ಇರಾಕ್: ವಿವಾಹಕೂಟದಲ್ಲಿ ಆಕಸ್ಮಿಕ ಬೆಂಕಿ; ಕನಿಷ್ಠ 100 ಮಂದಿ ಸಜೀವ ದಹನ
Photo: twitter.com/SardarSattar
ನಿನೇವೆಹ್ : ವಿವಾಹ ಸಮಾರಂಭದಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಕನಿಷ್ಠ 100 ಮಂದಿ ಸಜೀವ ದಹನವಾಗಿ ಇತರ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಭಯಾನಕ ಘಟನೆ ಇರಾಕ್ ನ ನಿನೆವೆಹ್ ಪ್ರಾಂತ್ಯದ ಹಮ್ದಾನಿಯಾ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನ ಜಾವ ನಡೆದಿದೆ ಎಂದು ಇರಾಕ್ ನ ಅಧಿಕೃತ ಮಾಧ್ಯಮ ವರದಿ ಮಾಡಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ ಎಂದು ಸ್ಥಳೀಯ ಮೂಲಗಳು ಹೇಳಿವೆ.
ಈಶಾನ್ಯ ಪ್ರದೇಶದ ಬೃಹತ್ ಸಮಾರಂಭಗಳ ಹಾಲ್ ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದಲ್ಲಿ ಪಟಾಕಿ ಸಿಡಿಸುವ ವೇಳೆ ಬೆಂಕಿ ಹತ್ತಿಕೊಂಡಿತು ಎಂದು ಸ್ಥಳೀಯ ನಾಗರಿಕ ರಕ್ಷಣಾ ಸಂಸ್ಥೆ ಹೇಳಿದೆ. ಅಗ್ನಿಶಾಮಕದಳ ಸಿಬ್ಬಂದಿ ಕಟ್ಟಡವನ್ನು ಸಾಹಸದಿಂದ ಏರಿ ಘಟನೆಯಲ್ಲಿ ಉಳಿದುಕೊಂಡಿರುವವರನ್ನು ಅವಶೇಷಗಳ ಅಡಿಯಲ್ಲಿ ಹುಡುಕುತ್ತಿರುವುದು ಘಟನಾ ಸ್ಥಳದ ವಿಡಿಯೊಗಳಿಂದ ಕಂಡುಬರುತ್ತಿದೆ.
ಈ ಕಟ್ಟಡವನ್ನು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ಸಾಮಗ್ರಿಗಳಿಂದ ಕಟ್ಟಲಾಗಿದೆ ಎನ್ನುವ ಅಂಶ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದ್ದು, ಇದು ದಿಢೀರನೇ ಕುಸಿತಗೊಳ್ಳಲು ಕಾರಣಾಯಿತು ಎಂದು ಅಧಿಕೃತ ಮಾಧ್ಯಮಗಳು ವರದಿ ಮಾಡಿವೆ.
ಅಧಿಕೃತ ಹೇಳಿಕೆಯ ಪ್ರಕಾರ, ಇರಾಕ್ ನ ಕೇಂದ್ರೀಯ ಅಧಿಕಾರಿಗಳು ಮತ್ತು ಇರಾಕ್ ನ ಅರೆ-ಸ್ವಾಯತ್ತ ಖುರ್ದಿಸ್ತಾನ ಪ್ರದೇಶದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆ್ಯಂಬುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿದ್ದಾರೆ.