ನೈಜರ್ ನಲ್ಲಿ ಸೈನಿಕರ ಗುಂಪಿನ ದಂಗೆ; ಅಧ್ಯಕ್ಷರ ಬಂಧನ, ಸರಕಾರದ ಪದಚ್ಯುತಿ
Photo: hindustantimes.com
ನಿಯಾಮೆ: ಪಶ್ಚಿಮ ಆಫ್ರಿಕಾದ ನೈಜರ್ ದೇಶದಲ್ಲಿ ಅಧ್ಯಕ್ಷರ ಭದ್ರತೆಗೆ ನಿಯೋಜಿಸಲಾಗಿರುವ ಪ್ರೆಸಿಡೆನ್ಷಿಯಲ್ ಗಾರ್ಡ್ನ ಸಿಬಂದಿ ಸರಕಾರದ ವಿರುದ್ಧ ದಂಗೆ ಎದ್ದಿದ್ದು ಅಧ್ಯಕ್ಷ ಮುಹಮ್ಮದ್ ಬಝೌಮ್ರನ್ನು ಬಂಧಿಸಿ ಸರಕಾರವನ್ನು ಪದಚ್ಯುತಗೊಳಿಸಿರುವುದಾಗಿ ವರದಿಯಾಗಿದೆ.
ಅಧ್ಯಕ್ಷರನ್ನು ವಶಕ್ಕೆ ಪಡೆದುಕೊಂಡ ಬಳಿಕ ರಾಜಧಾನಿ ನಿಯಾಮೆಯಲ್ಲಿನ ಅಧ್ಯಕ್ಷರ ನಿವಾಸ ಹಾಗೂ ಕಚೇರಿಯ ಎಲ್ಲಾ ರಸ್ತೆಗಳನ್ನೂ ಬಂದ್ ಮಾಡಲಾಗಿದೆ. ದೇಶದ ಎಲ್ಲಾ ಇಲಾಖೆ, ಸಚಿವಾಲಯಗಳನ್ನೂ ಅಮಾನತಿನಲ್ಲಿಡಲಾಗಿದೆ ಮತ್ತು ದೇಶದ ಗಡಿಯನ್ನು ಮುಚ್ಚಲಾಗಿದೆ. ಮುಂದಿನ ಆದೇಶದವರೆಗೆ ದೇಶದಾದ್ಯಂತ ರಾತ್ರಿ ಕಫ್ರ್ಯೂ ಜಾರಿಗೊಳಿಸಲಾಗಿದೆ ಎಂದು ಪ್ರೆಸಿಡೆನ್ಷಿಯಲ್ ಗಾರ್ಡ್ನ ಹೇಳಿಕೆ ತಿಳಿಸಿದೆ.
ದೇಶದಲ್ಲಿನ ಭದ್ರತಾ ಪರಿಸ್ಥಿತಿ ನಿರಂತರ ಹದಗೆಡುತ್ತಿರುವುದು, ಕಳಪೆ ಆರ್ಥಿಕ ಮತ್ತು ಸಾಮಾಜಿಕ ಆಡಳಿತದ ಹಿನ್ನೆಲೆಯಲ್ಲಿ ಹಾಲಿ ಸರಕಾರದ ಆಡಳಿತವನ್ನು ಅಂತ್ಯಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಪ್ರೆಸಿಡೆನ್ಷಿಯಲ್ ಗಾರ್ಡ್ನ ಮುಖ್ಯಸ್ಥ ಕರ್ನಲ್ ಮೇಜರ್ ಅಮಡೊವು ಅಬ್ದ್ರಾಮನ್ ಹೇಳಿಕೆ ನೀಡಿದ್ದಾರೆ. ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು ‘ಸಂವಿಧಾನವನ್ನು ವಿಸರ್ಜಿಸಲಾಗಿದ್ದು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5ರವರೆಗೆ ದೇಶದಲ್ಲಿ ಕರ್ಫ್ಯೂ ಹೇರಿರುವುದಾಗಿ' ಘೋಷಿಸಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅಂತರಾಷ್ಟ್ರೀಯ ಸಮುದಾಯ, ಅಧ್ಯಕ್ಷ ಮುಹಮ್ಮದ್ ಬಝೂಮ್ಗೆ ಬೆಂಬಲ ಘೋಷಿಸಿದೆ. ಬಝೂಮ್ರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವಂತೆ ಪ್ರಾದೇಶಿಕ ಮತ್ತು ಜಾಗತಿಕ ಮುಖಂಡರು ಆಗ್ರಹಿಸಿದ್ದಾರೆ. ನೆರೆದೇಶ ಬೆನಿನ್ನ ಅಧ್ಯಕ್ಷ ಪ್ಯಾಟ್ರಿಸ್ ತಲೋನ್ ತಕ್ಷಣ ನಿಯಾಮೆಗೆ ತೆರಳಲಿದ್ದು ಸಂಧಾನ ಮಾತುಕತೆಯ ಮಧ್ಯಸ್ಥಿಕೆ ವಹಿಸಲಿದ್ದಾರೆ ಎಂದು ಪಶ್ಚಿಮ ಆಫ್ರಿಕಾ ದೇಶಗಳ ಆರ್ಥಿಕ ವೇದಿಕೆ(ಎಕೊವಸ್)ನ ಅಧ್ಯಕ್ಷರು ಹೇಳಿದ್ದಾರೆ.
1960ರಲ್ಲಿ ಫ್ರಾನ್ಸ್ನಿಂದ ಸ್ವಾತಂತ್ರ್ಯ ಪಡೆದ ನೈಜರ್ನಲ್ಲಿ 2 ವರ್ಷದ ಹಿಂದೆ ನಡೆದ ಅಧಿಕಾರ ಪರಿವರ್ತನೆ ಪ್ರಕ್ರಿಯೆಯಲ್ಲಿ ಬಝೌಮ್ ಅಧಿಕಾರಕ್ಕೆ ಬಂದಿದ್ದರು.
`ಪ್ರೆಸಿಡೆನ್ಷಿಯಲ್ ಗಾರ್ಡ್(ಪಿಜಿ)ಯ ಕೆಲವು ಶಕ್ತಿಗಳು ದುಡುಕಿನ ಕಾರ್ಯ ನಡೆಸಿವೆ ಮತ್ತು ರಾಷ್ಟ್ರೀಯ ಸಶಸ್ತ್ರ ಪಡೆ ಹಾಗೂ ನ್ಯಾಷನಲ್ ಗಾರ್ಡ್ನ ಬೆಂಬಲ ಪಡೆಯುವ ವಿಫಲ ಪ್ರಯತ್ನ ನಡೆಸಿವೆ. ದುಡುಕಿನ ಕಾರ್ಯ ನಡೆಸಿದವರು ತಮ್ಮ ಅನಪೇಕ್ಷಿತ ಕೃತ್ಯದಿಂದ ಹಿಂದೆ ಸರಿಯದಿದ್ದರೆ ಸಶಸ್ತ್ರ ಪಡೆ ಹಾಗೂ ನ್ಯಾಷನಲ್ ಗಾರ್ಡ್ ಸಿಬಂದಿ ಅವರ ಮೇಲೆ ದಾಳಿಗೆ ಸಿದ್ಧವಾಗಿದೆ' ಎಂದು ಅಧ್ಯಕ್ಷರ ಕಚೇರಿ ಹೇಳಿದ್ದು ಅಧ್ಯಕ್ಷರು ಸುರಕ್ಷಿತವಾಗಿದ್ದಾರೆ ಎಂದು ಟ್ವೀಟ್ ಮಾಡಿದೆ.
ಈ ಮಧ್ಯೆ, ಅಧ್ಯಕ್ಷರ ನಿವಾಸ ಪ್ರವೇಶಿಸಲು ಮುಂದಾದ ಬೆಂಬಲಿಗರನ್ನು ಪ್ರೆಸಿಡೆನ್ಷಿಯಲ್ ಗಾರ್ಡ್ನ ಸಿಬಂದಿ ತಡೆದಿದ್ದಾರೆ. ಈ ಸಂದರ್ಭ ಸಿಬಂದಿ ಹಾರಿಸಿದ ಗುಂಡಿನಿಂದ ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.