ಮಾನವೀಯತೆಯನ್ನು ಪರೀಕ್ಷೆಗೊಳಪಡಿಸಿರುವ ಯುದ್ಧ
Photo: PTI
ಯೋಮ್ ಕಿಪುರ್ ಯುದ್ಧದ ವಾರ್ಷಿಕ ದಿನವಾಗಿದ್ದ 2023ರ ಅ.7ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು. ಈ ದಾಳಿಯು ಇಸ್ರೇಲ್ ಪಾಲಿಗೆ ವಿನಾಶಕಾರಿಯಾಗಿತ್ತು. ಸಭ್ಯ ಜಗತ್ತಿನಲ್ಲಿ ಹಿಂಸೆಗೆ ಯಾವುದೇ ಸ್ಥಾನವಿಲ್ಲ ಎನ್ನುವುದು ಕಾಂಗ್ರೆಸ್ ಪಕ್ಷದ ಬಲವಾದ ನಂಬಿಕೆಯಾಗಿದೆ ಮತ್ತು ಅದು ಮರುದಿನವೇ ಹಮಾಸ್ ದಾಳಿಯನ್ನು ಸ್ಪಷ್ಟವಾಗಿ ಖಂಡಿಸಿತ್ತು.
ಆದಾಗ್ಯೂ ಹೆಚ್ಚಿನ ಸಂಖ್ಯೆಯಲ್ಲಿ ಅಮಾಯಕ ಮಕ್ಕಳು,ಮಹಿಳೆಯರು ಮತ್ತು ಪುರುಷರು ಸೇರಿದಂತೆ ಸಾವಿರಾರು ಜನರ ಸಾವುಗಳಿಗೆ ಕಾರಣವಾದ ಗಾಝಾ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ಇಸ್ರೇಲ್ ಸೇನೆಯ ವಿವೇಚನಾರಹಿತ ಕಾರ್ಯಾಚರಣೆಗಳಿಂದ ಸಂಕಷ್ಟವು ಇನ್ನಷ್ಟು ಉಲ್ಬಣಗೊಂಡಿದೆ. ಇಸ್ರೇಲಿನ ಶಕ್ತಿಯು ಈಗ ಅಮಾಯಕರು ಮತ್ತು ನಿರ್ದೋಷಿಗಳಾಗಿರುವ ಜನರ ವಿರುದ್ಧ ಸೇಡು ತೀರಿಸಿಕೊಳ್ಳುವುದರ ಮೇಲೆ ಕೇಂದ್ರೀಕೃತವಾಗಿದೆ. ಹಮಾಸ್ ದಾಳಿಯಲ್ಲಿ ಯಾವುದೇ ಪಾತ್ರವನ್ನು ಹೊಂದಿರದಿದ್ದ ಮಕ್ಕಳು, ಮಹಿಳೆಯರು ಮತ್ತು ಪುರುಷರ ಮೇಲೆ ವಿಶ್ವದ ಅತ್ಯಂತ ಶಕ್ತಿಶಾಲಿ ಅಸ್ತ್ರಗಳನ್ನು ಪ್ರಯೋಗಿಸಲಾಗುತ್ತಿದೆ. ಇವರು ದಶಕಗಳಿಂದಲೂ ತಾರತಮ್ಯ ಮತ್ತು ಸಂಕಷ್ಟಗಳನ್ನು ಅನುಭವಿಸುತ್ತಿರುವ ಅದೇ ಜನರಾಗಿದ್ದಾರೆ.
