ಶಾಂತಿಯ ಹಕ್ಕು ಖಾತರಿಪಡಿಸಲು ಎಲ್ಲಾ ದೇಶಗಳೂ ಬದ್ಧವಾಗಿರಬೇಕು : ವಿಶ್ವಸಂಸ್ಥೆ ಆಗ್ರಹ
Photo : PTI
ವಿಶ್ವಸಂಸ್ಥೆ : ದಶಕದಲ್ಲೇ ಉನ್ನತ ಮಟ್ಟದ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಬಲಿಷ್ಟ ರಾಷ್ಟ್ರಗಳ ನಡುವಿನ ಶಕ್ತಿ ಪೈಪೋಟಿಯಿಂದಾಗಿ ಜಗತ್ತು ಬಹುಧ್ರುವೀಯ ಯುಗದತ್ತ ಸಾಗುತ್ತಿದೆ. ಶೀತಲ ಸಮರೋತ್ತರದ ಅವಧಿ ಮುಗಿದಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಹೇಳಿದ್ದಾರೆ.
ಈ ವಿಭಜನೆಗಳು `ಜಾಗತಿಕ ಸವಾಲುಗಳನ್ನು ಪರಿಹರಿಸಲು ಎಲ್ಲಾ ದೇಶಗಳು ಒಟ್ಟಾಗಿ ಕೆಲಸ ಮಾಡುತ್ತವೆ' ಎಂಬ ವಿಶ್ವಸಂಸ್ಥೆಯ ಮೂಲಾಧಾರಗಳನ್ನು ದುರ್ಬಲಗೊಳಿಸಿದೆ ಎಂದವರು ಎಚ್ಚರಿಸಿದ್ದಾರೆ.
ಹೆಚ್ಚು ಸಂಕೀರ್ಣ ಮತ್ತು ಮಾರಣಾಂತಿಕ ಸಂಘರ್ಷಗಳು, ಸಂಭಾವ್ಯ ಪರಮಾಣು ಯುದ್ಧದ ಬಗ್ಗೆ ಮತ್ತೆ ಉದಯಿಸುತ್ತಿರುವ ಆತಂಕ, ದೇಶಗಳೊಳಗೆ ಮತ್ತು ನಡುವೆ ಬೆಳೆಯುತ್ತಿರುವ ಅಸಮಾನತೆ, ವ್ಯಾಪಕವಾಗುತ್ತಿರುವ ಭಯೋತ್ಪಾದನೆ, ಹವಾಮಾನ ತುರ್ತುಸ್ಥಿತಿ, ಸಾರ್ವಜನಿಕ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ಅಪನಂಬಿಕೆ, ಮಹಿಳಾ ಹಕ್ಕುಗಳ ನಿರ್ಬಂಧ ಸೇರಿದಂತೆ ಜಾಗತಿಕವಾಗಿ ಮಾನವ ಹಕ್ಕುಗಳ ಮೇಲೆ ಆಗುತ್ತಿರುವ ದಾಳಿ ಇತ್ಯಾದಿ ಸವಾಲುಗಳನ್ನು ಗುಟೆರಸ್ ಗುರುತಿಸಿದರು. ಉಕ್ರೇನ್ ಮೇಲಿನ ರಶ್ಯದ ಆಕ್ರಮಣ ಈ ಸವಾಲುಗಳಿಗೆ ಪರಿಹಾರ ರೂಪಿಸುವುದನ್ನು ಇನ್ನಷ್ಟು ಕಠಿಣಗೊಳಿಸಿದೆ. ಎಲ್ಲಾ ದೇಶಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವ ವಿಶ್ವಸಂಸ್ಥೆಯ ಸನದಿಗೆ (ಚಾರ್ಟರ್) ಎಲ್ಲಾ ದೇಶಗಳೂ ಬದ್ಧವಾಗಿದ್ದರೆ `ಶಾಂತಿಯ ಹಕ್ಕು' ಖಚಿತವಾಗಲಿದೆ ಎಂದು ಗುಟೆರಸ್ ಹೇಳಿದ್ದಾರೆ.
ಸೋವಿಯತ್ ಒಕ್ಕೂಟದ ವಿಭಜನೆ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ಜತೆಗಿನ ಶೀತಲ ಯುದ್ಧ ಅಂತ್ಯಗೊಂಡ ಬಳಿಕ 1992ರಲ್ಲಿ ಶಾಂತಿಗಾಗಿ ಮೂಲಸೂತ್ರದ ಕಾರ್ಯಸೂಚಿಯನ್ನು ಅಂದಿನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬೌಟ್ರೋಸ್ -ಘಾಲಿ ಪ್ರಸ್ತುತಪಡಿಸಿದರು. ಮಹಾಶಕ್ತಿಗಳ ನಡುವಿನ ಹಗೆತನ ಮತ್ತು ಅಪನಂಬಿಕೆಯ ಅಂತ್ಯವನ್ನು ಇದು ಸ್ವಾಗತಿಸಿತು ಮತ್ತು ರಾಜತಾಂತ್ರಿಕತೆ, ಶಾಂತಿಪಾಲನೆ ಮತ್ತು ಶಾಂತಿನಿರ್ಮಾಣದ ಕಾರ್ಯವನ್ನು ವಿಶ್ವಸಂಸ್ಥೆ ಯಾವರೀತಿ ಹೆಚ್ಚಿಸಬಹುದು ಎಂಬುದನ್ನು ಇದು ವಿವರಿಸಿದೆ.
