500 ದಿನದ ಗಡಿದಾಟಿದ ಸಂಘರ್ಷ: ಉಕ್ರೇನ್ ಯುದ್ಧದಲ್ಲಿ 9000 ನಾಗರಿಕರ ಮೃತ್ಯು; ವಿಶ್ವಸಂಸ್ಥೆ
ಜಿನೆವಾ: ಉಕ್ರೇನ್ನಲ್ಲಿ ರಶ್ಯ ಆರಂಭಿಸಿರುವ ಯುದ್ಧದಲ್ಲಿ ಉಂಟಾದ ನಾಗರಿಕರ ಸಾವನ್ನು ಖಂಡಿಸಿರುವ ವಿಶ್ವಸಂಸ್ಥೆ, ಸಂಘರ್ಷವು 500ನೇ ದಿನಕ್ಕೆ ಮುಂದುವರಿದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
2022ರ ಫೆಬ್ರವರಿ 24ರಂದು ಉಕ್ರೇನ್ ಮೇಲಿನ ರಶ್ಯ ಆಕ್ರಮಣ ಆರಂಭಗೊಂಡಿದ್ದು ಇದುವರೆಗೆ ಸುಮಾರು 500 ಮಕ್ಕಳ ಸಹಿತ 9 ಸಾವಿರಕ್ಕೂ ಅಧಿಕ ನಾಗರಿಕರು ಮೃತರಾಗಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಿರುವ ಸಾಧ್ಯತೆಯಿದೆ. ಇಂದು ಯುದ್ಧದಲ್ಲಿನ ಮತ್ತೊಂದು ಕಠೋರ ಮೈಲುಗಲ್ಲನ್ನು ಗುರುತಿಸಲಾಗಿದೆ’ ಎಂದು ಉಕ್ರೇನ್ನಲ್ಲಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಣ್ಗಾವಲು ನಿಯೋಗ(ಎಚ್ಆರ್ಎಂಎಂಯು)ದ ಉಪಮುಖ್ಯಸ್ಥ ನೋಯೆಲ್ ಕಲ್ಹೂನ್ ಹೇಳಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಆರಂಭದ ಕೆಲ ತಿಂಗಳು ಸಾವು-ನೋವು, ನಾಶ-ನಷ್ಟದ ಪ್ರಮಾಣ ಕಡಿಮೆಯಾಗಿತ್ತು. ಆದರೆ ಮೇ ಮತ್ತು ಜೂನ್ನಲ್ಲಿ ಮತ್ತೆ ಏರಿಕೆಯಾಗುತ್ತಾ ಸಾಗಿದೆ. ಜೂನ್ 27ರಂದು ಪೂರ್ವ ಉಕ್ರೇನ್ ನ ಕ್ರಮಟೊರೊಸ್ಕ್ ನಗರದ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ 4 ಮಕ್ಕಳ ಸಹಿತ 13 ನಾಗರಿಕರು ಮೃತಪಟ್ಟಿದ್ದರು.
ಜತೆಗೆ, ಪಶ್ಚಿಮದ ಲಿವಿವ್ ನಗರದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ 10 ನಾಗರಿಕರು ಮೃತಪಟ್ಟಿದ್ದು ಕನಿಷ್ಟ 37 ನಾಗರಿಕರು ಗಾಯಗೊಂಡಿದ್ದಾರೆ. ಲಿವಿವ್ ಪಾಲಿಟೆಕ್ನಿಕ್ ವಿವಿ ಸೇರಿದಂತೆ 50ಕ್ಕೂ ಅಧಿಕ ಕಟ್ಟಡ, ಅಪಾರ್ಟ್ಮೆಂಟ್ಗಳಿಗೆ ಹಾನಿಯಾಗಿದೆ ಎಂದು ನಗರದ ಮೇಯರ್ ಹೇಳಿದ್ದಾರೆ. ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿರುವ ಸಂರಕ್ಷಿತ ಪ್ರದೇಶದಲ್ಲಿ ನಡೆದಿರುವ ಪ್ರಥಮ ದಾಳಿ ಇದಾಗಿದ್ದು ಐತಿಹಾಸಿಕ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಯುನೆಸ್ಕೋ ವರದಿ ಮಾಡಿದೆ.
ಖಂಡಿತ ಗೆಲುವು ನಮ್ಮದೇ: ಝೆಲೆನ್ಸ್ಕಿ
ಆಕ್ರಮಣಕಾರರ ಪ್ರಯತ್ನವನ್ನು 500 ದಿನದವರೆಗೂ ಯಶಸ್ವಿಯಾಗಿ ವಿಫಲಗೊಳಿಸಿದ್ದೇವೆ. ಈ ನಿರ್ಣಾಯಕ ಯುದ್ಧದಲ್ಲಿ ಖಂಡಿತ ಗೆಲುವು ನಮ್ಮದೇ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಶನಿವಾರ ಹೇಳಿದ್ದಾರೆ.