ವಿವೇಚನಾರಹಿತ ವಿನಾಶ
ಈ ಯುದ್ಧದಲ್ಲಿ ಇಡೀ ಕುಟುಂಬಗಳು ನಿರ್ನಾಮಗೊಂಡಿವೆ, ವಸತಿ ಪ್ರದೇಶಗಳಿದ್ದಲ್ಲಿ ಅವಶೇಷಗಳು ರಾಶಿ ಬಿದ್ದಿವೆ. ಜನರನ್ನು ಆವರಿಸಿರುವ ವ್ಯಾಪಕ ಮಾನವೀಯ ಬಿಕ್ಕಟ್ಟನ್ನು ನಿಭಾಯಿಸಲು ಆಸ್ಪತ್ರೆಗಳಿಗೆ ಸಾಧ್ಯವಾಗುತ್ತಿಲ್ಲ. ನೀರು, ಆಹಾರ ಮತ್ತು ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಿರುವುದು ಫೆಲೆಸ್ತೀನಿಗಳಿಗೆ ಸಾಮೂಹಿಕ ದಂಡನೆಗಿಂತ ಕಡಿಮೆಯೇನಲ್ಲ. ಬಾಹ್ಯ ಜಗತ್ತು, ವಿಶೇಷವಾಗಿ ನೆರವಾಗಲು ಬಯಸುವವರನ್ನು ಗಾಜಾದ ಹೊರಗೇ ನಿರ್ಬಂಧಿಸಲಾಗಿದೆ. ಅಗತ್ಯವುಳ್ಳವರಿಗೆ ಪರಿಹಾರ ಮತ್ತು ನೆರವು ಹನಿಹನಿಯಾಗಿ ತಲುಪುತ್ತಿದೆ ಮತ್ತು ಅಗತ್ಯವಿರುವ ಪ್ರಮಾಣದಲ್ಲಿ ಅಲ್ಲ. ಇದು ಅಮಾನವೀಯ ಮಾತ್ರವಲ್ಲ,ಅಂತರಾಷ್ಟ್ರೀಯ ಕಾನೂನಿಗೆ ವಿರುದ್ಧವೂ ಆಗಿದೆ. ಗಾಝಾದಲ್ಲಿಯ ಕೆಲವೇ ಜನರು ಹಿಂಸೆಯಿಂದ ಪಾರಾಗಿದ್ದಾರೆ. ಪುಟ್ಟ,ಜನನಿಬಿಡ ಗಾಝಾ ಪಟ್ಟಿಯಲ್ಲಿ ವಾಸವಿರುವ ಅವರು ಕಳೆದುಕೊಳ್ಳುವುದೇನೂ ಈಗ ಉಳಿದಿಲ್ಲ. ಈಗ ಆಕ್ರಮಿತ ಪಶ್ಚಿಮ ದಂಡೆಯಲ್ಲಿಯೂ ಯುದ್ಧದ ಕೆನ್ನಾಲಿಗೆಗಳು ಹರಡಿವೆ ಮತ್ತು ಸಂಘರ್ಷವು ಇನ್ನಷ್ಟು ವಿಸ್ತರಿಸುತ್ತಿದೆ.
ಭವಿಷ್ಯಕ್ಕಾಗಿ ನಿರೀಕ್ಷೆಗಳು ಕರಾಳವಾಗಿವೆ. ಹಿರಿಯ ಇಸ್ರೇಲಿ ಅಧಿಕಾರಿಗಳು ಗಾಝಾದ ದೊಡ್ಡ ಭಾಗಗಳನ್ನು ನಾಶಗೊಳಿಸುವ ಮತ್ತು ಜನರನ್ನು ನಿರ್ನಾಮಗೊಳಿಸುವ ಮಾತುಗಳನ್ನಾಡುತ್ತಿದ್ದಾರೆ. ಇಸ್ರೇಲ್ ರಕ್ಷಣಾ ಸಚಿವರು ಫೆಲೆಸ್ತೀನಿಗಳನ್ನು ‘ಮಾನವ ಪಶುಗಳು’ಎಂದು ಉಲ್ಲೇಖಿಸಿದ್ದಾರೆ. ಹಾಲೊಕಾಸ್ಟ್ (ಇಸ್ರೇಲಿಗಳ ಹತ್ಯಾಕಾಂಡ)ನ ಬಲಿಪಶುಗಳ ವಂಶಸ್ಥರಿಂದಲೇ ಈ ಅಮಾನವೀಯ ಭಾಷೆಯು ಹೊರಹೊಮ್ಮುತ್ತಿರುವುದು ಆಘಾತಕಾರಿಯಾಗಿದೆ.
ಮಾನವೀಯತೆಯು ಈಗ ಸತ್ವಪರೀಕ್ಷೆಗೊಳಗಾಗಿದೆ. ಇಸ್ರೇಲ್ ಮೇಲೆ ಹಮಾಸ್ನ ದಾಳಿಯಿಂದಾಗಿ ನಾವೆಲ್ಲ ಇದ್ದೂ ಇಲ್ಲದಂತಾಗಿದ್ದೆವು. ಈಗ ಇಸ್ರೇಲಿನ ಅಸಮಾನ ಮತ್ತು ಅಷ್ಟೇ ಕ್ರೂರ ದಾಳಿಯಿಂದಲೂ ನಾವೆಲ್ಲ ಇದ್ದೂ ಇಲ್ಲದಂತಾಗಿದ್ದೇವೆ. ನಮ್ಮ ಸಾಮೂಹಿಕ ಆತ್ಮಪ್ರಜ್ಞೆಯು ಜಾಗ್ರತಗೊಳ್ಳುವ ಮುನ್ನ ಇನ್ನೂ ಎಷ್ಟು ಜೀವಗಳು ಬಲಿಯಾಗಬೇಕು?
