ಗಾಝಾಕ್ಕೆ ಸುರಕ್ಷಿತ ನೆರವು ವಿತರಣೆಗೆ ಅಗತ್ಯ ಕ್ರಮ : ವಿಶ್ವಸಂಸ್ಥೆ ಆಗ್ರಹ
ಗಡಿದಾಟು ತೆರೆದಿಡಲು ಇಸ್ರೇಲ್ ಗೆ ಒತ್ತಾಯ
Photo:X/@ndtv
ವಿಶ್ವಸಂಸ್ಥೆ: ಕಳೆದ ಗುರುವಾರ ಗಾಝಾದಲ್ಲಿ ವಿಶ್ವಸಂಸ್ಥೆಯ ನೆರವು ವಿತರಣೆಯ ಸಂದರ್ಭದಲ್ಲಿ ನಡೆದ ಮಾರಣಾಂತಿಕ ದಾಳಿಯಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿ, ಗಾಝಾದಲ್ಲಿ ನಾಗರಿಕರ ರಕ್ಷಣೆ ಮತ್ತು ನೆರವು ವಿತರಣೆಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದೆ.
ಗಾಝಾದ ನಿವಾಸಿಗಳಿಗೆ ಅಗತ್ಯದ ನೆರವು ಒದಗಿಸುವ ಟ್ರಕ್ಗಳ ಸುತ್ತ ಸೇರಿದ್ದ ಜನರನ್ನು ಗುರಿಯಾಗಿಸಿ ನಡೆದಿದ್ದ ದಾಳಿಯಲ್ಲಿ 100ಕ್ಕೂ ಅಧಿಕ ಜನರು ಹತರಾಗಿದ್ದು ಅಷ್ಟೇ ಸಂಖ್ಯೆಯ ಜನರು ಗಾಯಗೊಂಡಿದ್ದರು. ಈ ಬಗ್ಗೆ ಚರ್ಚಿಸಲು ಶನಿವಾರ ನಡೆದಿದ್ದ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದರು. ನಾಗರಿಕರು ಹಾಗೂ ನಾಗರಿಕ ಮೂಲಸೌಕರ್ಯಗಳ ರಕ್ಷಣೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುವಂತೆ ಮತ್ತು ಸಂಘರ್ಷದಲ್ಲಿ ಭಾಗಿಯಾಗಿರುವ ಎಲ್ಲಾ ಪಕ್ಷಗಳೂ ಅಂತರಾಷ್ಟ್ರೀಯ ಕಾನೂನಿನಡಿ ತಮ್ಮ ಜವಾಬ್ದಾರಿಯನ್ನು ಮರೆಯಬಾರದು. ಗಾಝಾದ ನಾಗರಿಕರು ಮೂಲ ಸೌಕರ್ಯಗಳಿಂದ ಮತ್ತು ಮಾನವೀಯ ನೆರವಿನಿಂದ ವಂಚಿತರಾಗದಂತೆ ಕ್ರಮ ವಹಿಸುವುದು ಎಲ್ಲರ ಕರ್ತವ್ಯವಾಗಿದೆ. ಗಾಝಾದಲ್ಲಿನ ಪರಿಸ್ಥಿತಿಯಿಂದಾಗಿ 2 ದಶಲಕ್ಷಕ್ಕೂ ಅಧಿಕ ಜನರು ಆಹಾರದ ಕೊರತೆ ಎದುರಿಸುವ ಅಪಾಯವಿದೆ. ಆದ್ದರಿಂದ `ತಕ್ಷಣ, ತ್ವರಿತ, ಸುರಕ್ಷಿತ, ನಿರಂತರ ಮತ್ತು ಅಡೆತಡೆಯಿಲ್ಲದ ನೆರವು ವಿತರಣೆಗೆ ಅವಕಾಶ ಮಾಡಿಕೊಡಬೇಕು ಎಂದು ಭದ್ರತಾ ಸಮಿತಿ ಸದಸ್ಯರು ಆಗ್ರಹಿಸಿದ್ದಾರೆ.
ಗಾಝಾಕ್ಕೆ ಮಾನವೀಯ ನೆರವು ಹೊತ್ತ ಟ್ರಕ್ಗಳು ಪ್ರವೇಶಿಸಲು ಗಡಿದಾಟು (ಬಾರ್ಡರ್ ಕ್ರಾಸಿಂಗ್)ಗಳನ್ನು ತೆರೆದಿಡುವಂತೆ, ಮಾನವೀಯ ನೆರವಿನ ಅಗತ್ಯಗಳನ್ನು ಪೂರೈಸಲು ಹೆಚ್ಚುವರಿ ಕ್ರಾಸಿಂಗ್ಗಳನ್ನು ತೆರೆಯುವಂತೆ ಮತ್ತು ಗಾಝಾ ಪಟ್ಟಿಯಾದ್ಯಂತ ಜನರಿಗೆ ನೆರವು ಮತ್ತು ಪರಿಹಾರ ವಸ್ತುಗಳನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ತಲುಪಿಸಲು ನೆರವಾಗುವಂತೆ ಇಸ್ರೇಲ್ ಅನ್ನು ಆಗ್ರಹಿಸಲಾಗಿದೆ.
ಈ ಮಧ್ಯೆ, ಗಾಝಾದಲ್ಲಿ ಕದನ ವಿರಾಮ ಒಪ್ಪಂದದ ಕುರಿತ ಅನಿಶ್ಚಿತತೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಫೆಲೆಸ್ತೀನಿಯನ್ ಪ್ರದೇಶದಲ್ಲಿ ಮಾನವೀಯ ದುರಂತದ ಅಪಾಯ ಹೆಚ್ಚಿದೆ ಎಂದು ನೆರವು ವಿತರಣೆ ಏಜೆನ್ಸಿಗಳು ಎಚ್ಚರಿಕೆ ನೀಡಿರುವಂತೆಯೇ ಅಮೆರಿಕ ಶನಿವಾರ ಗಾಝಾದ ನಿವಾಸಿಗಳಿಗೆ ವಿಮಾನದ ಮೂಲಕ ನೆರವು ವಿತರಣೆ ಕಾರ್ಯಾಚರಣೆಗೆ ಚಾಲನೆ ನೀಡಿದೆ. ಅಮೆರಿಕದ ಮೂರು ಸಿ-130 ಯುದ್ಧವಿಮಾನಗಳು ಜೋರ್ಡಾನ್ನ ವಾಯುಪಡೆಯ ನೆರವಿನಿಂದ 38,000ಕ್ಕೂ ಅಧಿಕ ಆಹಾರದ ಪ್ಯಾಕೆಟ್ಗಳನ್ನು ಗಾಝಾ ನಿವಾಸಿಗಳಿಗೆ ಒದಗಿಸಿದೆ ಎಂದು ವರದಿಯಾಗಿದೆ.
ಆದರೆ ಇದು ನೆರವು ವಿತರಣೆಯ ಅತ್ಯಂತ ಕೆಟ್ಟ ಮಾರ್ಗವಾಗಿದೆ ಎಂದು ತಜ್ಞರು ಟೀಕಿಸಿದ್ದಾರೆ. ` ರಸ್ತೆ ಮಾರ್ಗದ ಮೂಲಕ ನೆರವು ವಿತರಣೆಗೆ ಅಡ್ಡಿ ಎದುರಾಗಿದೆ ಎಂದಾಗ ಮಾತ್ರ ನೀವು ವಿಮಾನದ ಮೂಲಕ ನೆರವು ವಿತರಿಸುವ ವಿಧಾನದ ಮೊರೆ ಹೋಗುತ್ತೀರಿ. ಇದು ಅತ್ಯಂತ ವೆಚ್ಚದಾಯಕ ಮತ್ತು ಅಪಾಯಕಾರಿ ವಿಧಾನವಾಗಿದೆ. ವಿಮಾನದ ಮೂಲಕ ಉದುರಿಸುವ ನೆರವಿನ ಪ್ಯಾಕೆಟ್ ಅಗತ್ಯವಿರುವ ಜನರಿಗೆ ತಲುಪುವ ಗ್ಯಾರಂಟಿಯಿಲ್ಲ. ಈ ವಿಧಾನದ ಅಗತ್ಯವೇನಿದೆ ಎಂಬ ಪ್ರಶ್ನೆಗೆ `ಕಳೆದ 5 ತಿಂಗಳಿಂದ ರಸ್ತೆ ಮೂಲಕ ನೆರವು ವಿತರಣೆಗೆ ಇಸ್ರೇಲ್ ಅಡ್ಡಿಯಾಗಿದೆ ಎಂಬ ಉತ್ತರ ದೊರಕುತ್ತದೆ' ಎಂದು `ರೆಫ್ಯೂಜೀಸ್ ಇಂಟರ್ನ್ಯಾಷನಲ್'ನ ಅಧ್ಯಕ್ಷ ಜೆರೆಮಿ ಕೊನಿಂಡಿಕ್ ಹೇಳಿದ್ದಾರೆ.
6 ವಾರಗಳ ಕದನ ವಿರಾಮ ?
ಈ ಮಧ್ಯೆ, ಗಾಝಾದಲ್ಲಿ ಕದನ ವಿರಾಮ ಜಾರಿಗೊಳ್ಳುವ ನಿಟ್ಟಿನಲ್ಲಿ ಈಜಿಪ್ಟ್ನಲ್ಲಿ ರವಿವಾರ ಮಾತುಕತೆ ಮುಂದುವರಿದಿದ್ದು `6 ವಾರಗಳ ಕದನ ವಿರಾಮ' ಮಾತುಕತೆಯ ಪ್ರಮುಖ ಅಜೆಂಡಾವಾಗಿದೆ ಎಂದು ಮೂಲಗಳು ಹೇಳಿವೆ. ಈಜಿಪ್ಟ್ ಮತ್ತು ಖತರ್ನ ಮಧ್ಯಸ್ಥಿಕೆಯಲ್ಲಿ ನಡೆಯುವ ಮಾತುಕತೆಯಲ್ಲಿ ಇಸ್ರೇಲ್ ಮತ್ತು ಹಮಾಸ್ನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.