ಪಿದ್ದು ದಾಳಿಯಿಂದ ನೆಲಸಮಗೊಂಡ ಕಟ್ಟಡದ ಅವಶೇಷಗಳಡಿಯಿಂದ 14 ಜನರನ್ನು ರಕ್ಷಿಸಲಾಗಿದ್ದು ಇವರಲ್ಲಿ 4ಮಂದಿಯ ಸ್ಥಿತಿ ಗಂಭೀರವಾಗಿದೆ. ಇನ್ನೂ ಹಲವರು ಅವಶೇಷಗಳಡಿ ಸಿಕ್ಕಿಬಿದ್ದಿರುವ ಸಾಧ್ಯತೆಯಿದೆ ಎಂದು ಲುಹಾಂಸ್ಕ್ ಪ್ರಾಂತದಲ್ಲಿ ರಶ್ಯ ನೇಮಿಸಿರುವ ಗವರ್ನರ್ ಲಿಯೊನಿಡ್ ಪೆಸ್ಚ್ನಿಕ್ ಹೇಳಿದ್ದಾರೆ.
ಪಾಶ್ಚಿಮಾತ್ಯರು ಒದಗಿಸಿರುವ ಶಸ್ತ್ರಾಸ್ತ್ರಗಳನ್ನು ಅಮಾಯಕ ನಾಗರಿಕರನ್ನು ಹತ್ಯೆ ಮಾಡಲು ಉಕ್ರೇನ್ ಬಳಸುತ್ತಿರುವ ಬಗ್ಗೆ ಪಾಶ್ಚಿಮಾತ್ಯರು ಗಂಭೀರ ಚಿಂತನೆ ನಡೆಸಬೇಕು ಎಂದು ರಶ್ಯದ ವಿದೇಶಾಂಗ ಇಲಾಖೆಯ ವಕ್ತಾರೆ ಮರಿಯಾ ಝಕರೋವಾ ಆಗ್ರಹಿಸಿದ್ದಾರೆ.