ಎಐ ನಿರ್ವಹಣೆಗೆ ಜಾಗತಿಕ ಮಾನದಂಡ ರೂಪಿಸಬೇಕಾಗಿದೆ: ಪ್ಯಾರಿಸ್ ಕೃತಕ ಬುದ್ಧಿಮತ್ತೆ ಶೃಂಗಸಭೆಯಲ್ಲಿ ಮೋದಿ ಕರೆ

Photo Credit | X/@narendramodi
ಪ್ಯಾರಿಸ್: ಸಮಗ್ರ ಮೌಲ್ಯಗಳನ್ನು ಎತ್ತಿಹಿಡಿಯುವ ಹಾಗೂ ಅಪಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೃತಕಬುದ್ಧಿಮತ್ತೆ (ಎಐ)ಗೆ ಸೂಕ್ತ ನಿರ್ವಹಣಾ ವ್ಯವಸ್ಥೆ— ಹಾಗೂ ಮಾನದಂಡವನ್ನು ರೂಪಿಸಬೇಕಾಗಿದೆ. ಇದಕ್ಕಾಗಿ ಜಾಗತಿಕ ಮಟ್ಟದಲ್ಲಿ ಸಾಮೂಹಿಕ ಪ್ರಯತ್ನಗಳು ನಡೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಕರೆ ನೀಡಿದ್ದಾರೆ.
ಫ್ರಾನ್ಸ್ನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕ್ರಿಯಾ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಎಐ ತಂತ್ರಜ್ಞಾನವು ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಭದ್ರತಾ ಕ್ಷೇತ್ರಗಳಲ್ಲಿ ಭಾರೀ ಪರಿವರ್ತನೆಯನ್ನು ತರುತ್ತಿದೆ. ಈ ಶತಮಾನದಲ್ಲಿ ಕೃತಕ ಬುದ್ಧಿಮತ್ತೆಯು ಮಾನವಕುಲಕ್ಕೊಂದು ಹೊಸ ಸಂಹಿತೆಯೊಂದನ್ನು ಬರೆಯಲಿದೆಯೆಂದು ಹೇಳಿದರು.
ಕೃತಕ ಬುದ್ಧಿಮತ್ತೆಯು ಅಭೂತಪೂರ್ವ ಗಾತ್ರ ಹಾಗೂ ವೇಗದಲ್ಲಿ ವಿಕಸನ ಹೊಂದುತ್ತಿದೆ ಮತ್ತು ಅಷ್ಟೇ ವೇಗದಲ್ಲಿ ಈ ತಂತ್ರಜ್ಞಾನವು ಅಳವಡಿಕೆಯಾಗುತ್ತಿದೆ.ಎಐ ತಂತ್ರಜ್ಞಾನವು ಉತ್ತಮ ಭವಿಷ್ಯಕ್ಕೆ ಹಾಗೂ ಎಲ್ಲರಿಗೂ ಬೇಕಾಗಿದ್ದುದಾಗಿದೆಯೆಂದು ಭಾವಿಸಿ ಭಾರತವು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ತನ್ನ ಪರಿಣತಿಯನ್ನು ಇತರ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲು ಸಿದ್ಧವಿದೆಯೆಂದು ಪ್ರಧಾನಿ ಹೇಳಿದರು.
‘‘ಕೃತಕ ಬುದ್ಧಿಮತ್ತೆಯು ಈಗಾಗಲೇ ನಮ್ಮ ಆರ್ಥಿಕತೆ , ಭದ್ರತೆ ಅಷ್ಟೇ ಏಕೆ ನಮ್ಮ ಸಮಾಜಕ್ಕೆ ಹೊಸರೂಪವನ್ನು ನೀಡುತ್ತಿದೆ. ಎಐ ತಂತ್ರಜ್ಞಾನದಲ್ಲಿ ಪಾರದರ್ಶಕತೆಯನ್ನು ತರಲು ಮತ್ತು ವಿಶ್ವಸನೀಯತೆಯನ್ನು ತರುವಂತಹ ವ್ಯವಸ್ಥೆಯನ್ನು ನಾವು ಅಭಿವೃದ್ಧಿಪಡಿಸಬೇಕಾಗಿದೆ. ಯಾವುದೇ ಪಕ್ಷಪಾತವಿಲ್ಲದೆ ಗುಣಮಟ್ಟದ ಎಐ ಡೇಟಾ ಕೇಂದ್ರಗಳನ್ನು ನಿರ್ಮಿಸಬೇಕಾಗಿದೆ. ತಂತ್ರಜ್ಞಾನವನ್ನು ಪ್ರಜಾತಾಂತ್ರಿಕಗೊಳಿಸಬೇಕಾಗಿದೆ. ಕೃತಕ ಬುದ್ಧಿಮತ್ತೆಯ ಸಕಾರಾತ್ಮಕ ಸಾಮರ್ಥ್ಯವು ಖಂಡಿತವಾಗಿಯೂ ಅದ್ಬುತವಾದುದಾಗಿದೆ. ಅದರೂ ಅದರಲ್ಲಿ ಹಲವಾರು ಪೂರ್ವಾಗ್ರಹಗಳಿವೆ. ಈ ಬಗ್ಗೆ ನಾವು ಜಾಗರೂಕತೆಯಿಂದ ಯೋಚಿಸಬೇಕಾಗಿದೆ ಎಂದರು.
ಕೃತಕಬುದ್ಧಿಮತ್ತೆಯ ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಹಾಗೂ ಅದಕ್ಕೆ ತನ್ನನ್ನು ಆಹ್ವಾನಿಸಿದ್ದಕ್ಕಾಗಿ ಸ್ನೇಹಿತ ಫ್ರಾನ್ಸ್ ಅಧ್ಯಕ್ಷ ಮಾಕ್ರೋನ್ ಅವರಿಗೆ ಕೃತಡ್ಞನಾಗಿರುವುದಾಗಿ ಮೋದಿ ಹೇಳಿದರು.
ಪ್ರಧಾನಿ ಭಾಷಣದ ಮುಖ್ಯಾಂಶಗಳು
*ಎಐ ತಂತ್ರಜ್ಞಾನದಲ್ಲಿ ಭಾರತವು ಅಪಾರ ಪ್ರತಿಭಾ ಸಂಪನ್ಮೂಲವನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ತನ್ನ ಅನುಭವ ಮತ್ತು ಪರಿಣತಿಯನ್ನು ವಿಶ್ವದ ಜೊತೆ ಹಂಚಿಕೊಳ್ಳಲು ಅದು ಸಿದ್ಧವಿದೆಯೆಂದು ಅವರು ಹೇಳಿದರು.
*ಎಐ ತಂತ್ರಜ್ಞಾನದಿಂದ ಅಪಾರ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗುವುದೆಂಬ ಆತಂಕವನ್ನು ಉಲ್ಲೇಖಿಸಿದ ಮೋದಿ ತಂತ್ರಜ್ಞಾನದ ಕಾರಣದಿಂದಾಗಿ ಉದ್ಯೋಗಗಳು ಕಣ್ಮರೆಯಾಗಿಲ್ಲವೆಂಬುದನ್ನು ಇತಿಹಾಸವು ತೋರಿಸಿದೆ. ಆದರೆ ಎಐನಿಂದಾಗಿ ಉದ್ಯೋಗಗಳ ಸ್ವರೂಪ ಬದಲಾಗಲಿದೆ ಮತ್ತು ನೂತನ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದರು.