ಅಬ್ ಕೀ ಬಾರ್ 400 ಪಾರ್: ಬ್ರಿಟನ್ ಎಡಪಂಥೀಯ ಪಕ್ಷದ ಸಾಧನೆ
ಕೀರ್ ಸ್ಟಾರ್ಮರ್ ತಮ್ಮ ಪತ್ನಿ ವಿಕ್ಟೋರಿಯಾ ಜೊತೆ PC: /x.com/Keir_Starmer
ಲಂಡನ್: ಹದಿನಾಲ್ಕು ವರ್ಷಗಳಿಂದ ವಿರೋಧ ಪಕ್ಷದಲ್ಲಿದ್ದ ಎಡಪಂಥೀಯ ಒಲವಿನ ಲೇಬರ್ ಪಕ್ಷ ಭರ್ಜರಿ ಬಹುಮತದೊಂದಿಗೆ ಬ್ರಿಟನ್ ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಹೌಸ್ ಆಫ್ ಕಾಮನ್ಸ್ ನ 650 ಸ್ಥಾನಗಳಲ್ಲಿ 412 ಸ್ಥಾನಗಳನ್ನು ಗೆದ್ದುಕೊಂಡಿದೆ. ಲೇಬರ್ ಪಕ್ಷದ ಮುಖಂಡ ಸರ್ ಕೀರ್ ಸ್ಟ್ರೆಮರ್ ನೂತನ ಪ್ರಧಾನಿಯಾಗಲಿದ್ದು, "ನಮ್ಮ ಕೆಲಸ ತುರ್ತು ಇಂದಿನಿಂದಲೇ ಆರಂಭಿಸುತ್ತೇವೆ" ಎಂದು ಅವರು ಘೋಷಿಸಿದ್ದಾರೆ.
ನಿರ್ಗಮಿತ ಪ್ರಧಾನಿ ರಿಷಿ ಸುನಾಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷ ಪ್ರಸಕ್ತ ಚುನಾವಣೆಯಲ್ಲಿ 250 ಸ್ಥಾನಗಳನ್ನು ಕಳೆದುಕೊಂಡಿದ್ದು, 200 ವರ್ಷಗಳಲ್ಲೇ ಅತ್ಯಂತ ಕನಿಷ್ಠ (121) ಸ್ಥಾನಗಳನ್ನು ಗೆದ್ದಿದೆ. ಡೌನಿಂಗ್ ಸ್ಟ್ರೀಟ್ ಹೊರಗೆ ತಮ್ಮ ರಾಜೀನಾಮೆ ಭಾಷಣ ಮಾಡಿದ ಸುನಾಕ್ ದೇಶದ ಕ್ಷಮೆ ಯಾಚನೆ ಮಾಡಿದರು.
"ನಮ್ಮಿಂದ ಸಾಧ್ಯವಾದ ಎಲ್ಲ ಕಾರ್ಯಗಳನ್ನು ನಾವು ಮಾಡಿದ್ದೇವೆ. ಆದರೆ ಸರ್ಕಾರ ಬದಲಾಗಬೇಕು ಎಂಬ ಸ್ಪಷ್ಟ ಸಂದೇಶವನ್ನು ದೇಶ ನೀಡಿದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅವರ ಹಿಂದೆ ನಿಂತಿದ್ದ ಪತ್ನಿ ಅಕ್ಷತಾ ಮೂರ್ತಿ ಅವರ ಕಣ್ಣಾಲಿಗಳು ತುಂಬಿದ್ದು ಕಂಡುಬಂತು. ಚುನಾವಣೆ ಸಾಧನೆಯಲ್ಲಿ ಸುನಾಕ್ ಅವರು ಬ್ರಿಟನ್ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಯಶಸ್ಸು ಸಾಧಿಸಿದ ಪ್ರಧಾನಿ ಎಂಬ ಕೆಟ್ಟ ದಾಖಲೆಗೆ ಪಾತ್ರರಾದರು.
ಬಾಲ್ಯದಲ್ಲಿ ರಾಜ ಪ್ರಭುತ್ವವನ್ನು ವಿರೋಧಿಸಿದ್ದ ಸ್ಟ್ರೆಮರ್ (61) ಅವರು ಪತ್ನಿ ವಿಕ್ಟೋರಿಯಾ ಜತೆ ಬಕಿಂಗ್ಹ್ಯಾಮ್ ಪ್ಯಾಲೇಸ್ ಗೆ ತೆರಳಿ ರಾಜರನ್ನು ಭೇಟಿಯಾದರು. ಅಲ್ಲಿ ಲೇಬರ್ ಪಕ್ಷಕ್ಕೆ ಸರ್ಕಾರ ರಚನೆಗೆ ಆಹ್ವಾನ ನೀಡಿ, ಪ್ರಧಾನಿಯನ್ನಾಗಿ ನೇಮಕ ಮಾಡಲಾಯಿತು.