ಕದನ ವಿರಾಮ ಒಪ್ಪಂದದ ಬಳಿಕ ಇಸ್ರೇಲ್ ದಾಳಿಯಲ್ಲಿ 81 ಮಂದಿ ಮೃತ್ಯು

ಸಾಂದರ್ಭಿಕ ಚಿತ್ರ | PC : PTI/AP
ಗಾಝಾ: ಕಳೆದ 24 ಗಂಟೆಗಳಲ್ಲಿ ಗಾಝಾದಾದ್ಯಂತ ಇಸ್ರೇಲ್ ನ ದಾಳಿಯಲ್ಲಿ ಕನಿಷ್ಠ 81 ಫೆಲೆಸ್ತೀನೀಯರು ಸಾವನ್ನಪ್ಪಿದ್ದು 188 ಮಂದಿ ಗಾಯಗೊಂಡಿರುವುದಾಗಿ ಗಾಝಾ ಆರೋಗ್ಯ ಇಲಾಖೆ ಗುರುವಾರ ಹೇಳಿದೆ.
ಗಾಝಾ ಮತ್ತು ಇಸ್ರೇಲ್ ನಲ್ಲಿ ಜನರು ಕದನ ವಿರಾಮ ಒಪ್ಪಂದದ ಸಂಭ್ರಮಾಚರಣೆಯಲ್ಲಿ ಇರುವಾಗಲೇ ಇಸ್ರೇಲ್ ನ ಮಿಲಿಟರಿ ಗಾಝಾದಲ್ಲಿ ಬುಧವಾರ ರಾತ್ರಿಯಿಂದ ವ್ಯಾಪಕ ವೈಮಾನಿಕ ದಾಳಿ ನಡೆಸಿರುವುದಾಗಿ ನಾಗರಿಕ ತುರ್ತು ಸೇವಾ ಇಲಾಖೆ ಗುರುವಾರ ಹೇಳಿದೆ.
ಗಾಝಾ ಕದನ ವಿರಾಮಕ್ಕೆ ಸಂಬಂಧಿಸಿದ ಕೆಲವು ಮಹತ್ವದ ಬೆಳವಣಿಗೆಗಳು:
* ಗಾಝಾ ಕದನ ವಿರಾಮ ಒಪ್ಪಂದವನ್ನು ರಶ್ಯ ಸ್ವಾಗತಿಸಿದೆ.
* ಗಾಝಾಕ್ಕೆ 123.5 ದಶಲಕ್ಷ ಡಾಲರ್ ಮೊತ್ತದ ಹೊಸ ನೆರವು ಪ್ಯಾಕೇಜ್ ಘೋಷಿಸಿದ ಯುರೋಪಿಯನ್ ಯೂನಿಯನ್.
* ಇಸ್ರೇಲ್ ನ ನಿಯೋಗ ಈಗಲೂ ದೋಹಾದಲ್ಲಿಯೇ ಉಳಿದುಕೊಂಡಿದ್ದು ಘೋಷಿತ ಕದನವಿರಾಮ ಒಪ್ಪಂದದ ವಿವರಗಳನ್ನು ಅಂತಿಮಗೊಳಿಸುತ್ತಿದೆ ಎಂದು `ಟೈಮ್ಸ್ ಆಫ್ ಇಸ್ರೇಲ್' ವರದಿ ಮಾಡಿದೆ.
* ಕದನ ವಿರಾಮ ಒಪ್ಪಂದ ಎಂದರೆ `ಜನವರಿ 19ರವರೆಗೆ ಗಾಝಾದಲ್ಲಿ ಸಾಧ್ಯವಾದಷ್ಟು ಅಪರಾಧಗಳನ್ನು ನಡೆಸಲು ಪರ್ಮಿಟ್ ಸಿಕ್ಕಿದಂತೆ ಎಂದು ಇಸ್ರೇಲ್ ಭಾವಿಸಬಾರದು' ಎಂದು ಗಾಝಾದಲ್ಲಿ ಕಾರ್ಯ ನಿರ್ವಹಿಸುವ ಪ್ರಮುಖ ಎನ್ಜಿಒ ಸಂಸ್ಥೆ `ಆ್ಯಕ್ಷನ್ ಫಾರ್ ಹ್ಯುಮಾನಿಟಿ' ಹೇಳಿದೆ.
* ಗಾಝಾದಲ್ಲಿ ತಕ್ಷಣ ಯುದ್ಧ ಅಂತ್ಯ, ನೆರವಿನ ಪ್ರಮಾಣ ಹೆಚ್ಚಳಕ್ಕೆ ಜಾಗತಿಕ ಮುಖಂಡರ ಆಗ್ರಹ.