ನೇಪಾಳದಲ್ಲಿ ಭೂಕುಸಿತ: 7 ಭಾರತೀಯರು ಸೇರಿ 65 ಮಂದಿ ನಾಪತ್ತೆ
Photo: PTI
ಕಠ್ಮಂಡು: ನೇಪಾಳದ ಚಿತ್ವಾನ್ ಪ್ರದೇಶದಲ್ಲಿ ಸಂಭವಿಸಿದ ಭಾರೀ ಭೂಕುಸಿತದ ಸಂದರ್ಭದಲ್ಲಿ ಎರಡು ಬಸ್ಸುಗಳು ತ್ರಿಶೂಲಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿ, ಏಳು ಮಂದಿ ಭಾರತೀಯರು ಸೇರಿದಂತೆ 65 ಮಂದಿ ನಾಪತ್ತೆಯಾಗಿದ್ದಾರೆ.
ಏಂಜೆಲ್ ಬಸ್ ಮತ್ತು ಗಣಪತಿ ಡಿಲಕ್ಸ್ ಬಸ್ಗಳು ಗೌರ್ ಮಾರ್ಗವಾಗಿ ಕಠ್ಮಂಡುವಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬೆಳಿಗ್ಗೆ 3.30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ನಾರಾಯಣಘಾಟ್- ಮುಗ್ಲಿಂಗ್ ರಸ್ತೆಯ ಸಿಮಾಲ್ತಾಲ್ ಪ್ರದೇಶದಲ್ಲಿ ತುಂಬಿ ಹರಿಯುತ್ತಿದ್ದ ನದಿಗೆ ಭೂಕುಸಿತದಿಂದಾಗಿ ಪ್ರಯಾಣಿಕರು ತಳ್ಳಲ್ಪಟ್ಟರು ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಪೈಕಿ ಏಳು ಮಂದಿ ಭಾರತೀಯರು ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಏಂಜೆಲ್ ಬಸ್ನಲ್ಲಿ 24 ಮಂದಿ ಹಾಗೂ ಗಣಪತಿ ಡಿಲಕ್ಸ್ ನಲ್ಲಿ 41 ಮಂದಿ ಪ್ರಯಾಣಿಕರು ಇದ್ದರು ಎಂದು ಪೊಲೀಸರು ಹೇಳಿದ್ದಾರೆ. ಗೌರ್ ಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮೂರು ಮಂದಿ ಪ್ರಯಾಣಿಕರು ವಾಹನದಿಂದ ಹೊರಕ್ಕೆ ಹಾರಿ ತಪ್ಪಿಸಿಕೊಂಡಿದ್ದಾರೆ.
ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ ಎಂದು ಮುಖ್ಯ ಜಿಲ್ಲಾ ಅಧಿಕಾರಿ ಇಂದ್ರದೇವ್ ಯಾದವ್ ಹೇಳಿದ್ದಾರೆ. ಪೊಲೀಸರು ಹಾಗೂ ಸಶಸ್ತ್ರ ಪಡೆ ಯೋಧರು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.