ಪಾಕ್ ನಿಂದ ಭಾರತಕ್ಕೆ ಮಾದಕದ್ರವ್ಯ ಕಳ್ಳಸಾಗಣೆ ಮಾಡುತ್ತಿದ್ದ ಬೃಹತ್ ಜಾಲ ಬಯಲಿಗೆ; ಆರು ಮಂದಿಯ ಬಂಧನ
ಗಡಿಯಾಚೆಯಿಂದ ಡ್ರೋನ್ ಮೂಲಕ ಡ್ರಗ್ಸ್, ಶಸ್ತ್ರಾಸ್ತ್ರ ಕಳ್ಳಸಾಗಣೆ
ಸಾಂದರ್ಭಿಕ ಚಿತ್ರ
ಲಾಹೋರ್: ಗಡಿಯಾಚೆಯಿಂದ ಭಾರತಕ್ಕೆ ಡ್ರೋನ್ಗಳ ಮೂಲಕ ಮಾದಕದ್ರವ್ಯವನ್ನು ಕಳ್ಳಸಾಗಣೆ ಮಾಡುತ್ತಿರುವ ಬೃಹತ್ ಜಾಲವನ್ನು ತಾನು ಭೇದಿಸಿರುವುದಾಗಿ ಪಾಕಿಸ್ತಾನದ ಮಾದಕದ್ರವ್ಯ ನಿಗ್ರಹ ದಳ ಬುಧವಾರ ತಿಳಿಸಿದೆ.
ಪಾಕಿಸ್ತಾನದೊಳಗೆ ಮಾದಕದ್ರವ್ಯ, ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆಂಬ ಆರೋಪದಲ್ಲಿ ಕಳೆದ ವಾರ ಪಾಕಿಸ್ತಾನದ ರೇಂಜರ್ಗಳು ಆರು ಮಂದಿ ಭಾರತೀಯ ಪ್ರಜೆಗಳನ್ನು ಬಂಧಿಸಿದ್ದರು.
ಈ ಕಳ್ಳಸಾಗಣೆದಾರರಲ್ಲಿ ನಾಲ್ವರು ಭಾರತದ ಪಂಜಾಬ್ ರಾಜ್ಯದ ಫಿರೋಝ್ಪುರ ಜಿಲ್ಲೆಯವರಾಗಿದ್ದು, ಅವರು ಗುರ್ಮಿತ್ ಸಿಂಗ್, ಶಿಂಧರ್ಸಿಂಗ್, ಜೋಗಿಂದರ್ ಸಿಂಗ್ ಹಾಗೂ ವಿಶಾಲ್ ಜಗ್ಗಾ ಎಂದು ಗುರುತಿಸಲಾಗಿದೆ ಎಂದು ಪಾಕ್ ಗಡಿಭದ್ರತಾಪಡೆ ‘ರೇಂಜರ್ಸ್’ ತಿಳಿಸಿದೆ.
ಇನ್ನಿಬ್ಬರು ಆರೋಪಿಗಳಾದ ರತನ್ಪಾಲ್ ಸಿಂಗ್ ಜಲಂಧರ್ ಹಾಗೂ ಗರ್ವೇಂದರ್ ಸಿಂಗ್ ಲುಧಿಯಾದವರೆಂದು ಪಾಕ್ ರೇಂಜರ್ಸ್ನ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಭಾರತಕ್ಕೆ ಡ್ರೋನ್ಗಳ ಮೂಲಕ ಮಾದಕದ್ರವ್ಯಗಳನ್ನು ಅದರಲ್ಲೂ ವಿಶೇಷವಾಗಿ ಹೆರಾಯಿನ್ ಅನ್ನು ಕಳ್ಳಸಾಗಣೆ ಮಾಡುತ್ತಿದ್ದರೆಂದು ಲಾಹೋರ್ ಪೊಲೀಸ್ ಪಡೆಯ ಮಾದಕದ್ರವ್ಯ ವಿರೋಧಿ ದಳದ ಅಧಿಕಾರಿಗಳು ತಿಳಿಸಿದ್ದಾರೆ.