ಸಿರಿಯಾದಲ್ಲಿ 2,80,000 ಜನರ ಸ್ಥಳಾಂತರ : ವಿಶ್ವಸಂಸ್ಥೆ
PC: x.com/UN
ಜಿನೆವಾ : ಸಿರಿಯಾದಲ್ಲಿ ನಡೆಯುತ್ತಿರುವ ಯುದ್ಧವು ಕೇವಲ ಒಂದು ವಾರದಲ್ಲಿಯೇ ಸುಮಾರು 2,80,000 ಜನರ ಸ್ಥಳಾಂತರಕ್ಕೆ ಕಾರಣವಾಗಿದೆ. ಇದೇ ವೇಗದಲ್ಲಿ ಮುಂದುವರಿದರೆ ಈ ಪ್ರಮಾಣ 15 ಲಕ್ಷಕ್ಕೆ ತಲುಪಬಹುದು ಎಂದು ವಿಶ್ವಸಂಸ್ಥೆ ಶುಕ್ರವಾರ ಎಚ್ಚರಿಕೆ ನೀಡಿದೆ.
ನವೆಂಬರ್ 27ರಿಂದ ಸುಮಾರು 2,80,000 ಜನರು ಸ್ಥಳಾಂತರಗೊಂಡಿದ್ದಾರೆ. ಲೆಬನಾನ್ ನಲ್ಲಿ ಇತ್ತೀಚೆಗೆ ಘರ್ಷಣೆಯ ಕಾರಣದಿಂದ ಪಲಾಯನ ಮಾಡಿದ ಸಿರಿಯಾ ನಾಗರಿಕರು ಇದರಲ್ಲಿ ಸೇರಿಲ್ಲ ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆ(ಡಬ್ಲ್ಯೂಎಫ್ಪಿ)ಯ ತುರ್ತು ಸಮನ್ವಯ ಮುಖ್ಯಸ್ಥ ಸಮಿರ್ ಅಬ್ದೆಲ್ ಜಬೆರ್ ಜಿನೆವಾದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸಿರಿಯಾ ಜನತೆ ವರ್ಷಗಳಿಂದ ಅನುಭವಿಸುತ್ತಿರುವ ಸಂಕಷ್ಟವನ್ನು ಈ ಸಾಮೂಹಿಕ ಸ್ಥಳಾಂತರವು ಮತ್ತಷ್ಟು ಹೆಚ್ಚಿಸಿದೆ. ಸ್ಥಳಾಂತರಗೊಳ್ಳುವ ಅನಿವಾರ್ಯತೆಗೆ ಸಿಲುಕಿದವರಿಗೆ ನೆರವು ಒದಗಿಸುವ ಕಾರ್ಯ ಮುಂದುವರಿಸಿದ್ದೇವೆ. ಆದರೆ ಯುದ್ಧ ಮುಂದುವರಿದಂತೆ ಸ್ಥಳಾಂತರಗೊಳ್ಳುವವರ ಪ್ರಮಾಣವೂ ಹೆಚ್ಚುವುದರಿಂದ ತ್ವರಿತ ಹೆಚ್ಚುವರಿ ಆರ್ಥಿಕ ನೆರವಿನ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.