ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪತ್ನಿಯ ವಿರುದ್ಧ ಕೊಲೆ ಪ್ರಕರಣ ದಾಖಲು
ಇಮ್ರಾನ್ ಖಾನ್ | PC : PTI
ಇಸ್ಲಮಾಬಾದ್: ಕಳೆದ ತಿಂಗಳು ನಡೆದಿದ್ದ ಪ್ರತಿಭಟನೆಯ ಸಂದರ್ಭ ಅರೆ ಸೇನಾಪಡೆಯ ಯೋಧರ ಸಾವಿಗೆ ಸಂಬಂಧಿಸಿ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಸ್ಥಾಪಕ ಇಮ್ರಾನ್ ಖಾನ್, ಅವರ ಪತ್ನಿ ಬುಷ್ರಾ ಬೀಬಿ ಹಾಗೂ ಪಕ್ಷದ ಹಿರಿಯ ನಾಯಕರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಇಸ್ಲಮಾಬಾದ್ನಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭ ಪಿಟಿಐ ಬೆಂಬಲಿಗರು ಚಲಾಯಿಸುತ್ತಿದ್ದ ಕಾರಿನಡಿ ಸಿಲುಕಿ ಅರೆಸೇನಾ ಪಡೆಯ ಮೂವರು ಯೋಧರು ಮೃತಪಟ್ಟಿದ್ದು ಓರ್ವ ಯೋಧ ಗಾಯಗೊಂಡಿದ್ದ. ಈ ಘಟನೆಯ ಬಗ್ಗೆ ಇಮ್ರಾನ್ ಬಂಧನದಲ್ಲಿರುವ ಅಡಿಯಾಲಾ ಜೈಲಿನಲ್ಲಿ ಯೋಜನೆ ರೂಪಿಸಲಾಗಿತ್ತು ಎಂದು ಆರೋಪಿಸಿ ಅರೆಸೇನಾ ಪಡೆಯ ಅಧಿಕಾರಿ ನೀಡಿದ ದೂರಿನಂತೆ ಇಸ್ಲಮಾಬಾದ್ನ ರಮ್ನಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್' ವರದಿ ಮಾಡಿದೆ. ಇಮ್ರಾನ್ ಖಾನ್ ಸೂಚನೆಯಂತೆ ಅರೆಸೇನಾ ಪಡೆಯ ಯೋಧರನ್ನು ಕೊಲೆ ಮಾಡಲಾಗಿದ್ದು ಇಮ್ರಾನ್, ಅವರ ಪತ್ನಿಯನ್ನು ಪ್ರಾಥಮಿಕ ಶಂಕಿತರು ಎಂದು ಎಫ್ಐಆರ್ನಲ್ಲಿ ಹೆಸರಿಸಲಾಗಿದ್ದು ಪಕ್ಷದ ಹಿರಿಯ ನಾಯಕರು ಈ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಜೈಲಿನಲ್ಲಿರುವ ಇತರ ಕೈದಿಗಳು, ಜೈಲು ಸಿಬ್ಬಂದಿಗಳು ಹಾಗೂ ಗುಪ್ತ ಪೊಲೀಸ್ ಸಿಬ್ಬಂದಿಯನ್ನು ಸಾಕ್ಷಿಗಳೆಂದು ಹೆಸರಿಸಲಾಗಿದ್ದು ಇಮ್ರಾನ್ ಪತ್ನಿ ಹಾಗೂ ಇತರ ನಾಯಕರು ವೀಡಿಯೊ ಸಂದೇಶದ ಮೂಲಕ ಸೇನೆ ಹಾಗೂ ಸರಕಾರದ ವಿರುದ್ಧದ ಹಿಂಸೆಗೆ ಪ್ರಚೋದನೆ ನೀಡಿರುವುದಾಗಿ ಉಲ್ಲೇಖಿಸಲಾಗಿದೆ.