ಕಾರ್ಯಕರ್ತ, ಮಧ್ಯಸ್ಥಿಕೆದಾರ ವಿಶ್ವಸಂಸ್ಥೆಯ ಈ ದೃಷ್ಟಿಕೋನ ಕಳೆದ ಮೂರು ದಶಕಗಳಿಂದ ಅದರ ಆಧಾರವಾಗಿರುವ ನೀತಿಯಾಗಿದೆ ಎಂದ ಅಂತರಾಷ್ಟ್ರೀಯ ಬಿಕ್ಕಟ್ಟಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ನಿರ್ದೇಶಕ ರಿಚರ್ಡ್ ಗೊವಾನ್ , ಗುಟೆರಸ್ ಅವರ ಶಾಂತಿಗಾಗಿ ಹೊಸ ಅಜೆಂಡಾ ಬಹುಪಕ್ಷೀಯತೆಯ ಪ್ರೇರಕ ಶಕ್ತಿ ಮತ್ತು ರಾಜತಾಂತ್ರಿಕತೆಯಾಗಿರಬೇಕು ಎಂದರು. ಹೊಸ ಕಾರ್ಯಸೂಚಿಯು ಸದಸ್ಯ ದೇಶಗಳು ಏನನ್ನು ಮಾಡಬೇಕಿದೆ ಎಂಬುದರ ಮೇಲೆ ಕೇಂದ್ರೀಕೃತವಾಗಿದೆ. ಹೆಚ್ಚುತ್ತಿರುವ ವಿಘಟಿತ, ಅಸಮಾನ ವ್ಯವಸ್ಥೆಯ ಜಗತ್ತಿನಲ್ಲಿ ಬಹುಪಕ್ಷೀಯ ಸಹಕಾರದ ಮೇಲೆ ಕೇಂದ್ರೀಕೃತವಾಗಿದೆ ಎಂದು ಗೊವಾನ್ ಹೇಳಿದ್ದಾರೆ.
ಶಾಂತಿಗಾಗಿ ಹೊಸ ಕಾರ್ಯಸೂಚಿ
ವಿಶ್ವಸಂಸ್ಥೆಯ 193 ಸದಸ್ಯ ದೇಶಗಳ ರಾಜತಾಂತ್ರಿಕರಿಗೆ ತನ್ನ `ಶಾಂತಿಗಾಗಿ ಹೊಸ ಕಾರ್ಯಸೂಚಿ'ಯನ್ನು ವಿವರಿಸುವ ಕಾರ್ಯನೀತಿಯಲ್ಲಿ ಗುಟೆರಸ್ ಪ್ರಪಂಚದ ಕಠೋರ ನೋಟವನ್ನು ಪ್ರಸ್ತುತಪಡಿಸಿದರು. ಎದುರಾಗಿರುವ ಹೊಸ ಬೆದರಿಕೆಗಳನ್ನು ಪರಿಹರಿಸಲು ಇದು ವಿಶ್ವಸಂಸ್ಥೆಯ ಪ್ರಯತ್ನವಾಗಿದೆ ಎಂದವರು ಹೇಳಿದ್ದಾರೆ.
ಬಹುಪಕ್ಷೀಯತೆಯನ್ನು ಸಂರಕ್ಷಿಸುವ ನಿರ್ಣಾಯಕ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಗುಟೆರಸ್, ಸಮಸ್ಯೆಯ ಭಾರದಿಂದ ನಲುಗಿರುವ ಜಗತ್ತಿನಲ್ಲಿ ನಮ್ಮ ಸಾರ್ವತ್ರಿಕ ಸಂಸ್ಥೆಯನ್ನು ರಕ್ಷಿಸುವುದು ದೇಶಗಳ ಮೇಲಿನ ಹೊಣೆಗಾರಿಕೆಯಾಗಿದೆ. ವಿಭಜನೆ, ಪ್ರಹಾರ ನಮ್ಮನ್ನು ಆವರಿಸಿದ ಬಳಿಕ ಕಾರ್ಯನಿರ್ವಹಿಸುವುದಲ್ಲ, ಈಗಲೇ ಕಾರ್ಯ ನಿರ್ವಹಿಸುವ ಸಮಯ ಬಂದಿದೆ' ಎಂದು ಹೇಳಿದ್ದಾರೆ.