7 ಶತಕೋಟಿ ಡಾಲರ್ ಸಾಲ: ಪಾಕ್- ಐಎಂಎಫ್ ಒಪ್ಪಂದ
PC ; IMF
ಇಸ್ಲಮಾಬಾದ್: ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನಕ್ಕೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ 7 ಶತಕೋಟಿ ಡಾಲರ್ ಸಾಲ ನೀಡುವ ಒಪ್ಪಂದ ಅಂತಿಮಗೊಂಡಿದೆ ಎಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
2023ರ `ಸ್ಟ್ಯಾಂಡ್-ಬೈ' ಒಪ್ಪಂದದಡಿ ಸಾಧಿಸಲಾದ ಆರ್ಥಿಕ ಸ್ಥಿರತೆಯನ್ನು ದೃಢಪಡಿಸಲು ಐಎಂಎಫ್ ಸಿಬ್ಬಂದಿ ಮತ್ತು ಪಾಕಿಸ್ತಾನದ ಅಧಿಕಾರಿಗಳ ನಡುವೆ ಸಿಬ್ಬಂದಿ ಮಟ್ಟದ ಒಪ್ಪಂದ ಅಂತಿಮಗೊಂಡಿದೆ. ಇದರಂತೆ 37 ತಿಂಗಳಾವಧಿಯ ವಿಸ್ತøತ ನಿಧಿ ಸೌಲಭ್ಯ ವ್ಯವಸ್ಥೆಯನ್ನು ಅಂತಿಮಗೊಳಿಸಲಾಗಿದೆ. ಇದೀಗ ಐಎಂಎಫ್ನ ಕಾರ್ಯಕಾರಿ ಮಂಡಳಿಯ ಅನುಮೋದನೆಗಾಗಿ ಕಾಯುತ್ತಿದ್ದೇವೆ ಎಂದು ಪಾಕಿಸ್ತಾನ ಸರಕಾರದ ಮೂಲಗಳು ಹೇಳಿವೆ. ಹೊಸ ಆರ್ಥಿಕ ನೆರವು ಸ್ಥೂಲ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವ ಅಧಿಕಾರಿಗಳ ಪ್ರಯತ್ನವನ್ನು ಬೆಂಬಲಿಸುವ ಉದ್ದೇಶ ಹೊಂದಿದೆ.
ಸಾರ್ವಜನಿಕ ಹಣಕಾಸುಗಳನ್ನು ಬಲಪಡಿಸಲು, ಹಣದುಬ್ಬರವನ್ನು ಕಡಿಮೆ ಮಾಡಲು, ಖಾಸಗಿ ವಲಯದ ನೇತೃತ್ವದ ಬೆಳವಣಿಗೆಯನ್ನು ಉತ್ತೇಜಿಸಲು ಆರ್ಥಿಕ ಅಸ್ಪಷ್ಟತೆಯನ್ನು ತೆಗೆದು ಹಾಕುವ ಮೂಲಕ ಕಳೆದ ವರ್ಷದಲ್ಲಿ ಸಾಧಿಸಿದ ಕಠಿಣವಾದ ಸ್ಥೂಲ ಆರ್ಥಿಕ ಸ್ಥಿರತೆಯ ಗತಿಗೆ ಇನ್ನಷ್ಟು ವೇಗ ನೀಡುವ ಉದ್ದೇಶವಿದೆ. ಪಾಕಿಸ್ತಾನದ ಅಭಿವೃದ್ಧಿ ಮತ್ತು ದ್ವಿಪಕ್ಷೀಯ ಪಾಲುದಾರರಿಂದ ಬಲವಾದ ಆರ್ಥಿಕ ಬೆಂಬಲ ಮುಂದುವರಿಯುವುದು ಕಾರ್ಯಕ್ರಮದ ಉದ್ದೇಶ ಈಡೇರಿಕೆಗೆ ನಿರ್ಣಾಯಕವಾಗಿದೆ ಎಂದು ಐಎಂಎಫ್ ಹೇಳಿದೆ.