ಇಸ್ರೇಲ್ ಸರಕಾರವು ಹಮಾಸ್ನ ಕೃತ್ಯಗಳನ್ನು ಫೆಲೆಸ್ತೀನಿಗಳೊಂದಿಗೆ ಸಮೀಕರಿಸುವ ಮೂಲಕ ಘೋರ ತಪ್ಪನ್ನು ಮಾಡುತ್ತಿದೆ. ಹಮಾಸ್ನ್ನು ನಾಶಗೊಳಿಸುವ ತನ್ನ ದೃಢ ಸಂಕಲ್ಪದಲ್ಲಿ ಅದು ಗಾಝಾದ ಸಾಮಾನ್ಯ ಜನರನ್ನು ವಿವೇಚನಾರಹಿತ ಸಾವುಗಳು ಮತ್ತು ವಿನಾಶಗಳಿಗೆ ಬಲಿಯಾಗಿಸುತ್ತಿದೆ. ಫೆಲೆಸ್ತೀನಿಗಳು ಅನುಭವಿಸುತ್ತಿರುವ ಸಂಕಷ್ಟಗಳ ಸುದೀರ್ಘ ಇತಿಹಾಸವನ್ನು ಕಡೆಗಣಿಸಿದರೂ ಕೆಲವೇ ಜನರ ಕೃತ್ಯಗಳಿಗಾಗಿ ಇಡೀ ಜನಸಮೂಹವನ್ನೇ ಹೊಣೆಯಾಗಿಸುವುದು ಯಾವ ತರ್ಕ?
ಫೆಲೆಸ್ತೀನಿಗಳು ಎದುರಿಸುತ್ತಿರುವ ಸಂಕೀರ್ಣ ಸಮಸ್ಯೆಗಳು-ಬಾಹ್ಯ ಶಕ್ತಿಗಳು ಕಾರಣವಾಗಿರುವ ತೊಂದರೆಗೊಳಗಾದ ಸಾಮ್ರಾಜ್ಯಶಾಹಿ ಇತಿಹಾಸದಲ್ಲಿ ಬೇರೂರಿರುವ ಸಮಸ್ಯೆಗಳನ್ನು ಮಾತುಕತೆಗಳ ಮೂಲಕ ಬಗೆಹರಿಸಬಹುದು. ಈ ಮಾತುಕತೆಗಳು ತಮಗೆ ದಶಕಗಳಿಂದಲೂ ನಿರಾಕರಿಸಲಾಗಿರುವ ಸಾರ್ವಭೌಮ ದೇಶ ಸೇರಿದಂತೆ ಫೆಲೆಸ್ತೀನಿಗಳ ನ್ಯಾಯಸಮ್ಮತ ಆಕಾಂಕ್ಷೆಗಳನ್ನು ಮತ್ತು ಇದೇ ವೇಳೆ ಇಸ್ರೇಲಿನ ಭದ್ರತೆಯನ್ನು ಖಚಿತಪಡಿಸುವುದನ್ನೂ ಒಳಗೊಂಡಿರಬೇಕು ಎಂಬ ಪ್ರತಿಪಾದನೆ ನಿರಂತರವಾಗಿ ಪುನರಾರ್ವನೆಗೊಳ್ಳುತ್ತಲೇ ಇದೆ.
