ಇಸ್ರೇಲ್ ವೈಮಾನಿಕ ದಾಳಿಯಲ್ಲಿ 67 ಮಂದಿ ಮೃತ್ಯು : ವರದಿ
ಸಾಂದರ್ಭಿಕ ಚಿತ್ರ | Photo: PTI
ಜೆರುಸಲೇಂ: ದಕ್ಷಿಣ ಗಾಝಾ ನಗರ ರಫಾದ ಮೇಲೆ ಇಸ್ರೇಲ್ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ 67 ಫೆಲೆಸ್ತೀನೀಯರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಗಾಝಾ ಪಟ್ಟಿಯಲ್ಲಿ ಕಳೆದ 4 ತಿಂಗಳಿಂದ ಇಸ್ರೇಲ್ ನಡೆಸುತ್ತಿರುವ ತೀವ್ರ ಬಾಂಬ್ ದಾಳಿಯಿಂದ ನೆಲೆ ಕಳೆದುಕೊಂಡಿರುವ ಸುಮಾರು 1 ದಶಲಕ್ಷ ಫೆಲೆಸ್ತೀನೀಯರು ದಕ್ಷಿಣ ಗಾಝಾ ಪಟ್ಟಿಗೆ ಸ್ಥಳಾಂತರಗೊಂಡಿದ್ದರು. ಇದೀಗ ಇಸ್ರೇಲ್ ತನ್ನ ದಾಳಿಯನ್ನು ದಕ್ಷಿಣ ಗಾಝಾದಲ್ಲಿ ಕೇಂದ್ರೀಕರಿಸಿರುವುದು ದುರಂತ ಪರಿಸ್ಥಿತಿಗೆ ಕಾರಣವಾಗಲಿದೆ ಎಂದು ವಿಶ್ವಸಂಸ್ಥೆ ಮಾನವೀಯ ನೆರವು ಏಜೆನ್ಸಿ ಕಳವಳ ವ್ಯಕ್ತಪಡಿಸಿದೆ.
ವೈಮಾನಿಕ ದಾಳಿಯ ಜತೆಗೇ ತನ್ನ ಪದಾತಿ ದಳದ ಕಾರ್ಯಾಚರಣೆಯೂ ಮುಂದುವರಿದಿದೆ ಎಂದು ಇಸ್ರೇಲ್ ಹೇಳಿದೆ. ರಫಾದ ಮೇಲೆ ಒಂದು ಗಂಟೆಗೂ ಹೆಚ್ಚು ಸಮಯ ನಡೆದ ಬಾಂಬ್ ದಾಳಿ ಹಾಗೂ ಆ ಬಳಿಕ ಟ್ಯಾಂಕ್ ಮೂಲಕ ನಡೆದ ಆಕ್ರಮಣದಲ್ಲಿ ಎರಡು ಮಸೀದಿಗಳು ಹಾಗೂ ಹಲವು ಜನವಸತಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸ್ಥಳೀಯರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ರವಿವಾರ ತಡರಾತ್ರಿ ನಡೆದ ದಾಳಿಯಲ್ಲಿ 67 ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ. ಹಲವು ಜನವಸತಿ ಕಟ್ಟಡಗಳು ನೆಲಸಮಗೊಂಡಿದ್ದು ಶೋಧ ಕಾರ್ಯಾಚರಣೆ ಮುಂದುವರಿದಿದೆ. ಸಾವು-ನೋವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಗಾಝಾ ಆರೋಗ್ಯ ಇಲಾಖೆ ಹೇಳಿದೆ.