ಉಕ್ರೇನ್ ಸಂಘರ್ಷ 500ನೇ ದಿನದ ಗಡಿ ತಲುಪಿದ ಸಂದರ್ಭ ಕಪ್ಪು ಸಮುದ್ರದಲ್ಲಿರುವ ಅತ್ಯಂತ ಆಯಕಟ್ಟಿನ ಬಂದರು, ಸ್ನೇಕ್ ಐಲ್ಯಾಂಡ್ಗೆ ಶನಿವಾರ ಭೇಟಿ ನೀಡಿ ಭದ್ರತಾ ಪಡೆಗಳನ್ನು ಅಭಿನಂದಿಸಿದ ಬಳಿಕ ದೇಶದ ಜನತೆಗೆ ನೀಡಿದ ಸಂದೇಶದಲ್ಲಿ ಝೆಲೆನ್ಸ್ಕಿ ಉಕ್ರೇನ್ ಯೋಧರ ಶೌರ್ಯವನ್ನು ಶ್ಲಾಘಿಸಿದರು.
ನಾವಿಂದು ಸ್ನೇಕ್ ಐಲ್ಯಾಂಡ್ನಲ್ಲಿದ್ದೇವೆ. ಇದನ್ನು ಆಕ್ರಮಣಕಾರರು ಎಂದಿಗೂ ವಶಕ್ಕೆ ಪಡೆಯಲು ಸಾಧ್ಯವಾಗದು. ಯಾಕೆಂದರೆ ನಾವು ಧೈರ್ಯಶಾಲಿಗಳ ದೇಶ. ನಾವೀಗ ಮುನ್ನಡೆ ಸಾಧಿಸುತ್ತಿದ್ದೇವೆ. ಖಂಡಿತಾ ಗುರಿ ತಲುಪುವ ವಿಶ್ವಾಸವಿದೆ’ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಯುದ್ಧ ಆರಂಭವಾಗಿ 500 ದಿನಗಳಾಗಿದ್ದು ಝೆಲೆನ್ಸ್ಕಿ ಯುದ್ಧದ ಮುಂಚೂಣಿ ನೆಲೆಗಳಿಗೆ ನಿರಂತರ ಭೇಟಿ ನೀಡಿ ಯೋಧರನ್ನು ಹುರಿದುಂಬಿಸಿದ್ದಾರೆ. ಆದರೆ ಪುಟಿನ್ ಅಪಾಯದ ಪ್ರದೇಶದ ಹತ್ತಿರ ಸುಳಿಯುವುದೂ ಅಪರೂಪವಾಗಿದೆ.
ಉಕ್ರೇನ್ ಗೆ ಕ್ಲಸ್ಟರ್ ಬಾಂಬ್ ಪೂರೈಕೆ: ಬೈಡನ್
ಅಮೆರಿಕವು ಉಕ್ರೇನ್ಗೆ ಒದಗಿಸಲಿರುವ ನೆರವಿನ ಪ್ಯಾಕೇಜ್ನಲ್ಲಿ ವಿವಾದಾತ್ಮಕ ಕ್ಲಸ್ಟರ್ ಬಾಂಬ್ಗಳನ್ನು ಸೇರಿಸಲು ಬೈಡನ್ ಆಡಳಿತ ಸಮ್ಮತಿಸಿದೆ.
ಉಕ್ರೇನ್ಗೆ ಕ್ಲಸ್ಟರ್ ಬಾಂಬ್ಗಳನ್ನು ಪೂರೈಸುವುದು ಕಷ್ಟದ ನಿರ್ಧಾರವಾಗಿತ್ತು. ಆದರೆ ರಶ್ಯದ ವಿರುದ್ಧದ ಯುದ್ಧದಲ್ಲಿ ಉಕ್ರೇನ್ಗೆ ಶಸ್ತ್ರಾಸ್ತ್ರದ ಕೊರತೆ ಎದುರಾಗಿರುವುದರಿಂದ ಉಕ್ರೇನ್ಗೆ ಈ ಅಸ್ತ್ರದ ಅಗತ್ಯ ಹೆಚ್ಚಿದೆ. ಇದರ ಬಗ್ಗೆ ನಮ್ಮ ಮಿತ್ರರೊಂದಿಗೆ ಚರ್ಚಿಸಲಾಗಿದೆ ಎಂದು ಬೈಡನ್ ಹೇಳಿದ್ದಾರೆ.