ಕಾಂಗ್ರೆಸ್ ನಿಲುವು
ನ್ಯಾಯವಿಲ್ಲದೆ ಶಾಂತಿಯಿರಲು ಸಾಧ್ಯವಿಲ್ಲ. ಒಂದೂವರೆ ದಶಕದಿಂದಲೂ ಇಸ್ರೇಲ್ನ ನಿರಂತರ ನಿರ್ಬಂಧವು ದಟ್ಟಣೆಯಿಂದ ಕೂಡಿರುವ ನಗರಗಳು ಮತ್ತು ನಿರಾಶ್ರಿತರ ಶಿಬಿರಗಳಲ್ಲಿರುವ ಇಪ್ಪತ್ತು ಲಕ್ಷ ಫೆಲೆಸ್ತೀನಿಗಳಿಗೆ ಗಾಜಾವನ್ನು ‘ಬಯಲು ಕಾರಾಗೃಹ ’ ವನ್ನಾಗಿಸಿದೆ. ಜೆರುಸಲೇಮ್ ಮತ್ತು ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಸರಕಾರದ ಬೆಂಬಲವನ್ನು ಹೊಂದಿರುವ ಇಸ್ರೇಲಿ ವಸಾಹತುಗಾರರು ದ್ವಿರಾಷ್ಟ್ರ ಪರಿಹಾರದ ಕಲ್ಪನೆಯನ್ನು ನಾಶಗೊಳಿಸುವ ಪ್ರಯತ್ನವಾಗಿ ಫೆಲೆಸ್ತೀನಿಗಳನ್ನು ತಮ್ಮದೇ ನೆಲದಿಂದ ಹೊರದಬ್ಬುವ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ನೀತಿಗಳು ಮತ್ತು ಘಟನೆಗಳ ಮೇಲೆ ಪ್ರಭಾವವನ್ನು ಬೀರುವ ಸಾಮರ್ಥ್ಯವುಳ್ಳ ದೇಶಗಳ ನೇತೃತ್ವದಲ್ಲಿ ಜಗತ್ತು ದ್ವಿರಾಷ್ಟ್ರ ಕಲ್ಪನೆಯನ್ನು ಮರುಸ್ಥಾಪಿಸುವ ಪ್ರಕ್ರಿಯೆಯನ್ನು ಆರಂಭಿಸಿ ಅದನ್ನು ಕಾರ್ಯರೂಪಕ್ಕೆ ತಂದರೆ ಮಾತ್ರ ಶಾಂತಿಯು ನೆಲೆಸುತ್ತದೆ.
ಫೆಲೆಸ್ತೀನಿಗಳು ಮತ್ತು ಇಸ್ರೇಲಿಗಳು ಶಾಂತಿಯಿಂದ ಬದುಕುವ ಹಕ್ಕುಗಳನ್ನು ಹೊಂದಿದ್ದಾರೆ ಎಂಬ ಕಾಂಗ್ರೆಸ್ ನಿಲುವು ವರ್ಷಗಳಿಂದಲೂ ಅಚಲವಾಗಿದೆ. ಇಸ್ರೇಲ್ ಜನರೊಂದಿಗೆ ನಮ್ಮ ಸ್ನೇಹವನ್ನು ನಾವು ಗೌರವಿಸುತ್ತೇವೆ. ಆದರೆ ಇದರರ್ಥ ನಾವು ನಮ್ಮ ನೆನಪುಗಳನ್ನು, ಶತಮಾನಗಳಿಂದಲೂ ತಮ್ಮ ತಾಯ್ನಾಡಾಗಿದ್ದ ನೆಲದಿಂದ ಫೆಲೆಸ್ತೀನಿಗಳನ್ನು ಬಲವಂತದಿಂದ ಹೊರಹಾಕಿದ್ದ ನೋವಿನ ಇತಿಹಾಸ ಹಾಗೂ ಘನತೆ ಮತ್ತು ಸ್ವಾಭಿಮಾನದಿಂದ ಬದುಕುವ ಅವರ ಮೂಲಭೂತ ಹಕ್ಕನ್ನು ವರ್ಷಗಳ ಕಾಲ ದಮನಿಸಿದ್ದನ್ನು ಮರೆಯುತ್ತೇವೆ ಎಂದಲ್ಲ.
ಕೆಲವು ಕುಚೇಷ್ಟೆಯ ಅಭಿಪ್ರಾಯಗಳಿಗೆ ವ್ಯತಿರಿಕ್ತವಾಗಿ, ಇಸ್ರೇಲ್ನೊಂದಿಗೆ ಶಾಂತಿಯುತ ಸಹಬಾಳ್ವೆ ನಡೆಸುವ, ಸಾರ್ವಭೌಮ ಸ್ವತಂತ್ರ, ಕಾರ್ಯಸಾಧ್ಯ ಮತ್ತು ಸುರಕ್ಷಿತ ಫೆಲೆಸ್ತೀನ್ ದೇಶಕ್ಕಾಗಿ ನೇರ ಮಾತುಕತೆಗಳನ್ನು ಬೆಂಬಲಿಸುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ನಿಲುವು ದೀರ್ಘಕಾಲಿಕ ಮತ್ತು ತತ್ತ್ವಬದ್ಧವಾಗಿದೆ. 2013, ಅ.12ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಇದೇ ನಿಲುವನ್ನು ತಳೆದಿತ್ತು.
