ಗಾಝಾ| ಇಸ್ರೇಲ್ ದಾಳಿಯಲ್ಲಿ ಅಲ್ ಜಝೀರಾದ ಪತ್ರಕರ್ತ, ಛಾಯಾಗ್ರಾಹಕ ಮೃತ್ಯು
ಇಸ್ಮಾಯಿಲ್ ಅಲ್-ಘೌಲ್ / ರಮಿ ಅಲ್-ರಿಫಿ (Credit: aljazeera.com)
ಗಾಝಾ: ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ ಅಲ್ ಜಝೀರಾದ ಪತ್ರಕರ್ತ ಇಸ್ಮಾಯಿಲ್ ಅಲ್-ಘೌಲ್ ಹಾಗೂ ಅವರ ಛಾಯಾಗ್ರಾಹಕ ರಮಿ ಅಲ್-ರಿಫಿ ಮೃತಪಟ್ಟಿದ್ದಾರೆ ಎಂದು Al Jazeera ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ, ಗಾಝಾ ಪಟ್ಟಣದ ಪಶ್ಚಿಮದಲ್ಲಿರುವ ಶತಿ ನಿರಾಶ್ರಿತರ ಶಿಬಿರದ ಮೇಲೆ ಬುಧವಾರ ಇಸ್ರೇಲ್ ವೈಮಾನಿಕ ದಾಳಿ ನಡೆಸಿದಾಗ, ಈ ಇಬ್ಬರು ವರದಿಗಾರರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಬುಧವಾರ ಇರಾನ್ ರಾಜಧಾನಿಯಾದ ಟೆಹ್ರಾನ್ ನಲ್ಲಿ ಕ್ಷಿಪಣಿ ದಾಳಿಯಲ್ಲಿ ಹತ್ಯೆಗೀಡಾಗಿದ್ದ ಇಸ್ಮಾಯಿಲ್ ಹನಿಯೆಹ್ ಅವರ ಗಾಝಾ ನಿವಾಸದ ಬಳಿಯ ಪ್ರದೇಶದಲ್ಲಿ ಈ ಇಬ್ಬರು ವರದಿ ಮಾಡಲು ಮೊಕ್ಕಾಂ ಹೂಡಿದ್ದರು ಎನ್ನಲಾಗಿದೆ. ಈ ದಾಳಿಯನ್ನು ಇಸ್ರೇಲ್ ನಡೆಸಿದೆ ಎಂದು ಆರೋಪಿಸಲಾಗಿದೆ.
ಗಾಝಾ ಮೇಲಿನ ತನ್ನ ಸುದೀರ್ಘ 10 ತಿಂಗಳ ಯುದ್ಧದುದ್ದಕ್ಕೂ ಪತ್ರಕರ್ತರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸುತ್ತಲೇ ಬರುತ್ತಿರುವ ಇಸ್ರೇಲ್, ಈ ಸಾವುಗಳ ಕುರಿತು ಯಾವುದೇ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ. ಇಸ್ರೇಲ್ ದಾಳಿಯಲ್ಲಿ ಇಲ್ಲಿಯವರೆಗೆ ಕನಿಷ್ಠ ಪಕ್ಷ 39,445 ಮಂದಿ ಮೃತಪಟ್ಟಿದ್ದು, ಈ ಪೈಕಿ ಬಹುತೇಕರು ಮಹಿಳೆಯರು ಹಾಗೂ ಮಕ್ಕಳಾಗಿದ್ದಾರೆ.
ತನ್ನ ಇಬ್ಬರು ಪತ್ರಕರ್ತರ ಹತ್ಯೆಯನ್ನು ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿರುವ ಅಲ್ ಜಝೀರಾ ಮೀಡಿಯಾ ನೆಟ್ ವರ್ಕ್, ಈ ಹತ್ಯೆಗಳನ್ನು ಇಸ್ರೇಲ್ ಸೇನೆಯು ಗುರಿಯಾಗಿಸಿಕೊಂಡು ನಡೆಸಿರುವ ಹತ್ಯೆಗಳು ಎಂದು ಆರೋಪಿಸಿದ್ದು, “ಈ ಯುದ್ಧಾಪರಾಧಗಳ ಸಂಚುಕೋರರನ್ನು ಶಿಕ್ಷೆಗೊಳಪಡಿಸಲು ಎಲ್ಲ ರೀತಿಯ ಕಾನೂನು ಕ್ರಮಗಳೊಂದಿಗೆ ಮುಂದುವರಿಯಲಾಗುವುದು” ಎಂದು ಹೇಳಿದೆ.