ಉಕ್ರೇನ್ ಯುದ್ಧ ವಿರೋಧಿಸಿದ್ದ ರಶ್ಯ ಪತ್ರಕರ್ತೆಗೆ 8 ವರ್ಷ ಜೈಲು
Photocredit :hindustantimes.com
ಮಾಸ್ಕೊ : ಟಿವಿ ನೇರಪ್ರಸಾರ ಕಾರ್ಯಕ್ರಮದಲ್ಲಿ ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ವಿರೋಧಿಸಿದ್ದ ರಶ್ಯದ ಪತ್ರಕರ್ತೆ ಮರಿನಾ ಒಸ್ಯಾವನಿಕೋವಗೆ ರಶ್ಯದ ಸೇನೆಯ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡಿದ ಅಪರಾಧಕ್ಕೆ 8 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಧಿಕಾರಿಗಳ ಕಚೇರಿಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
45 ವರ್ಷದ ಒಸ್ಯಾವನಿಕೋವ 2022ರ ಮಾರ್ಚ್ನಲ್ಲಿ ನಡೆದ ಟಿವಿ ಕಾರ್ಯಕ್ರಮದಲ್ಲಿ ಉಕ್ರೇನ್ ಯುದ್ಧವನ್ನು ಟೀಕಿಸುವ ಮತ್ತು ಖಂಡಿಸುವ ಫಲಕವನ್ನು ಎತ್ತಿಹಿಡಿದಿದ್ದರು. ಆದರೆ ಈಗ ವಿಧಿಸಿರುವ ಶಿಕ್ಷೆ 4 ತಿಂಗಳ ಬಳಿಕ ಮಾಸ್ಕೋದಲ್ಲಿ ಆಕೆ ನಡೆಸಿದ ಪ್ರತ್ಯೇಕ ಪ್ರತಿಭಟನೆಗೆ ಸಂಬಂಧಿಸಿದ್ದು. ಈ ಪ್ರಕರಣದಲ್ಲಿ ಒಸ್ಯಾವನಿಕೋವ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆದು 8 ವರ್ಷ 6 ತಿಂಗಳ ಜೈಲುಶಿಕ್ಷೆ ವಿಧಿಸಲಾಗಿದೆ. ಜತೆಗೆ 4 ವರ್ಷ ಸಾಮಾಜಿಕ ಮಾಧ್ಯಮ ಖಾತೆ ನಿರ್ವಹಿಸುವುದನ್ನು ನಿಷೇಧಿಸಲಾಗಿದೆ ಎಂದು ನ್ಯಾಯಾಲಯದ ತೀರ್ಪಿನಲ್ಲಿ ತಿಳಿಸಲಾಗಿದೆ.
ಗೃಹಬಂಧನದಲ್ಲಿದ್ದ ಒಸ್ಯಾವನಿಕೋವ ಕಳೆದ ವರ್ಷ ತನ್ನ 11 ವರ್ಷದ ಪುತ್ರಿಯೊಂದಿಗೆ ದೇಶದಿಂದ ಪರಾರಿಯಾಗಿದ್ದರು. ಅವರ ಇನ್ಸ್ಟಾಗ್ರಾಮ್ ಪೇಜ್ನ ಪ್ರಕಾರ ಅವರು ಫ್ರಾನ್ಸ್ನಲ್ಲಿದ್ದಾರೆ. ` ಭಯ ಪಡದಿದ್ದಕ್ಕಾಗಿ ಮತ್ತು ಅವರ ಪರವಾಗಿ ಮಾತನಾಡಲು ನಿರಾಕರಿಸಿದ್ದಕ್ಕಾಗಿ ನನ್ನನ್ನು ಶಿಕ್ಷಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ನಾನೇನೂ ತಪ್ಪು ಮಾಡಿಲ್ಲ ಮತ್ತು ನನ್ನ ಕೃತ್ಯವನ್ನು ಈಗಲೂ ಸಮರ್ಥಿಸಿಕೊಳ್ಳುತ್ತಿದ್ದೇನೆ. ನನ್ನ ಮೇಲಿನ ಆಪಾದನೆ ರಾಜಕೀಯ ಉದ್ದೇಶದಿಂದ ಕೂಡಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಶಿಕ್ಷೆಯನ್ನು ಫ್ರಾನ್ಸ್ ಖಂಡಿಸಿದ್ದು `ಅಧಿಕಾರವನ್ನು ಟೀಕಿಸುವ ಧ್ವನಿಗಳನ್ನು ನಿಗ್ರಹಿಸುವ ಕೆಲಸವನ್ನು ರಶ್ಯ ಅಧಿಕಾರಿಗಳು ಮಾಡುತ್ತಿದ್ದಾರೆ' ಎಂದು ಫ್ರಾನ್ಸ್ನ ರಕ್ಷಣಾ ಸಚಿವೆ ಕ್ಯಾಥರಿನ್ ಕೊಲೊನಾ ಟೀಕಿಸಿದ್ದಾರೆ.