ಇಸ್ರೇಲ್ ಗಾಝಾದ ಮೇಲೆ ಆಕ್ರಮಣವನ್ನು ಆರಂಭಿಸಿದ ದಿನವೇ ಫೆಲೆಸ್ತೀನ್ ಕುರಿತು ಭಾರತದ ಐತಿಹಾಸಿಕ ನಿಲುವು ಪುನರುಚ್ಚಾರಗೊಂಡಿದ್ದು ಗಮನಾರ್ಹವಾಗಿದೆ. ಇಸ್ರೇಲ್ನೊಂದಿಗೆ ಸಂಪೂರ್ಣ ಏಕತೆಯನ್ನು ವ್ಯಕ್ತಪಡಿಸಿದ್ದ ತನ್ನ ಮೊದಲ ಹೇಳಿಕೆಯಲ್ಲಿ ಪ್ರಧಾನಿಯವರು ಫೆಲೆಸ್ತೀನಿ ಹಕ್ಕುಗಳನ್ನು ಉಲ್ಲೇಖಿಸಿರಲಿಲ್ಲ. ಇಸ್ರೇಲ್ ಪಡೆಗಳು ಮತ್ತು ಹಮಾಸ್ ನಡುವೆ ಮಾನವೀಯ ಕದನ ವಿರಾಮಕ್ಕೆ ಕರೆ ನೀಡಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ಮೇಲಿನ ಮತದಾನದಿಂದ ಭಾರತವು ದೂರವುಳಿದಿದ್ದನ್ನು ಕಾಂಗ್ರೆಸ್ ಬಲವಾಗಿ ವಿರೋಧಿಸುತ್ತದೆ.
ಜಗತ್ತು ಕ್ರಮಕ್ಕೆ ಮುಂದಾಗಬೇಕು
ಈ ಹುಚ್ಚುತನಕ್ಕೆ ಅಂತ್ಯವನ್ನು ಹಾಡಬೇಕೆಂಬ ಧ್ವನಿಗಳು ಎರಡೂ ಕಡೆಗಳಿಂದಲೂ ಕೇಳಿ ಬರುತ್ತಿವೆ. ದಾಳಿಗಳಲ್ಲಿ ಕುಟುಂಬವನ್ನು ಮತ್ತು ಸ್ನೇಹಿತರನ್ನು ಕಳೆದುಕೊಂಡಿರುವ ಅನೇಕ ಇಸ್ರೇಲಿಗಳು ಫೆಲೆಸ್ತೀನಿಗಳೊಂದಿಗೆ ಮಾತುಕತೆಯು ಮುಂದುವರಿಯಲು ಏಕೈಕ ಮಾರ್ಗವಾಗಿದೆ ಎಂದು ಈಗಲೂ ನಂಬಿಕೊಂಡಿವೆ. ಹಿಂಸಾಚಾರವು ಹೆಚ್ಚಿನ ಸಂಕಷ್ಟಗಳಿಗಷ್ಟೇ ಕಾರಣವಾಗುತ್ತದೆ ಮತ್ತು ಸ್ವಾವಲಂಬಿ,ಸಮಾನತೆಯ ಮತ್ತು ಘನತೆಯ ಬದುಕಿನ ತಮ್ಮ ಕನಸಿನಿಂದ ತಮ್ಮನ್ನು ಇನ್ನಷ್ಟು ದೂರ ಮಾಡುತ್ತದೆ ಎಂದು ಹಲವಾರು ಫೆಲೆಸ್ತೀನಿಗಳೂ ಒಪ್ಪಿಕೊಂಡಿದ್ದಾರೆ.
ಯುದ್ಧವನ್ನು ನಿಲ್ಲಿಸಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸಬೇಕಾದ ಅನೇಕ ಪ್ರಭಾವಿ ದೇಶಗಳು ಸಂಪೂರ್ಣವಾಗಿ ಪಕ್ಷಪಾತಿಯಾಗಿರುವುದು ದುರದೃಷ್ಟಕರ. ಮಿಲಿಟರಿ ಚಟುವಟಿಕೆಗಳನ್ನು ನಿಲ್ಲಿಸಲು ಗಟ್ಟಿಯಾದ, ಅತ್ಯಂತ ಶಕ್ತಿಶಾಲಿ ಧ್ವನಿಗಳು ಕೇಳಿಬರಬೇಕಿವೆ. ಇಲ್ಲದಿದ್ದರೆ ಈ ಚಕ್ರವು ಮುಂದುವರಿಯುತ್ತದೆ ಮತ್ತು ಈ ಪ್ರದೇಶದ ಯಾರಿಗಾದರೂ ದೀರ್ಘಕಾಲ ಶಾಂತಿಯಿಂದ ಬದುಕುವುದನ್ನು ಕಷ್ಟವಾಗಿಸುತ್ತದೆ.
ಕೃಪೆ: thehindu.com