ಪಾಕಿಸ್ತಾನಕ್ಕೆ 7 ಶತಕೋಟಿ ಡಾಲರ್ ನೆರವಿನ ಪ್ಯಾಕೇಜ್ : ಐಎಂಎಫ್ ಅನುಮೋದನೆ
PC :indiatvnews.
ನ್ಯೂಯಾರ್ಕ್ : ತೀವ್ರ ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಸರಕಾರ ನಡೆಸುತ್ತಿರುವ ಪ್ರಯತ್ನಗಳನ್ನು ಬಲಪಡಿಸಲು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಪಾಕಿಸ್ತಾನಕ್ಕೆ 7 ಶತಕೋಟಿ ಡಾಲರ್ ಗಳ ಆರ್ಥಿಕ ನೆರವು ಪ್ಯಾಕೇಜ್ ಘೋಷಿಸಿರುವುದಾಗಿ ವರದಿಯಾಗಿದೆ.
ತನ್ನ ಕೃಷಿ ಆದಾಯ ತೆರಿಗೆಯನ್ನು ಪರಿಷ್ಕರಿಸಲು, ಪ್ರಾಂತಗಳಿಗೆ ಕೆಲವು ಹಣಕಾಸಿನ ಜವಾಬ್ದಾರಿಗಳನ್ನು ವರ್ಗಾಯಿಸಲು ಮತ್ತು ಸಬ್ಸಿಡಿಗಳನ್ನು ಮಿತಿಗೊಳಿಸಲು ಪಾಕಿಸ್ತಾನ ಒಪ್ಪಿಗೆ ನೀಡಿದ ನಂತರ ಪಾಕಿಸ್ತಾನದೊಂದಿಗೆ ಸಿಬ್ಬಂದಿ ಮಟ್ಟದ ಒಪ್ಪಂದಕ್ಕೆ ಅನುಮೋದನೆ ನೀಡಲು ಐಎಂಎಫ್ ಆಡಳಿತ ಮಂಡಳಿ ಬುಧವಾರ ವಾಷಿಂಗ್ಟನ್ನಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದೆ.
ಐಎಂಎಫ್ ಕಾರ್ಯಕಾರಿ ಮಂಡಳಿಯು 7 ಶತಕೋಟಿ ಮೊತ್ತದ ವಿಸ್ತೃತ ನಿಧಿ ಸೌಲಭ್ಯವನ್ನು ಅನುಮೋದಿಸಿದೆ ಎಂದು ಪ್ರಧಾನ ಮಂತ್ರಿ ಕಚೇರಿಯ ಮೂಲಗಳು ಹೇಳಿವೆ.
ಐಎಂಎಫ್ ಸಾಲಕ್ಕೆ ಪಾಕಿಸ್ತಾನ 5% ಬಡ್ಡಿ ಪಾವತಿಸಲಿದೆ ಎಂದು ವಿತ್ತ ಸಚಿವಾಲಯವನ್ನು ಉಲ್ಲೇಖಿಸಿ `ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ. ಇದು 1958ರಿಂದ ಐಎಂಎಫ್ನಿಂದ ಪಾಕಿಸ್ತಾನ ಪಡೆದಿರುವ 25ನೇ ಆರ್ಥಿಕ ನೆರವಿನ ಪ್ಯಾಕೇಜ್ ಆಗಿದ್ದು, ಇದು ಐಎಂಎಫ್ನಿಂದ ಪಡೆಯಲಿರುವ ಅಂತಿಮ ಆರ್ಥಿಕ ಪ್ಯಾಕೇಜ್ ಆಗಿರಲಿದೆ ಎಂದು ಪಾಕ್ ಪ್ರಧಾನಿ ಶಹಬಾಝ್ ಷರೀಫ್ ಬುಧವಾರ ಪುನರುಚ್ಚರಿಸಿದ್ದಾರೆ.