77ನೇ ಸ್ವಾತಂತ್ರ್ಯ ದಿನಾಚರಣೆ: ವಿಶ್ವದಾದ್ಯಂತ ಭಾರತೀಯರ ಸಂಭ್ರಮಾಚರಣೆ
ಸಾಂದರ್ಭಿಕ ಚಿತ್ರ.| Photo: PTI
ವಾಷಿಂಗ್ಟನ್: ವಿಶ್ವದಾದ್ಯಂತ ಭಾರತೀಯರು ಮಂಗಳವಾರ ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಷ್ಟ್ರಗೀತೆ ಮತ್ತು ಭಕ್ತಿಗೀತೆಗಳನ್ನು ಹಾಡಿ ಶುಭಾಷಯ ವಿನಿಮಯ ಮಾಡಿಕೊಳ್ಳುವ ಮೂಲಕ ಆಚರಿಸಿದರು ಎಂದು ವರದಿಯಾಗಿದೆ.
ವಾಷಿಂಗ್ಟನ್ ನಲ್ಲಿ ಭಾರತೀಯ ಅಮೆರಿಕನ್ನರ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್, ಅಮೆರಿಕ-ಭಾರತ ನಡುವಿನ ದ್ವಿಪಕ್ಷೀಯ ಸಂಬಂಧ ಈ ಹಿಂದಿಗಿಂತಲೂ ಆಳ ಮತ್ತು ವಿಸ್ತಾರವಾಗಿದೆ ಎಂದರು.
ಚೀನಾದ ಬೀಜಿಂಗ್ನಲ್ಲಿ ಭಾರತದ ರಾಯಭಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಸಮುದಾಯದ ಸದಸ್ಯರು ಹಾಗೂ ರಾಜತಾಂತ್ರಿಕ ಅಧಿಕಾರಿಗಳು ಪಾಲ್ಗೊಂಡಿದ್ದರು. ಶಾಂಘೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಕಾನ್ಸುಲ್ ಜನರಲ್ ಎನ್. ನಂದಕುಮಾರ್ ತ್ರಿವರ್ಣ ಧ್ವಜ ಅರಳಿಸಿ, ಭಾರತದ ರಾಷ್ಟ್ರಪತಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣವನ್ನು ಓದಿ ಹೇಳಿದರು. ಆಸ್ಟ್ರೇಲಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಹೈಕಮಿಷನರ್ ಮನ್ಪ್ರೀತ್ ವೋರಾ ರಾಷ್ಟ್ರಧ್ವಜ ಅರಳಿಸಿ ರಾಷ್ಟ್ರಪತಿಯ ಸಂದೇಶವನ್ನು ಓದಿ ಹೇಳಿದರು.
ಫ್ರಾನ್ಸ್, ಸಿಂಗಾಪುರ, ಶ್ರೀಲಂಕಾ ಸೇರಿದಂತೆ ಹಲವು ದೇಶಗಳಲ್ಲಿ ಭಾರತೀಯರು ಸ್ವಾತಂತ್ರ್ಯ ದಿನದ ಸಂಭ್ರಮವನ್ನು ಆಚರಿಸಿದ ಬಗ್ಗೆ ವರದಿಯಾಗಿದೆ.