ಉಕ್ರೇನ್ಗೆ 61 ಬಿಲಿಯನ್ ಡಾಲರ್ ಸೇನಾ ನೆರವು ಪ್ರಸ್ತಾವ | ಅಮೆರಿಕದ ಕೆಳಮನೆ ಕೊನೆಗೂ ಅನುಮೋದನೆ
Photo: www.washingtonpost.com
ವಾಶಿಂಗ್ಟನ್: ರಶ್ಯದ ಆಕ್ರಮಣವನ್ನು ಎದುರಿಸಲು ಸಹಾಯವಾಗುವಂತೆ ಉಕ್ರೇನ್ಗೆ ಹೊಸದಾಗಿ 61 ಬಿಲಿಯ ಡಾಲರ್ (ಸುಮಾರು 5.08 ಲಕ್ಷ ಕೋಟಿ ರೂಪಾಯಿ) ಸೇನಾ ನೆರವು ನೀಡುವ ಪ್ರಸ್ತಾವಕ್ಕೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಕೊನೆಗೂ ಅನುಮೋದನೆ ನೀಡಿದೆ.
ಈ ನೆರವು ಪ್ರಸ್ತಾವಕ್ಕೆ ಅಮೆರಿಕದ ಸಂಸತ್ತು ಕಾಂಗ್ರೆಸ್ನಲ್ಲಿ ವಿರೋಧವಿದ್ದ ಹಿನ್ನೆಲೆಯಲ್ಲಿ ಅದರ ಅನುಮೋದನೆ ಭಾರೀ ವಿಳಂಬವಾಗಿತ್ತು. ಹಾಗಾಗಿ, ಈ ಪ್ರಸ್ತಾವದ ಅಂಗೀಕಾರಕ್ಕೆ ಪ್ರತಿಪಕ್ಷದ ಸಂಸದರ ನೆರವು ಪಡೆಯಲಾಗಿತ್ತು.
ಈ ನೆರವು ಮೊತ್ತದ ಮೂರನೇ ಒಂದಕ್ಕೂ ಹೆಚ್ಚಿನ ಭಾಗವನ್ನು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಖರೀದಿಗಾಗಿ ಬಳಸಲಾಗುವುದು ಎಂದು ರಿಪಬ್ಲಿಕನ್ ಸಂಸದರು ಹೇಳಿದ್ದಾರೆ.
ರಶ್ಯದ ಆಕ್ರಮಣವನ್ನು ಎದುರಿಸಲು ಅಮೆರಿಕದ ನೆರವು ಅತ್ಯಂತ ಅಗತ್ಯವಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬಣ್ಣಿಸಿದ್ದಾರೆ. ಯುದ್ಧ ವಿಸ್ತರಣೆಯಾಗದಂತೆ ಈ ನೆರವು ತಡೆಯುತ್ತದೆ ಮತ್ತು ಸಾವಿರಾರು ಜೀವಗಳನ್ನು ಉಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ನೆರವು ಯಾವಾಗ ಉಕ್ರೇನ್ಗೆ ಲಭಿಸುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ. ಮಸೂದೆಯು ಇನ್ನು ಸೆನೆಟ್ಗೆ ಹೋಗುತ್ತದೆ. ಮುಂದಿನ ಕೆಲವು ದಿನಗಳಲ್ಲಿ ಅಲ್ಲಿ ಅದು ಅಂಗೀಕಾರಗೊಳ್ಳುವ ನಿರೀಕ್ಷೆಯಿದೆ. ಬಳಿಕ, ಅಧ್ಯಕ್ಷ ಜೋ ಬೈಡನ್ ಅದಕ್ಕೆ ಸಹಿ ಹಾಕುತ್ತಾರೆ. ಆಗ ಅದು ಕಾನೂನು ಆಗುತ್ತದೆ.
ಇದರ ಜೊತೆಗೆ, ಉಕ್ರೇನ್ 9 ಬಿಲಿಯ ಡಾಲರ್ (ಸುಮಾರು 75,033 ಕೋಟಿ ರೂಪಾಯಿ) ಮೊತ್ತದ ಇನ್ನೊಂದು ಆರ್ಥಿಕ ನೆರವನ್ನೂ ಪಡೆಯಲಿದೆ. ಇದು ‘‘ಮನ್ನಾ ಸಾಲ’’ವಾಗಿದ್ದು, ಅದನ್ನು ಮರುಪಾವತಿ ಮಾಡಬೇಕಾಗಿಲ್ಲ.
ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ 2022 ಫೆಬ್ರವರಿಯಲ್ಲಿ ಉಕ್ರೇನ್ ವಿರುದ್ಧ ಪೂರ್ಣ ಪ್ರಮಾಣದ ಸೇನಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಂದಿನಿಂದ ಗಡಿಯ ಎರಡೂ ಕಡೆಗಳಲ್ಲಿ ಲಕ್ಷಾಂತರ ಜನರು ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ. ಈ ಪೈಕಿ ಹೆಚ್ಚಿನವರು ಸೈನಿಕರು.
ಲಕ್ಷಾಂತರ ಉಕ್ರೇನ್ ನಾಗರಿಕರು ತಮ್ಮ ಮನೆಗಳನ್ನು ತೊರೆದು ಪಲಾಯನಗೈದಿದ್ದಾರೆ.