ಪ್ರಬಲ ಭೂಕಂಪಕ್ಕೆ ನಡುಗಿದ ತೈವಾನ್ 9 ಮಂದಿ ಸಾವು; 900 ಮಂದಿಗೆ ಗಾಯ
Screengrab: X/@Jingjing_Li
ತೈಪೆ: ಪೂರ್ವ ತೈವಾನ್ನಲ್ಲಿ ಬುಧವಾರ ಬೆಳಿಗ್ಗೆ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ವ್ಯಾಪಕ ನಾಶ-ನಷ್ಟ ಸಂಭವಿಸಿದೆ. 9 ಮಂದಿ ಮೃತಪಟ್ಟಿದ್ದು 900ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಕಳೆದ 25 ವರ್ಷಗಳಲ್ಲಿ ತೈವಾನ್ನಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪ ಇದಾಗಿದ್ದು ತೈವಾನ್, ದಕ್ಷಿಣ ಜಪಾನ್ ಮತ್ತು ಫಿಲಿಪ್ಪೀನ್ಸ್ಗಳಲ್ಲಿ ತ್ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಬುಧವಾರ ಬೆಳಿಗ್ಗೆ 8 ಗಂಟೆ(ಸ್ಥಳೀಯ ಕಾಲಮಾನ) ಸಂಭವಿಸಿದ ಭೂಕಂಪ ತೈವಾನ್ನ ಹುವಾಲಿಯನ್ ನಗರದ ದಕ್ಷಿಣಕ್ಕೆ 18 ಕಿ.ಮೀ ದೂರದಲ್ಲಿ, 34.8 ಕಿ.ಮೀ ಆಳದಲ್ಲಿ ಕೇಂದ್ರೀಕೃತಗೊಂಡಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಇಲಾಖೆ ಮಾಹಿತಿ ನೀಡಿದೆ. ಹುವಾಲಿಯನ್ನಲ್ಲಿ 14 ಸೇರಿದಂತೆ ಕನಿಷ್ಟ 26 ಕಟ್ಟಡಗಳು ನೆಲಸಮಗೊಂಡಿದ್ದು 20 ಮಂದಿ ಕಟ್ಟಡದ ಅವಶೇಷಗಳಡಿ ಸಿಕ್ಕಿಬಿದ್ದಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.
ಬುಧವಾರ ಮಧ್ಯಾಹ್ನದವರೆಗೆ ರಾಜಧಾನಿ ತೈಪೆಯಲ್ಲಿ 25 ಪಶ್ಚಾತ್ ಕಂಪನಗಳು ದಾಖಲಾಗಿವೆ ಎಂದು ತೈವಾನ್ನ ಕೇಂದ್ರ ಹವಾಮಾನ ಸಂಸ್ಥೆ ಹೇಳಿದೆ. ಜಪಾನ್ನ ದಕ್ಷಿಣದಲ್ಲಿರುವ ಒಕಿನಾವದಲ್ಲಿ ಹಲವು ಸಣ್ಣ ಪ್ರಮಾಣದ ತ್ಸುನಾಮಿ ಅಲೆಗಳು ದಡಕ್ಕೆ ಅಪ್ಪಳಿಸಿವೆ. ಭೂಕಂಪವು ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆ ದಾಖಲಿಸಿದೆ ಎಂದು ಜಪಾನ್ನ ಹವಾಮಾನ ಇಲಾಖೆ ಹೇಳಿದೆ. ತ್ಸುನಾಮಿ ಎಚ್ಚರಿಕೆ ಸಂದೇಶವನ್ನು ಬಳಿಕ ಸಲಹಾ ಸಂದೇಶವಾಗಿ ಕೆಳಹಂತಕ್ಕೆ ಇಳಿಸಿರುವುದಾಗಿ ಇಲಾಖೆ ಸ್ಪಷ್ಟಪಡಿಸಿದೆ. ಫಿಲಿಪ್ಪೀನ್ಸ್ನ ಕರಾವಳಿ ತೀರದ ಪ್ರಾಂತಗಳಲ್ಲಿ ತಗ್ಗುಪ್ರದೇಶದ ನಿವಾಸಿಗಳು ಎತ್ತರದ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಫಿಲಿಪ್ಪೀನ್ಸ್ ಭೂಕಂಪಶಾಸ್ತ್ರ ಇಲಾಖೆ ಎಚ್ಚರಿಕೆ ನೀಡಿದೆ.
