ಇಸ್ರೇಲ್ ವೈಮಾನಿಕ ದಾಳಿಗೆ ಲೆಬನಾನ್ ನಲ್ಲಿ 34 ಮಂದಿ ನಾಗರಿಕರು ಮೃತ್ಯು
Photo: PTI
ಬೈರುತ್: ಇಸ್ರೇಲ್ ಲೆಬನಾನ್ ಮೇಲೆ ತನ್ನ ಆಕ್ರಮಣವನ್ನು ಮುಂದುವರಿಸಿದ್ದು, ದಕ್ಷಿಣ ಮತ್ತು ಪೂರ್ವ ಲೆಬನಾನ್ ನಲ್ಲಿ ನಡೆಸಿದ ವೈಮಾನಿಕ ದಾಳಿಗೆ ಕನಿಷ್ಠ 34 ಜನರು ಮೃತಪಟ್ಟಿದ್ದಾರೆ ಮತ್ತು 80 ಮಂದಿ ನಾಗರಿಕರು ಗಾಯಗೊಂಡಿದ್ದಾರೆ.
ಶನಿವಾರ ಪೂರ್ವ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 24 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಮತ್ತು 44 ಜನರು ಗಾಯಗೊಂಡಿದ್ದಾರೆ. ಮೃತರು ಪೂರ್ವ ಲೆಬನಾನ್ ನ ಬೋಡೈ, ಹಫೀರ್, ರಾಸ್ ಅಲ್-ಐನ್ ಮತ್ತು ಫ್ಲೌಯಿ, ಬ್ರಿತಲ್, ಹೌರ್ ತಾಲಾ ಮತ್ತು ಬೆಕಾ ಕಣಿವೆ ಪ್ರದೇಶಕ್ಕೆ ಸೇರಿದವರಾಗಿದ್ದಾರೆ.
ಇದಲ್ಲದೆ ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ 10 ಮಂದಿ ನಾಗರಿಕರು ಮೃತಪಟ್ಟಿದ್ದು, 36 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಹೆಚ್ಚಿನವರು ನಬಾತಿಹ್ ಗವರ್ನರೇಟ್ ನ ನಗರಗಳು ಮತ್ತು ಹಳ್ಳಿಗಳಿಗೆ ಸೇರಿದವರಾಗಿದ್ದಾರೆ.
ಗಾಝಾದಲ್ಲಿ ನರಮೇಧವನ್ನು ನಡೆಸುತ್ತಿರುವ ಇಸ್ರೇಲ್ 2024ರ ಸೆಪ್ಟೆಂಬರ್ 23ರಿಂದ ಹಿಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ಲೆಬನಾನ್ ಮೇಲೆ ವೈಮಾನಿಕ ದಾಳಿ ಆರಂಭಿಸಿತ್ತು.ಇಸ್ರೇಲ್ ಲೆಬನಾನ್ ಮೇಲೆ ನಡೆಸಿದ ವೈಮಾನಿಕ ದಾಳಿಗೆ ಈವರೆಗೆ ಕನಿಷ್ಠ 3,670 ಜನರು ಸಾವನ್ನಪ್ಪಿದ್ದಾರೆ ಮತ್ತು 15,413 ಜನರು ಗಾಯಗೊಂಡಿದ್ದಾರೆ ಎಂದು AL JAZEERA ಮಾಧ್ಯಮದ ಇತ್ತೀಚಿನ ವರದಿಗಳು ತಿಳಿಸಿದೆ.