ನೇಪಾಳದಲ್ಲಿ ನಸುಕಿನಲ್ಲೇ 6.1 ತೀವ್ರತೆಯ ಪ್ರಬಲ ಭೂಕಂಪ

file photo
ಹೊಸದಿಲ್ಲಿ: ನೆರೆಯ ನೇಪಾಳದಲ್ಲಿ ಶುಕ್ರವಾರ ನಸುಕಿನಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ನೇಪಾಳದ ಕೇಂದ್ರ ಹಿಮಾಲಯ ಪ್ರದೇಶದ ಭಾಗವಾಗಿರುವ ಸಿಂಧುಪಾಲ್ಚೌಕ ಜಿಲ್ಲೆಯಲ್ಲಿ ಇದರ ಕೇಂದ್ರಬಿಂದು ಇತ್ತು.
ರಾಷ್ಟ್ರೀಯ ಭೂಕಂಪ ನಿಗಾ ಮತ್ತು ಸಂಶೋಧನಾ ಕೇಂದ್ರದ ವೆಬ್ಸೈಟ್ ಪ್ರಕಾರ, ಸ್ಥಳೀಯ ಕಾಲಮಾನ ನಸುಕಿನ 2.51ಕ್ಕೆ ಭೂಕಂಪ ಸಂಭವಿಸಿದ್ದು, ಸಿಂಧುಪಾಲ್ಚೌಕ ಜಿಲ್ಲೆಯ ಭೈರವಕುಂಡದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು.
ನೇಪಾಳದ ಪೂರ್ವ ಹಾಗೂ ಕೇಂದ್ರ ವಲಯ ಸೇರಿದಂತೆ ದೇಶದ ವಿವಿಧೆಡೆಗಳಲ್ಲಿ ಕಂಪನದ ಅನುಭವವಾಗಿದೆ. ನೆರೆಯ ಭಾರತ,ಚೀನಾ ಮತ್ತು ಟಿಬೆಟ್ನ ಕೆಲ ಭಾಗಗಳಲ್ಲೂ ಭೂಕಂಪ ಸಂಭವಿಸಿದೆ. ಆರಂಭಿಕ ಮೌಲ್ಯಮಾಪನದ ಪ್ರಕಾರ, ತಕ್ಷಣಕ್ಕೆ ಯಾವುದೇ ಸಾವು ನೋವಿನ ವರದಿಗಳು ಬಂದಿಲ್ಲ ಹಾಗೂ ಯಾವುದೇ ರಾಚನಿಕ ಹಾನಿಯೂ ಆಗಿಲ್ಲ. ಆದಾಗ್ಯೂ ಸ್ಥಳೀಯ ಅಧಿಕಾರಿಗಳು ತೊಂದರೆಗೀಡಾದ ಪ್ರದೇಶಗಳಲ್ಲಿ ಪರಿಣಾಮವನ್ನು ಅವಲೋಕಿಸುತ್ತಿದ್ದಾರೆ.
ನೇಪಾಳ ಭೂಕಂಪಕ್ಕೆ ತುತ್ತಾಗುವ ಅಪಾಯ ಸಾಧ್ಯತೆಗಳು ಅಧಿಕ ಇರುವುದರಿಂದ ಇತರ ಸಣ್ಣ ಭೂಕಂಪಗಳ ಬಗ್ಗೆ ಜಾಗೃತರಾಗಿರುವಂತೆ ಅಧಿಕಾರಿಗಳು ಸಲಹೆ ಮಾಡಿದ್ದಾರೆ.