ತೈವಾನ್ ಕೂಡಾ ತ್ಸುನಾಮಿ ಎಚ್ಚರಿಕೆ ನೀಡಿತ್ತು. ಆದರೆ ತ್ಸುನಾಮಿಯಿಂದ ತೈವಾನ್ನಲ್ಲಿ ಯಾವುದೇ ಹಾನಿ, ನಷ್ಟ ಸಂಭವಿಸಿಲ್ಲ ಎಂದು ವರದಿಯಾಗಿದೆ. ತ್ಸುನಾಮಿ ಅಲೆಯಿಂದ ನಷ್ಟದ ಅಪಾಯದ ಸಾಧ್ಯತೆ ಈಗ ಬಹುತೇಕ ದೂರವಾಗಿದೆ ಎಂದು ಹವಾಯಿ ದ್ವೀಪದ ತ್ಸುನಾಮಿ ಎಚ್ಚರಿಕೆ ಕೇಂದ್ರ ಹೇಳಿದೆ. ಚೀನಾದ ಶಾಂಘೈ, ಫುಝೋವ್, ಕ್ವಾನ್ಝೋವ್ ಮತ್ತು ನಿಂಗ್ಡೆ ನಗರಗಳಲ್ಲೂ ನೆಲ ನಡುಗಿದ ಅನುಭವವಾಗಿದೆ. ತೈವಾನ್ನಲ್ಲಿ ವ್ಯಾಪಕ ಭೂಕುಸಿತ ಸಂಭವಿಸಿದ್ದು ವಿದ್ಯುತ್ ವ್ಯವಸ್ಥೆ, ಇಂಟರ್ನೆಟ್ ವ್ಯವಸ್ಥೆ ಮೊಟಕುಗೊಂಡಿದೆ. ಸುಮಾರು
50 ಮಂದಿ ನಾಪತ್ತೆ
ಭೂಕಂಪ ಸಂಭವಿಸಿದ ಬಳಿಕ ಮಿನಿ ಬಸ್ಸೊಂದರಲ್ಲಿ ಪ್ರಯಾಣಿಸುತ್ತಿದ್ದ 50 ಜನರೊಂದಿಗಿನ ಸಂಪರ್ಕ ಕಡಿತಗೊಂಡಿದೆ. ಕುಸಿದು ಬಿದ್ದಿರುವ ಸುರಂಗಗಳಲ್ಲಿ ಮತ್ತು ಕಟ್ಟಡಗಳಲ್ಲಿ 77 ಮಂದಿ ಸಿಕ್ಕಿಬಿದ್ದಿದ್ದಾರೆ ಎಂದು ತೈವಾನ್ ಅಧಿಕಾರಿಗಳು ಹೇಳಿದ್ದಾರೆ.
ಭೂಕಂಪದ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಹೊರಡಿಸುವ ಸಲಹೆ ಸೂಚನೆಗಳನ್ನು ಪಾಲಿಸುವಂತೆ `ದಿ ಇಂಡಿಯನ್ ತೈಪೆ ಅಸೋಸಿಯೇಷನ್' ಸೂಚಿಸಿದ್ದು, ತೈವಾನ್ನಲ್ಲಿ ವಾಸಿಸುತ್ತಿರುವ ಭಾರತೀಯ ಪ್ರಜೆಗಳಿಗೆ ಹೆಲ್ಪ್ಲೈನ್ ಮತ್ತು ಮಾರ್ಗದರ್ಶಿ ಸೂಚನೆಯನ್ನು ಜಾರಿಗೊಳಿಸಿದೆ.