ಸಿರಿಯಾ | ಅಮೆರಿಕಾ ನೆಲೆ ಮೇಲಿನ ಸ್ಫೋಟಕ ಹೊತ್ತ ಡ್ರೋನ್ ದಾಳಿ ; 6 ಮಂದಿ ಕುರ್ದಿಷ್ ಬಂಡುಕೋರರ ಹತ್ಯೆ
ಸಾಂದರ್ಭಿಕ ಚಿತ್ರ | NDTV
ಅಮನ್: ಸಿರಿಯಾ ಸರ್ಕಾರದ ನಿಯಂತ್ರಣದಲ್ಲಿರುವ ಸಿರಿಯಾದ ಡೈರ್ ಅಲ್ ಝೋರ್ ಪ್ರದೇಶಗಳಿಂದ ಬಂದ, ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳು ನಡೆಸಿದ ಸ್ಫೋಟಕ ಹೊತ್ತ ಡ್ರೋನ್ ದಾಳಿಯಲ್ಲಿ ತನ್ನ ಆರು ಮಂದಿ ಬಂಡುಕೋರರು ಮೃತಪಟ್ಟಿದ್ದಾರೆ ಎಂದು ಅಮೆರಿಕಾ ಬೆಂಬಲಿತ ಕುರ್ದಿಷ್ ನೇತೃತ್ವದ ಪಡೆಗಳು ಸೋಮವಾರ ಹೇಳಿವೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕುರ್ದಿಷ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ ನ ವಕ್ತಾರ ಫರ್ಹಾದ್ ಶಮಿ, “ಅಲ್-ಒಮರ್ ತೈಲ ನಿಕ್ಷೇಪದ ಬಳಿಯ ಅಮೆರಿಕಾ ನೆಲೆಯಲ್ಲಿರುವ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ ಕಮಾಂಡೊ ಅಕಾಡೆಮಿಯ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ನಮ್ಮ ಆರು ಮಂದಿ ಕಮಾಂಡೊ ಬಂಡುಕೋರರು ಮೃತಪಟ್ಟಿದ್ದಾರೆ” ಎಂದು ತಿಳಿಸಿದ್ದಾರೆ.
ಅಲ್-ಒಮರ್ ತೈಲ ನಿಕ್ಷೇಪದ ಮೇಲೆ ನಡೆದಿರುವ ಡ್ರೋಣ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿರುವ ಹಲವಾರು ಇರಾನ್ ಬೆಂಬಲಿತ ಇರಾಕ್ ಸಶಸ್ತ್ರ ಗುಂಪುಗಳ ಸಂಯೋಜಿತ ಗುಂಪಾದ ದ ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್ ಸಂಘಟನೆಯು, ಈ ಉಡಾವಣೆಯನ್ನು ಫೆ. 4ರಂದು ನಡೆಸಲಾಗಿತ್ತು ಎಂದು ಹೇಳಿದೆ.
ಈ ತಿಂಗಳಾರಂಭದಲ್ಲಿ ಜೋರ್ಡಾನ್ ನಲ್ಲಿರುವ ಅಮೆರಿಕಾದ ಹೊರ ಠಾಣೆಯೊಂದರ ಮೇಲೆ ನಡೆದಿದ್ದ ಡ್ರೋನ್ ದಾಳಿಯಲ್ಲಿ ಅಮೆರಿಕಾ ಪಡೆಯ ಮೂವರು ಯೋಧರು ಮೃತಪಟ್ಟಿದ್ದಕ್ಕೆ ಅಮೆರಿಕಾವು ಈ ಗುಂಪನ್ನು ದೂಷಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕಾವು ನಡೆಸಿದ ಹತ್ತಾರು ವಾಯು ದಾಳಿಯಲ್ಲಿ ಇರಾಕ್ ಮತ್ತು ಸಿರಿಯಾದಲ್ಲಿನ ಇರಾನ್ ಬೆಂಬಲಿತ ಗುಂಪುಗಳ 40 ಮಂದಿ ಹತರಾಗಿದ್ದರು. ಇದು ಕಾರ್ಯನಿರತವಾಗಿದ್ದ ಗುಂಪಿನ ಸದಸ್ಯರ ದೊಡ್ಡ ಪ್ರಮಾಣವಾಗಿದೆ ಎಂದು ಹೇಳಲಾಗಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ, ಕಣಕ್ಕಿಳಿದಿರುವ ಇರಾನ್ ಬೆಂಬಲಿತ ಗುಂಪುಗಳು, ಫೆಲೆಸ್ತೀನಿಯನ್ನರಿಗೆ ಬೆಂಬಲ ಘೋಷಿಸಿವೆ.